

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸದ ಕ್ಷೇತ್ರಗಳಲ್ಲಿ ಬಿಜೆಪಿಗೆ ಬೆಂಬಲಿಸುತ್ತದೆ ಎಂದು ಹೇಳಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತೂ ಒಂದು ಹೆಜ್ಜೆ ಮುಂದಿಟ್ಟು, ನೇರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಆದರೆ ಬಿಜೆಪಿಗೆ ಕಷ್ಟಕರ ಎನಿಸಿರುವ ಕ್ಷೇತ್ರಗಳಲ್ಲಿ ಜೆಡಿಎಸ್ ಸಹಕಾರವನ್ನು ಮಾತ್ರ ಬಿಎಸ್ವೈ ಕೋರಿದ್ದಾರೆ. ಇದು, ಹೊಂದಾಣಿಕೆಯ ಮೊದಲ ಹೆಜ್ಜೆಯೋ ಅಥವಾ ಕೆಲವು ಕ್ಷೇತ್ರಗಳ ಅನಧಿಕೃತ ಬೆಂಬಲಕ್ಕೆ ಅಧಿಕೃತ ಮುದ್ರೆಯೋ? ಎನ್ನುವುದು ನಿಚ್ಚಳವಾಗಿಲ್ಲ. ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭೇಟಿ ನಂತರ ಪರೋಕ್ಷವಾಗಿ ಹೊಂದಾಣಿಕೆ ಸುಳಿವು ನೀಡಿದ್ದರು. ಬಿಎಸ್ವೈ-ಎಚ್ಡಿಕೆ ಹಂತದಲ್ಲಿ ಈ ಕುರಿತು ಮಾತುಕತೆ ನಡೆಯಲಿದೆ ಎಂಬ ಮಾಹಿತಿ ಬಿಜೆಪಿ ಮೂಲಗಳಿಂದ ಹೊರ ಬಿದ್ದಿದೆ. ಜೆಡಿಎಸ್ ಸ್ಪರ್ಧಿಸದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಸಹಕಾರ ನೀಡಬೇಕು ಎಂದು ವಿನಂತಿ ಮಾಡಿದ್ದಾರೆಯೇ ಹೊರತು, ಮೈತ್ರಿ ಪ್ರಸ್ತಾಪವಲ್ಲವೆಂದೂ ಸ್ಪಷ್ಟಪಡಿಸಿವೆ.
ಸುಧಾಕರ್ ಮುನಿರತ್ನ ನಿರಾಸಕ್ತಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಸಂಸದ ಎಸ್.ಮುನಿಸ್ವಾಮಿ ಹಾಗೂ ಸಚಿವದ್ವಯರಾದ ಡಾ.ಸುಧಾಕರ್, ಮುನಿರತ್ನ ನಯವಾಗಿ ನಿರಾಕರಿಸಿ ದ್ದಾರೆ. ಪಕ್ಷ ಬಲವರ್ಧನೆ, 2023ರ ಚುನಾವಣೆಯಲ್ಲಿ ಉತ್ತಮ ಸಾಧನೆಗಾಗಿ ಪ್ರತ್ಯೇಕ ಹೋರಾಟ ಅನಿವಾರ್ಯ, ಜೆಡಿಎಸ್ ಮುಖಂಡರು ನಾಮಪತ್ರ ಸಲ್ಲಿಕೆಗೆ ಮುಂಚೆ ಮಾತುಕತೆ ನಡೆಸಿದ್ದರೆ ಹೊಂದಾಣಿಕೆ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಬಹುದಿತ್ತು. ನಮ್ಮ ಅಭ್ಯರ್ಥಿ ಕಳೆದ ಆರು ತಿಂಗಳಿಂದಲೇ ಪ್ರಚಾರ ಆರಂಭಿಸಿದ್ದಾರೆ, ಎರಡೂ ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಮಾಡಿ ಮತದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ. ಕಡೇ ಗಳಿಗೆಯಲ್ಲಿ ನಿವೃತ್ತಿ ಘೊಷಣೆ ಮಾಡಿದಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಮುಂದೆ ನಮಗೆ ಕಾರ್ಯಕರ್ತರು ಸಿಗದಂತಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಬಳಿ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಇಂದು ಕುಮಾರಸ್ವಾಮಿ ನಿರ್ಧಾರ ಪ್ರಕಟ ಸಾಧ್ಯತೆ: ಮೈಸೂರು: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಸುಳಿವು ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸೋಮವಾರ ಸ್ಪಷ್ಟ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ನನ್ನ ನಡುವೆ ವೈಯಕ್ತಿಕ ಮೈತ್ರಿ ಆಗಿದೆ. ಈವರೆಗೆ ಯಡಿಯೂರಪ್ಪ ಮಾತ್ರ ನನಗೆ ಕರೆ ಮಾಡಿ ಬೆಂಬಲ ಕೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ವೈಯಕ್ತಿಕ ಹೇಳಿಕೆ ನೀಡಿದ್ದಾರೆ. ಆದರೆ, ಕಾಂಗ್ರೆಸ್ ಬಹಿರಂಗವಾಗಿಯೇ ನಮಗೆ ಯಾರ ಬೆಂಬಲ ಬೇಡ ಎಂದಿದ್ದಾರೆ. ಬೇಡ ಎಂದವರಿಗೆ ನಾವೇ ಹೋಗಿ ಬೆಂಬಲ ಕೊಡಲು ಸಾಧ್ಯವಿಲ್ಲ. ಈ ಎಲ್ಲ ಅಂಶ ಮುಂದಿಟ್ಟುಕೊಂಡು ಸೋಮವಾರ ಜೆಡಿಎಸ್ ಬೆಂಬಲದ ತೀರ್ಮಾನ ಮಾಡಲಾಗುವುದು ಎಂದು ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
ಕೋಲಾರ: ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಎಚ್.ಡಿ. ಕುಮಾರಸ್ವಾಮಿ ಟಾಸ್ಕ್ ನೀಡಿದ್ದು, ಒಂದು ವೇಳೆ ಟಾಸ್ಕ್ ಪೂರೈಸದಿದ್ದಲ್ಲಿ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗದು ಎಂದು ಟಿಕೆಟ್ ಆಕಾಂಕ್ಷಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ನನಗೆ ಬೇರೆ ಕ್ಷೇತ್ರಕ್ಕಿಂತ ಕೋಲಾರ ಅತಿಮುಖ್ಯ. ವಕ್ಕಲೇರಿ ರಾಮು ಪರ ಕೆಲಸ ಮಾಡಲು ಹೆಚ್ಚು ಸಮಯ ನೀಡಲು ನಿರ್ಧರಿಸಿರುವೆ. ನಿಮ್ಮಲ್ಲಿನ ಸಂಪನ್ಮೂಲ ಬಳಕೆ ಮಾಡಿ, ಪಕ್ಷದಿಂದ ಹಾಗೂ ವೈಯಕ್ತಿವಾಗಿ ನಾನೂ
ಆರ್ಥಿಕ ಸಹಾಯ ಮಾಡುವೆ, ಅಗತ್ಯ ಬಿದ್ದರೆ ಕಾಂಗ್ರೆಸ್, ಬಿಜೆಪಿಗಿಂತ ಹೆಚ್ಚಿನ ಹಣ ನೀಡಿಯಾದರೂ ಕ್ಷೇತ್ರ ಉಳಿಸಲು ಪ್ರಯತ್ನಿಸಿ ಎಂದು ಸೂಚಿಸಿದ್ದಾರೆ. ಬಂಗಾರಪೇಟೆ ಕ್ಷೇತ್ರದ ಮಲ್ಲೇಶಬಾಬು ಕುಮಾರಸ್ವಾಮಿ ಟಾಸ್ಕ್ ಪೂರೈಸಿ ಟಿಕೆಟ್ ಗಿಟ್ಟಿಸಿಕೊಳ್ಳಲು ಮುಂದಾಗಿದ್ದರೆ, ಮುಳಬಾಗಿಲು ಕ್ಷೇತ್ರದ ಸಮೃದ್ಧಿ ಮಂಜುನಾಥ್, ಮಾಲೂರಿನ ಜಿ.ಇ.ರಾಮೇಗೌಡ, ಕೋಲಾರದ ಸಿಎಂಆರ್ ಹರೀಶ್, ಕುರ್ಕಿ ರಾಜರಾಜೇಶ್ವರಿ ಕೈಲಾದಷ್ಟು ಖರ್ಚು ಮಾಡಿ ಟಿಕೆಟ್ ಗಿಟ್ಟಿಸಿಕೊಳ್ಳಲು ಪೈಪೋಟಿ ನಡೆಸಿದ್ದಾರೆ.
