ಉಪಸಮರ | ಬಿಎಸ್​ವೈ ಪಾತ್ರ ಮಹತ್ತರ: ಹಾನಗಲ್​, ಸಿಂದಗಿಯಲ್ಲಿ ಯಡಿಯೂರಪ್ಪ ಪ್ರಚಾರ ಹೆಚ್ಚು ಅಗತ್ಯ, ಬಿಜೆಪಿ ಆಂತರಿಕ ವರದಿ

bsy
Published on

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಎರಡು ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯ ಪ್ರಚಾರ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹೆಚ್ಚೆಚ್ಚು ಬಳಸಿಕೊಳ್ಳಬೇಕು. ಬಿಜೆಪಿ ವತಿಯಿಂದ ಖಾಸಗಿ ಸಂಸ್ಥೆಯೊಂದರ ಮೂಲಕ ನಡೆಸಿರುವ ಆಂತರಿಕ ವರದಿಯಲ್ಲಿ ಆತಂಕ ತರುವಂತಹ ಮಾಹಿತಿಗಳನ್ನು ಹೊರ ಹಾಕಿದ್ದು, ಯಡಿಯೂರಪ್ಪ ಮೇಲೆ ಹೆಚ್ಚು ಅವಲಂಬಿತರಾಗುವ ಅನಿವಾರ್ಯತೆಯನ್ನು ಹೇಳಿದೆ ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದ ವಿಚಾರ ಪ್ರಚಾರ ಕಣದಲ್ಲಿ ಹೆಚ್ಚು ಚರ್ಚೆಗೆ ಒಳಗಾದರೆ, ಅದು ಬಿಜೆಪಿ ಅಭ್ಯರ್ಥಿಗಳಿಗೆ ಸಂಕಷ್ಟ ತರುತ್ತದೆ. ಆದ್ದರಿಂದ ಆ ರೀತಿ ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಅವರ ನೇತೃತ್ವದಲ್ಲಿಯೇ ಪ್ರಚಾರ ನಡೆಸಬೇಕೆಂದು ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ ಎಂದು ಬಿಜೆಪಿಯ ಉನ್ನತ ಮೂಲಗಳು ಖಚಿತಪಡಿಸಿವೆ.

ಈ ವರದಿ ಬಂದ ನಂತರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾತ್ರೋರಾತ್ರಿ ದಾವಣಗೆರೆಗೆ ಹೋಗಿ ಅಲ್ಲಿಗೆ ಹಾವೇರಿ ಮುಖಂಡರನ್ನು ಕರೆಸಿಕೊಂಡು ಕಾರ್ಯತಂತ್ರ ರೂಪಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರೊಂದಿಗೆ ಸಭೆ ನಡೆಸಿ ಚರ್ಚೆ ಮಾಡಿದ್ದಾರೆ. ಯಡಿಯೂರಪ್ಪ ಜತೆಗೆ ಅವರ ಪುತ್ರ ಬಿ.ವೈ.ವಿಜಯೇಂದ್ರರನ್ನು ಸಹ ಎರಡು ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುವಂತೆಯೂ ವರದಿ ತಿಳಿಸಿದೆ ಎಂದು ಮೂಲಗಳು ಖಚಿತಪಡಿಸಿವೆ.

ಹಾನಗಲ್ ಕ್ಷೇತ್ರದಲ್ಲಿ ಸದ್ಯದ ಮಾಹಿತಿಯಂತೆ ಕಾಂಗ್ರೆಸ್ ಸ್ವಲ್ಪ ಮುಂದಿದೆ. ಸಿಂದಗಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸಮಬಲದ ಹೋರಾಟ ನಡೆಯುತ್ತಿದೆ. ಜೆಡಿಎಸ್ ಎರಡು ಕ್ಷೇತ್ರದಲ್ಲಿ ಎಷ್ಟು ಮತಗಳನ್ನು ಪಡೆಯುವುದೋ ಅಷ್ಟು ಬಿಜೆಪಿಗೆ ಅನುಕೂಲ. ಮುಸ್ಲಿಮರ ಮತಗಳು ಕಾಂಗ್ರೆಸ್​ಗಿಂತ ಜೆಡಿಎಸ್ ಕಡೆ ಹೆಚ್ಚೆಚ್ಚು ಹೋದರೆ ಮಾತ್ರ ಬಿಜೆಪಿ ಎರಡು ಕ್ಷೇತ್ರ ಸುಲಭವಾಗಿ ಗೆಲ್ಲುತ್ತದೆ. ಬಸವಕಲ್ಯಾಣದ ಉದಾಹರಣೆಯನ್ನು ವರದಿ ತಿಳಿಸಿದೆ ಎಂದು ಮೂಲಗಳು ಹೇಳಿವೆ.

