ಉಗ್ರರು ಒಳನುಸುಳುವಿಕೆಗೆ ಬಳಸುತ್ತಿದ್ದ ಭೂಗತ ಸುರಂಗ ಪತ್ತೆ! ಹತ್ತೇ ದಿನದಲ್ಲಿ ಪತ್ತೆಯಾದ 2ನೇ ಸುರಂಗ

tunnel
Published on

ಶ್ರೀನಗರ: ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಪಾಕಿಸ್ತಾನದ ಉಗ್ರರು ಭಾರತದೊಳಗೆ ನುಸುಳಲು ಬಳಸಿಕೊಳ್ಳುತ್ತಿದ್ದ ಭೂಗತ ಸುರಂಗವೊಂದನ್ನು ಭಾರತೀಯ ಗಡಿ ಭದ್ರತಾ ಪಡೆಯ (ಬಿಎಸ್​ಎಫ್​) ಯೋಧರು ಪತ್ತೆ ಹಚ್ಚಿದ್ದಾರೆ. ಹತ್ತು ದಿನಗಳಲ್ಲಿ ಪತ್ತೆಯಾದ ಎರಡನೇ ಸುರಂಗ ಇದಾಗಿದೆ.

ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಸುರಂಗ ಪತ್ತೆಯಾಗಿದೆ. ಹಿರಾನಗರ ಸೆಕ್ಟರ್​ನ ಗಡಿ ಹೊರಠಾಣೆ ಪನ್ಸಾರ್ ಪ್ರದೇಶದಲ್ಲಿರುವ ಈ ಸುರಂಗವು ಸುಮಾರು 150 ಮೀಟರ್​ ಉದ್ದವಿದೆ ಎನ್ನಲಾಗಿದೆ. 30 ಅಡಿಯಷ್ಟು ಆಳದಲ್ಲಿ ಸುರಂಗ ನಿರ್ಮಿಸಲಾಗಿದೆ. ಸದ್ಯ ಭದ್ರತಾ ಪಡೆಯ ಸಿಬ್ಬಂದಿ ಸುತ್ತಲೂ ಸುತ್ತುವರಿದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಸಾಂಬಾ ಮತ್ತು ಕಥುವಾ ಜಿಲ್ಲೆಗಳಲ್ಲಿನ ಅಂತರರಾಷ್ಟ್ರೀಯ ಗಡಿಯಲ್ಲಿ ಕಳೆದ ಆರು ತಿಂಗಳಲ್ಲಿ ಪತ್ತೆಯಾದ ನಾಲ್ಕನೇ ಸುರಂಗ ಇದಾಗಿದೆ. ಕಳೆದ 10 ವರ್ಷಗಳಲ್ಲಿ ಈ ರೀತಿಯ 10 ಸುರಂಗಗಳನ್ನು ಪತ್ತೆ ಹಚ್ಚಲಾಗಿದೆ. ಈ ಹಿಂದೆ ಜನವರಿ 13ರಂದು ಅದೇ ವಲಯದ ಬೊಬಿಯಾನ್ ಗ್ರಾಮದಲ್ಲಿ 150 ಮೀಟರ್ ಉದ್ದದ ಸುರಂಗ ಪತ್ತೆಯಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net