

ಸಾಗರ: ತಾಲೂಕಿನ ಹುಲಿದೇವರಬನ ಸಮೀಪದ ಹೊಸಕೊಪ್ಪ ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಿಗುತ್ತಿಲ್ಲ ಎಂದು ಆರೋಪಿಸಿ ಗ್ರಾಮದ ಸೀತಾರಾಮ ಹೆಗಡೆ ಬಿಎಸ್‌ಎನ್‌ಎಲ್ ಕಚೇರಿ ಎದುರು ಶುಕ್ರವಾರ ಏಕಾಂಗಿ ಧರಣಿ ನಡೆಸಿದರು.
ಕಳೆದ 20 ದಿನಗಳಿಂದ ಮನೆಗೆ ನೆಟ್‌ವಕ್ ಸೌಲಭ್ಯ ಇಲ್ಲವಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೆ ಸ್ಪಂದಿಸುತ್ತಿಲ್ಲ. ದಿನಕ್ಕೆ ಕನಿಷ್ಠ ಸಂಜೆ 5ರಿಂದ 7ಗಂಟೆವರೆಗೆ ನೆಟ್‌ವರ್ಕ್ ಸೌಲಭ್ಯ ಕೊಡಿ. ಮಕ್ಕಳು ಪಟ್ಟಣದಲ್ಲಿ ಪದವಿ ಓದುತ್ತಿದ್ದಾರೆ. ಅವರ ಜತೆ ಮಾತನಾಡಬೇಕು ಎಂದು ಕೈಮುಗಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಪದೇಪದೆ ಬ್ಯಾಟರಿ ಹಾಳಾಗಿದೆ ಎಂದು ಸಬೂಬು ಹೇಳುತ್ತಾರೆ. ಬ್ಯಾಟರಿ ಹಾಳಾಗಿದೆ ನೀವೇ ಮೆಸ್ಕಾಂ ಕಚೇರಿಗೆ ಹೋಗಿ ಎಂದು ಹೇಳುತ್ತಾರೆ. ಹಾಗಾದರೆ ಸರ್ಕಾರ ಇವರಿಗೆ ಸಂಬಳ ಕೊಡುವುದು ಏಕೆ? ನಾವು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇವೆ. ತುರ್ತು ಸಂದರ್ಭದಲ್ಲಿ ಯಾರನ್ನಾದರೂ ಸಂಪರ್ಕಿಸಬೇಕು ಎಂದರೆ ಫೋನ್ ಸೌಲಭ್ಯ ಇಲ್ಲ. 15 ದಿನಕ್ಕೊಮ್ಮೆ 500 ರೂ. ಕರೆನ್ಸಿ ಹಾಕುತ್ತೇವೆ. ಆದರೆ ಸಮರ್ಪಕ ಸೇವೆ ಕೊಡಲು ಅಧಿಕಾರಿಗಳು ವಿಫಲವಾಗಿದ್ದಾರೆ. ನೆಟ್‌ವಕ್ ಸೌಲಭ್ಯ ಕೊಡದ ಹೊರತು ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಅಧಿಕಾರಿ ಹರ್ಷವರ್ಧನ್ ಮಾತನಾಡಿ, ಆವಿನಹಳ್ಳಿ ಭಾಗದಲ್ಲಿ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದ ಬ್ಯಾಟರಿ ಚಾರ್ಜ್ ಆಗದೆ ನೆಟ್‌ವರ್ಕ್ ಸಿಗುತ್ತಿಲ್ಲ. ಕೆಲವೊಮ್ಮೆ ಕಡಿಮೆ ವೋಲ್ಟೇಜ್ ಸರಬರಾಜು ಆಗಿ ಬ್ಯಾಟರಿ ಕೆಲಸ ಮಾಡುತ್ತಿಲ್ಲ. ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಇನ್ನೊಂದು ತಿಂಗಳಿನಲ್ಲಿ ನೆಟ್‌ವರ್ಕ್ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭ ಬಿಎಸ್‌ಎನ್‌ಎಲ್ ಅಧಿಕಾರಿ ಮುರಳಿಕೃಷ್ಣ ಹಾಜರಿದ್ದರು.