ಕಾರ್ಯತಂತ್ರ ಹೇಗೆ?: ಪಕ್ಷದ ಕಾರ್ಯಕ್ರಮಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳು ಮನೆಮನೆಗೆ ತಲುಪಿಸುವ ಕಾರ್ಯ ಮಾಡಬೇಕಾಗಿದೆ. ಕಾರ್ಯಕರ್ತರನ್ನು ಎಲ್ಲ ಕಡೆಯಿಂದ ಬಳಸಿಕೊಳ್ಳಬೇಕು. ಹಾನಗಲ್​ನಲ್ಲಿ ಉದಾಸಿ ಕುಟುಂಬಕ್ಕೆ ಟಿಕೆಟ್ ತಪ್ಪಿಸಲಾಗಿದೆ ಎಂಬ ಭಾವನೆ ಬರಬಾರದು. ಆ ಕುಟುಂಬದ ಸದಸ್ಯರನ್ನು ಪ್ರಚಾರದಲ್ಲಿ ಬಳಸಬೇಕು. ಅಲ್ಲಿನ ಅಭ್ಯರ್ಥಿ ಶಿವರಾಜ ಸಜ್ಜನರ್ ಅವರು ಉದಾಸಿ ಶಿಷ್ಯ ಎಂಬ ಪ್ರಚಾರ ಹೆಚ್ಚೆಚ್ಚು ಮಾಡಬೇಕು. ಹಾನಗಲ್ ಮುಖ್ಯಮಂತ್ರಿಯವರ ತವರು ಜಿಲ್ಲೆಯ ಕ್ಷೇತ್ರ ಆಗಿರುವುದರಿಂದ ಅವರಿಗೆ ಪ್ರತಿಷ್ಠೆ ಎಂಬುದನ್ನು ಮತದಾರರಿಗೆ ಮನದಟ್ಟು ಮಾಡಬೇಕು. ಸಿಂದಗಿಯಲ್ಲಿ ಅಭ್ಯರ್ಥಿ ರಮೇಶ್ ಭೂಸನೂರು ಮತದಾರರಿಗೆ ಸುಲಭವಾಗಿ ಸಿಗುತ್ತಾರೆ ಎಂಬುದನ್ನು ವಿವರಿಸಿ ಹೇಳಬೇಕು. ಹೋಬಳಿಗೊಬ್ಬರಂತೆ ನಿಯೋಜನೆ ಮಾಡಿರುವ ಮಂತ್ರಿಗಳು, ಶಾಸಕರು, ಮುಖಂಡರು ಚುನಾವಣೆ ಮುಗಿಯುವ ತನಕ ಅಲ್ಲಿಯೇ ಇದ್ದು ಪ್ರಚಾರದ ಸಂಪೂರ್ಣ ಹೊಣೆ ನೋಡಿಕೊಳ್ಳಬೇಕು. ಹೊರಗಡೆಯಿಂದ ಪ್ರಚಾರಕ್ಕೆ ಬಂದವರು ಹಾಗೂ ಸ್ಥಳೀಯರ ನಡುವೆ ಸಮನ್ವಯ ಸಾಧಿಸಬೇಕು. ಯಾವುದೇ ಕಾರಣಕ್ಕೂ ಎಲ್ಲಿಯೂ ಸಣ್ಣ ಅಸಮಾಧಾನ ಸಹ ಉಂಟಾಗದಂತೆ ನೋಡಿಕೊಳ್ಳಬೇಕು. ಪ್ರತಿಪಕ್ಷಗಳು ಬೆಲೆ ಏರಿಕೆ ಸೇರಿ ಬೇರೆ ಬೇರೆ ವಿಚಾರಗಳು ಪ್ರಸ್ತಾಪಿಸಿದರೂ ಅದು ಮತದಾರರ ಮನಮುಟ್ಟದಂತೆ ನೋಡಿಕೊಳ್ಳಬೇಕು ಎಂಬುದನ್ನು ವರದಿ ಹೇಳಿದೆ ಎಂದು ಮೂಲಗಳು ಖಚಿತಪಡಿಸಿವೆ.