ಜನರ ಆಶೀರ್ವಾದದಿಂದ 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. 5 ವರ್ಷ ಜನಪರ ಆಡಳಿತ ನೀಡುತ್ತೇವೆ. ಒಂದು ವೇಳೆ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸದಿದ್ದರೆ ಪಕ್ಷದ ಬಾಗಿಲನ್ನು ಶಾಶ್ವತವಾಗಿ ಬಂದ್ ಮಾಡುತ್ತೇವೆ.
| ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ
ಶ್ರೀರಂಗಪಟ್ಟಣ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಆರು ಸಲ ಭೇಟಿ ಮಾಡಿದ್ದೇನೆ. ಆದರೆ, ಗುಜರಾತ್ ಸಿಎಂ ಆಗಿದ್ದ ಮೋದಿ ಅವರೇನಾ ಎನ್ನುವಷ್ಟು ಚಿಂತಿಸುವ ಮಟ್ಟಿಗೆ ಬದಲಾಗಿದ್ದಾರೆ ಎಂದು ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಅವರು ಶ್ಲಾಘಿಸಿದರು. ಹಿಂದೆ ಲೋಕಸಭೆ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿ 150 ಕ್ಷೇತ್ರ ಗೆದ್ದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಪ್ರಚಾರದ ವೇಳೆ ಹೇಳಿದ್ದೆ. ಆದರೆ, ಆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಹೋದಾಗ ಮೋದಿ ತಿರಸ್ಕರಿಸಿದರು. ನಿಮ್ಮ ಮುತ್ಸದ್ದಿತನದ ಸಹಕಾರ ನನಗೆ ಬೇಕು ಎಂದು ಗೌರವಿಸಿ ಅಭಿನಂದಿಸಿದ್ದನ್ನು ನಾನು ಮರೆಯಲಾರೆ ಎಂದು ತಿಳಿಸಿದರು.
ಹಾಸನದ ಒಬ್ಬ ಸಾಮಾನ್ಯ ರೈತನ ಮಗ ನಾನು. ಡಿಪ್ಲೊಮಾ ಮಾಡಿದ್ದ ನಾನು ಕರ್ನಾಟಕದಿಂದ ಪ್ರಧಾನಿಯಾಗಿ ಆಯ್ಕೆಯಾಗಿ ದೆಹಲಿಗೆ ಹೋದಾಗ ಅಂದು ಯಾರೂ ನನಗೆ ಒಂದು ಲೋಟ ಕಾಫಿ ನೀಡಲಿಲ್ಲ. ಆದರೆ ನಾನು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ರಾಜ್ಯದ ನಮ್ಮದೇ ಪಕ್ಷದ ಮಂತ್ರಿಮಂಡಲದವರೆಲ್ಲ ಕುಳಿತು ವೀಕ್ಷಿಸುತ್ತಿದ್ದರು. ಈ ನೋವು ಶಾಶ್ವತವಾಗಿ ನನ್ನಲ್ಲಿ ಉಳಿದಿದೆ.
| ಎಚ್.ಡಿ.ದೇವೇಗೌಡ ಮಾಜಿ ಪಿಎಂ