ಜನಹಿತಕ್ಕೆ ಪೂರಕವಾಗಲಿ ಬಜೆಟ್: ಪ್ರಮುಖ ವಲಯಗಳಿಗೆ ಅನುದಾನ ಕಡಿಮೆಯಾಗದಿರಲಿ

xcvxcvxcvxcv
Published on

ವಿತ್ತ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. 2021ರ ಜುಲೈನಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬೊಮ್ಮಾಯಿ ಅವರು ಕರೊನಾ ಸಂಕಷ್ಟ ಕಾಲದಲ್ಲಿ ಸಮತೋಲಿತ ಆಯವ್ಯಯವನ್ನು ಮಂಡಿಸುವರೇ? ಜನಸಾಮಾನ್ಯರ ನಿರೀಕ್ಷೆಗಳಿಗೆ ಸ್ಪಂದಿಸುವರೆ? ಎಂಬ ನಿರೀಕ್ಷೆ ಗರಿಗೆದರಿದೆ. ಬಜೆಟ್ ಪೂರ್ವಭಾವಿಯಾಗಿ ಇಲಾಖಾವಾರು ಸಭೆ ನಡೆಸಿರುವ ಅವರು ಆಯಾ ಇಲಾಖೆಯ ಅಗತ್ಯಗಳು, ಕುಂದುಕೊರತೆಗಳನ್ನು ಪರಿಶೀಲಿಸಿದ್ದಾರೆ. ಕೋವಿಡ್ ಸಂಬಂಧಿತ ನಿರ್ಬಂಧಗಳು ಸಡಿಲಿಕೆಯಾಗಿರುವ ಪರಿಣಾಮ ಇತ್ತೀಚಿನ ಕೆಲ ತಿಂಗಳುಗಳಲ್ಲಿ ಆರ್ಥಿಕ ಚಟುವಟಿಕೆಗಳು ವೇಗ ಪಡೆದಿವೆಯಾದರೂ, ಕಳೆದ ಎರಡು ವರ್ಷಗಳಲ್ಲಿ ಕರೊನಾ ತಂದೊಡ್ಡಿದ ಸಂಕಷ್ಟದಿಂದ ಆದ ನಷ್ಟ ಅಷ್ಟಿಷ್ಟಲ್ಲ. ಹಾಗಾಗಿ, ಸಣ್ಣ, ಮಧ್ಯಮ, ಬೃಹತ್ ಕೈಗಾರಿಕೆ ಸೇರಿದಂತೆ ಎಲ್ಲ ರಂಗಗಳ ಪುನಶ್ಚೇತನಕ್ಕೆ ಹಾದಿ ಕಂಡುಕೊಳ್ಳಬೇಕಿದೆ.