ಬಂಡಾಯ ಶಮನಕ್ಕೆ ಮುಂದಾದ ಸಿಎಂ

ಹಾವೇರಿ/ದಾವಣಗೆರೆ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ರಣತಂತ್ರ ಹೆಣೆಯಲು ಸೋಮವಾರ ರಾತ್ರಿ ದಾವಣಗೆರೆಯಲ್ಲಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕ್ಷೇತ್ರದಲ್ಲಿ ಉಂಟಾಗಿದ್ದ ಬಂಡಾಯ ಶಮನ ಮಾಡುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಸೋಮವಾರ ಸಂಜೆ ದಾವಣಗೆರೆಗೆ ಆಗಮಿಸಿದ್ದ ಬೊಮ್ಮಾಯಿ ಅವರು ಸಚಿವ ಬಿ.ಸಿ. ಪಾಟೀಲ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಅಭ್ಯರ್ಥಿ ಶಿವರಾಜ ಸಜ್ಜನರ ಅವರನ್ನು ಕರೆಯಿಸಿ ತಡರಾತ್ರಿಯವರೆಗೂ ಚುನಾವಣೆ ಗೆಲ್ಲಲು ಅನುಸರಿಸಬೇಕಾದ ಕಾರ್ಯತಂತ್ರ ಹಾಗೂ ಸದ್ಯದ ಸ್ಥಿತಿ-ಗತಿಗಳ ಮಾಹಿತಿ ಪಡೆದುಕೊಂಡರು. ಬಿಜೆಪಿ ಬಂಡಾಯ ಅಭ್ಯರ್ಥಿ ಸಿ.ಆರ್. ಬಳ್ಳಾರಿ ಅವರೊಂದಿಗೆ ಸಮಾಲೋಚನೆ ನಡೆಸಿದರು. ಸಿ.ಆರ್. ಬಳ್ಳಾರಿ ಹಾಗೂ ನಮ್ಮ ನಡುವೆ 40 ವರ್ಷಗಳಷ್ಟು ಹಳೆಯ ಸಂಬಂಧವಿದೆ. ಅವರು ಸರ್ಕಾರಿ ಸೇವೆಯಲ್ಲಿ ಇದ್ದಾಗಿನಿಂದಲೂ ಸ್ನೇಹವಿದೆ. ಆ ಪ್ರೀತಿಗೆ ಬೆಲೆ ಕೊಟ್ಟು ಬಂದಿದ್ದರು ಎಂದು ಸಿಎಂ ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಆರ್. ಬಳ್ಳಾರಿ, ಬುಧವಾರ ಸಮಾಜದ ಮುಖಂಡರ ಸಭೆಯನ್ನು ಹಾನಗಲ್​ನಲ್ಲಿ ಕರೆದಿದ್ದು, ಅಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದರು.

