ಬಿಎಸ್​ಎಫ್ ಕಾರ್ಯಾಚರಣೆ : ಇಂಡೋ- ಬಾಂಗ್ಲಾದೇಶ ಗಡಿ ಬಳಿ 1500 ನಿಷೇಧಿತ ಕೆಮ್ಮು ಔಷಧಿ ಫೆನ್‌ಸೆಡಿಲಿನ್ ವಶ

Phensedylin
Published on

ನವದೆಹಲಿ: ಗಡಿ ಭದ್ರತಾ ಪಡೆಗಳು ಇಂಡೋ-ಬಾಂಗ್ಲಾದೇಶದ ಗಡಿಯ ಬಳಿ 2,60,231 ರೂ. ಮೌಲ್ಯದ 1,540 ಬಾಟಲಿಗಳ ಫೆನ್‌ಸೆಡಿಲಿನ್ ಅನ್ನು ವಶಪಡಿಸಿಕೊಂಡಿದೆ. ಫೆನ್ಸೆಡಿಲಿನ್ ಕೆಮ್ಮು ಔಷಧದ ಬ್ರಾಂಡ್ ಆಗಿದ್ದು ಇದನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

ಕಳೆದ 24 ಗಂಟೆಗಳಲ್ಲಿ ಕೆಮ್ಮು ಔಷಧಿ ಬಾಟಲಿಗಳನ್ನು ವಿವಿಧ ಕಾರ್ಯಾಚರಣೆಗಳಲ್ಲಿ ವಶಪಡಿಸಿಕೊಳ್ಳಲಾಗಿದೆ. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಇಂಡೋ-ಬಾಂಗ್ಲಾದೇಶ ಗಡಿಯಲ್ಲಿರುವ ನವಾಡಾದ ಗಡಿ ಔಟ್​​​ಪೋಸ್ಟ್​ ಪ್ರದೇಶದಲ್ಲಿ 160 ಬಾಟಲಿಗಳ ಫೆನ್‌ಸೆಡಿಲ್ ಹೊಂದಿದ್ದ ಕಳ್ಳಸಾಗಾಣಿಕೆದಾರನನ್ನು ಭಾನುವಾರ ಬಂಧಿಸಲಾಯಿತು. ವಿಚಾರಣೆಯ ನಂತರ, ಆತ ಆ ಪ್ರದೇಶದ ಇತರ ಫೆನ್ಸೆಡಿಲ್ ಕಳ್ಳಸಾಗಾಣಿಕೆದಾರರ ಹೆಸರನ್ನು ಬಹಿರಂಗಪಡಿಸಿದ.

"ಭಾನುವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ, ಭಾರತದ ಕಡೆಯ ನವಾಡಾ ಪ್ರದೇಶದಲ್ಲಿ ಕುಳಿತಿದ್ದ ಕೆಲವು ಫೆನ್ಸೆಡಿಲ್ ಕಳ್ಳಸಾಗಾಣಿಕೆದಾರರು ಅದನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿತು. ಕಳ್ಳಸಾಗಾಣಿಕೆದಾರರು ಗಡಿ ತಲುಪಿದ ಕೂಡಲೇ ಬಿಎಸ್ಎಫ್ ಪಡೆಗಳು ಒಬ್ಬ ಕಳ್ಳಸಾಗಾಣಿಕೆದಾರನನ್ನು ಬಂಧಿಸಿದ್ದು, ಇತರರು ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ ಎಂದು ಬಿಎಸ್ಎಫ್ ಅಧಿಕಾರಿ ಹೇಳಿದರು.

ಪ್ರಾಥಮಿಕ ವಿಚಾರಣೆ ವೇಳೆ, ಫೆನ್ಸೆಡಿಲ್ ರವಾನಿಸಲು ಮಾಲ್ಡಾ ನಿವಾಸಿ ಗುರುಪಾದ್ ಮಂಡಲ್ ಎಂಬಾತ ಅವನಿಗೆ ನೀಡಿದ್ದ ಎಂದು ತಿಳಿದುಬಂದಿದೆ. ಕಳ್ಳಸಾಗಾಣಿಕೆದಾರರಿಗೆ ಬಾಂಗ್ಲಾದೇಶದ ಕಡೆಗೆ ಅಂತಾರಾಷ್ಟ್ರೀಯ ಗಡಿ ದಾಟಿದ ನಂತರ ಪ್ರತಿ ಚೀಲಕ್ಕೆ 1200 ರೂ. ನೀಡುವುದಾಗಿ ಭರವಸೆ ನೀಡಲಾಗಿತ್ತು. ಬಾಂಗ್ಲಾದೇಶಕ್ಕೆ ತಲುಪಿದಾಗ ಫೆನ್‌ಸೆಡಿಲ್ ಬಾಟಲಿಗಳನ್ನು ಚಾಪಿನವಾಬ್‌ಗಂಜ್ ನಿವಾಸಿ ಸಾಹಿಮ್ ಶೇಖ್ ಅವರಿಗೆ ಹಸ್ತಾಂತರಿಸಲಾಗುತ್ತದೆ ಎಂಬುದು ತಿಳಿದುಬಂತು.

ವಶಪಡಿಸಿಕೊಂಡ ಫೆನ್‌ಸೆಡಿಲ್ ಬಾಟಲಿಗಳನ್ನು ಮುಂದಿನ ಕಾನೂನು ಕ್ರಮಗಳಿಗಾಗಿ ಸಂಬಂಧಪಟ್ಟ ಪೊಲೀಸ್ ಠಾಣೆ / ಕಸ್ಟಮ್ಸ್ ಕಚೇರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net