ಆರೋಗ್ಯ ವ್ಯವಸ್ಥೆಯನ್ನು ಸದಾ ಸನ್ನದ್ಧವಾಗಿ ಇರಿಸಿಕೊಳ್ಳುವ ಪಾಠವನ್ನು ಕರೊನಾ ಕಾಲ ಕಲಿಸಿದೆ. ಇಂದಿಗೂ, ಗ್ರಾಮೀಣ ಪ್ರದೇಶ ಹಾಗೂ ಹಲವು ತಾಲೂಕು ಕೇಂದ್ರಗಳು ಆರೋಗ್ಯದ ಮೂಲಸೌಕರ್ಯಕ್ಕಾಗಿ ಪರಿತಪಿಸುತ್ತಿರುವುದು ವಾಸ್ತವ. ಈ ನಿಟ್ಟಿನಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಶೈಕ್ಷಣಿಕ ವಲಯವು ಹಲವು ಸ್ಥಿತ್ಯಂತರಗಳನ್ನು ಕಂಡಿದೆ. ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಹಲವು ಕೊರತೆಗಳನ್ನು ನಿವಾರಿಸಬೇಕಿದೆ. ರೈತರ ಆದಾಯ ದ್ವಿಗುಣಗೊಳಿಸುವ ಸವಾಲೂ ಇದೆ. ಕೃಷಿಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗದೆ ರೈತರು ಪರದಾಡುತ್ತಿದ್ದು, ಕೃಷಿ ವೆಚ್ಚವೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಉತ್ತಮ ಮಾರುಕಟ್ಟೆ ವ್ಯವಸ್ಥೆ, ಸ್ಪರ್ಧಾತ್ಮಕ ಬೆಲೆ ಕಲ್ಪಿಸುವ ಮೂಲಕ ಕೃಷಿಕರ ಶ್ರಮಕ್ಕೆ ನ್ಯಾಯ ಒದಗಿಸುವುದು ಅಗತ್ಯವಾಗಿದೆ. ಹವಾಮಾನ ಬದಲಾವಣೆಯಿಂದ ಪ್ರಾಕೃತಿಕ ವಿಕೋಪಗಳು ಹೆಚ್ಚಿದ್ದು, ಕಳೆದ ಐದು ವರ್ಷಗಳಲ್ಲಂತೂ ಅಪಾರ ಹಾನಿಯಾಗಿದೆ. ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ತಡೆಯುವುದೇ ಇದಕ್ಕೆ ಪರಿಹಾರ. ಹಸಿರು ಆಯವ್ಯಯದ ನಿಟ್ಟಿನಲ್ಲಿ ಚಿಂತನೆ ನಡೆಸಿರುವ ಸರ್ಕಾರ ಇದರಡಿ ಕೈಗೊಳ್ಳಲಾಗುವ ಯೋಜನೆ, ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕಿದೆ.

ಜನಪ್ರಿಯ ಘೋಷಣೆಗಳ ಗೊಡವೆಗೆ ಹೋಗದೆ ವಾಸ್ತವದ ನೆಲೆಗಟ್ಟಿನಲ್ಲಿ ಮತ್ತು ರಾಜ್ಯದ ವಿತ್ತ ವ್ಯವಸ್ಥೆಗೆ ಚೇತರಿಕೆ ನೀಡುವಂಥ ಬಜೆಟ್ ಮಂಡನೆಯಾಗಬೇಕು. ಯಾವ ವಲಯವನ್ನೂ ನಿರ್ಲಕ್ಷಿಸಬಾರದು. ಪ್ರಾದೇಶಿಕ ಅಸಮತೋಲನಕ್ಕೆ ಅವಕಾಶವಾಗಬಾರದು. ಮೂಲಸೌಕರ್ಯ ವೃದ್ಧಿಗೆ ಆದ್ಯತೆ ಸಿಗಬೇಕು. ಬಂಡವಾಳ ಹೂಡಿಕೆಯನ್ನು ಆಕರ್ಷಿಸುವುದು, ಸಾರ್ವಜನಿಕ-ಸರ್ಕಾರಿ ಸಹಭಾಗಿತ್ವ (ಪಿಪಿಪಿ)ದಂಥ ಕ್ರಮಗಳ ನಿಟ್ಟಿನಲ್ಲಿ ಸರ್ಕಾರದ ನಡೆ ಹೇಗಿರಲಿದೆ ಎಂಬುದು ಕುತೂಹಲಕರ. ಒಟ್ಟಾರೆ, ಈ ಬಾರಿಯ ಬಜೆಟ್ ಮೇಲೆ ಜನತೆಯ ನಿರೀಕ್ಷೆ ಹೆಚ್ಚಿವೆ. ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂಥ, ಭವಿಷ್ಯದ ಅಭಿವೃದ್ಧಿ ಪಥಕ್ಕೆ ಶಕ್ತಿ ತುಂಬಬಲ್ಲ ಸರ್ವರ್ಸ³ ಆಯವ್ಯಯ ಮಂಡನೆಯಾಗಲಿ ಎಂಬುದೇ ಆಶಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net