ನಾಲ್ಕು ಹಂತದ ಕಾರ್ಯಾಚರಣೆ

ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ವಿಧಾನಸಭೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕಾಗಿ ಬಿಜೆಪಿ ನಾಲ್ಕು ಹಂತದ ಕಾರ್ಯತಂತ್ರ ರೂಪಿಸಿದ್ದು, ಅ.16ರಿಂದ ಬಿರುಸಿನ ಪ್ರಚಾರ ಕೈಗೊಳ್ಳಲಿದೆ. ಬಿಜೆಪಿ ರಾಜ್ಯ ಕಚೇರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಭೇಟಿಯಿತ್ತ ಸಂದರ್ಭ ಕ್ಷೇತ್ರದ ಈಗಿರುವ ವಾತಾವರಣ, ಮುಂದಿನ ನಡೆ ಹಾಗೂ ರಣತಂತ್ರದ ಕುರಿತು ಚರ್ಚೆಯಾಗಿವೆ. ನಂತರ ಸುದ್ದಿಗಾರರಿಗೆ ಈ ಕುರಿತು ಪಕ್ಷದ ರಾಜ್ಯಾಧ್ಯಕ್ಷರು ಪ್ರತಿಕ್ರಿಯಿಸಿ, ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯಸಾಧಿಸುವ ವಿಶ್ವಾಸವಿದೆ. ಗೆಲುವಿಗಾಗಿ ನಾಲ್ಕು ಹಂತದ ಕಾರ್ಯತಂತ್ರ ರೂಪಿಸಲಾಗಿದೆ. ಬೂತ್​ವುಟ್ಟದಲ್ಲಿ ಪದಾಧಿಕಾರಿಗಳು, ಶಕ್ತಿ ಕೇಂದ್ರಕ್ಕೊಬ್ಬ ಶಾಸಕರು, ಜಿಪಂ ಕ್ಷೇತ್ರಕೊಬ್ಬ ಸಚಿವರನ್ನು ಜೋಡಿಸಲಾಗಿದ್ದು, ವಿಧಾನಸಭಾ ಕ್ಷೇತ್ರಕ್ಕೆ ಪ್ರಮುಖ ಸಚಿವ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನು ಒಳಗೊಂಡ ತಂಡಕ್ಕೆ ಜವಾಬ್ದಾರಿ ಒಪ್ಪಿಸಿದ್ದು, ಎರಡೂ ಕ್ಷೇತ್ರಗಳಲ್ಲಿ ಶನಿವಾರದಿಂದ ಪ್ರಚಾರಕ್ಕೆ ಇಳಿಯಲಿದ್ದಾರೆ ಎಂದರು.

ನವೆಂಬರ್ ಮೊದಲ ವಾರ ಬಿಎಸ್​ವೈ ಪ್ರವಾಸ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒಳಗೊಂಡು ವಿವಿಧ ತಂಡಗಳ ರಾಜ್ಯದ ಸಂಘಟನಾ ಪ್ರವಾಸ ನವೆಂಬರ್ ಮೊದಲ ವಾರದಿಂದ ಪ್ರಾರಂಭವಾಗಲಿದೆ. ಸಂಘಟನಾ ಪ್ರವಾಸ ಅ.20ರಿಂದ ಪ್ರಾರಂಭಿಸುವ ಯೋಚನೆ ಇತ್ತು. ಈ ಮಧ್ಯೆ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ಹೀಗಾಗಿ ಬಿಎಸ್​ವೈ ಜತೆಗೆ ಪ್ರಮುಖರೆಲ್ಲ ಹಾನಗಲ್ ಮತ್ತು ಸಿಂದಗಿ ಪ್ರಚಾರ ಕಾರ್ಯದಲ್ಲಿ ತೊಡಗುವರು. ಉಪ ಚುನಾವಣೆ ಬಳಿಕ ಸಂಘಟನಾ ಪ್ರವಾಸ, ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ಪುನಾರಚನೆ ಎಲ್ಲವೂ ಆಗಲಿದೆ. ಬಿಎಸ್​ವೈ ಯಾತ್ರೆಗೆ ತಡೆ ಹಾಕುವಂತಹ ಶಕ್ತಿ ಯಾರಿಗೂ ಇಲ್ಲ. ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಪ್ರತಿಪಕ್ಷಗಳು ತಮಗೆ ತೋಚಿದ ರೀತಿಯಲ್ಲಿ ವ್ಯಾಖ್ಯಾನಿಸುತ್ತವೆ. ಇಲಾಖೆ ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುವುದು, ದಾಳಿಯಲ್ಲಿ ರಾಜಕಾರಣ ಇಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net