ವ್ಯವಸಾಯಕ್ಕೆ ಟೈಮ್ ಮೀಸಲಿಟ್ಟ ಬಿಎಸ್ಸಿ ಪದವೀಧರೆ

KLR pic 2 Godhi tene
Published on

ಬೂದಿಕೋಟೆ: ಬರದ ನಾಡು ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಕೋಲಾರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಗೋಧಿ ಬೆಳೆದು ಯಶ ಕಂಡಿದ್ದಾರೆ. ಬಂಗಾರಪೇಟೆ ತಾಲೂಕು ಮಾಗೊಂದಿ ಪಂಚಾಯಿತಿ ವ್ಯಾಪ್ತಿಯ ಬೆಂಟಿಗಾನಹಳ್ಳಿ ವೆಂಕಟಾಚಲಪತಿ ಅವರ ಪತ್ನಿ ಬಿ.ಎಂ.ಹೇಮಾವತಿ ಪತಿಯೊಂದಿಗೆ ಸೇರಿ ಕಳೆದ 4 ವರ್ಷಗಳಿಂದ ಗೋಧಿ ಬೆಳೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಬಿಎಸ್ಸಿ ಮುಗಿಸಿರುವ ಇವರು ಪತಿಗೆ ಬೇಸಾಯದಲ್ಲಿ ಸಹಾಯ ಮಾಡಲು ಆರಂಭಿಸಿದರು. ತಮಗಿರುವ 20 ಎಕರೆಯಲ್ಲಿ ಆಲೂಗಡ್ಡೆ, ಟೊಮ್ಯಾಟೊ, ಬೀಟ್‌ರೂಟ್, ಬದನೆ, ಕುಂಬಳಕಾಯಿ, ಸೋರೆಕಾಯಿ, ಕ್ಯಾಪಿಕಂ ಸೇರಿ ಹತ್ತಾರು ಬಗೆಯ ತರಕಾರಿ ಬೆಳೆಯುವ ಜತೆಗೆ ಹೈನುಗಾರಿಕೆಯನ್ನೂ ಮಾಡುತ್ತಿದ್ದರು.

ಕಷ್ಟಕ್ಕೆ ಹೆಗಲು: ವೆಂಕಟಾಚಲಪತಿ ಒಮ್ಮೆ ರಸ್ತೆ ಅಪಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದರು. ಅಂದಿನಿಂದ ುಲ್‌ಟೈಮ್ ವ್ಯವಸಾಯಕ್ಕೆ ಮೀಸಲಿಟ್ಟು ಇಂದಿಗೂ ಪ್ರತಿ ನಿತ್ಯ ಹತ್ತಾರು ಬೆಳೆಗಳನ್ನು ಆರೈಕೆ ಮಾಡುತ್ತಾ ಪತಿಗೆ ಆಸರೆಯಾಗಿದ್ದಾರೆ.

ಪತಿ ಕನಸು ನನಸು: ಗೋಧಿ ಬೆಳೆಯಲು ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕ ಸೀಮಿತವಾಗಿದ್ದು, ಜಿಲ್ಲೆಯಲ್ಲಿ ಪ್ರಯತ್ನಿಸೋಣ ಎಂದು ವೆಂಕಟಾಚಲಪತಿ ಕನಸು ಕಂಡಿದ್ದರು. ಅವರ ಕನಸನ್ನು ನನಸು ಮಾಡಲು ಕೃಷಿ ಅಧಿಕಾರಿಗಳಿಂದ ಬಿತ್ತನೆ ಬೀಜ ತರಿಸಿಕೊಂಡು ಸುಮಾರು ಅರ್ಧ ಎಕರೆಯಲ್ಲಿ ಬಿತ್ತನೆ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ ನಿರೀಕ್ಷೆಗೂ ಮೀರಿ ಫಸಲು ಬಂದಿದೆ. ಇಲ್ಲಿಯವರೆಗೆ ನಾಲ್ಕು ಬಾರಿ ಗೋಧಿ ಬೆಳೆದಿರುವ ಇವರು ಈ ಬಾರಿ ಚಪಾತಿಗೆ ಯೋಗ್ಯವಾದ ಲೋಕ್-1 ತಳಿಯನ್ನು ಧಾರವಾಡದಿಂದ ತರಿಸಿಕೊಂಡು ಬೆಳೆದಿದ್ದಾರೆ. ಬೆಳೆ ಕಾಳು ಕಟ್ಟುವ ಹಂತದಲ್ಲಿದೆ.

ಈ ಬಾರಿ ಸತತ ಮಳೆ ಹಾಗೂ ವಾತಾವರಣದ ಏರುಪೇರಿನಿಂದ ಗೋಧಿ ಬೆಳೆ ನಿರೀಕ್ಷೆಯಷ್ಟು ಬಂದಿಲ್ಲ. ಭತ್ತ ಹಾಗೂ ರಾಗಿಗಿಂತ ಬಹಳ ಸುಲಭ ಹಾಗೂ ಕಡಿಮೆ ಖರ್ಚಿನಲ್ಲಿ ಬೆಳೆಯಬಹುದು. ಬೆಳೆಗೆ ಮಂಜಿನಿಂದ ಕೂಡಿದ ವಾತಾವರಣ ಅವಶ್ಯಕತೆಯಿದ್ದು, ನಮ್ಮ ಜಿಲ್ಲೆಯಲ್ಲಿ ಬಿತ್ತನೆಗೆ ದೀಪಾವಳಿ ಸಮಯ ಸೂಕ್ತ. ಬಿ.ಎಂ.ಹೇಮಾವತಿ, ಬೆಂಡಿಗಾನಹಳ್ಳಿ ಚಪಾತಿಗೆ ಯೋಗ್ಯವಾದ ತಳಿ ಬೆಳೆದಿದ್ದಾರೆ. ಬೆಳೆ ನಿರೀಕ್ಷೆಗೂ ಮೀರಿ ಬಂದಿದ್ದು ಮುಂದಿನ ದಿನಗಳಲ್ಲಿ ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಲ್ಲಿ ಅಧಿಕ ಇಳುವರಿ ನೀಡುವಂತಹ ತಳಿಗಳನ್ನು ಬೆಳೆಯಲು ಪ್ರೋತ್ಸಾಹ ನೀಡಲಾಗುವುದು. ವಿಜಯಕುಮಾರ್, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಬೂದಿಕೋಟೆ ಹೈದರಾಬಾದ್ ಹಾಗೂ ಮಂಡ್ಯದ ವಾತಾವರಣದಲ್ಲಿ ಗೋಧಿ ಬೆಳೆಯಲು ಸಾಧ್ಯವೇ ಎಂದು ಸಂಶೋಧನೆ ನಡೆಸಲಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ಹೇಮಾವತಿ ಅವರು ಗೋಧಿ ಬೆಳೆದು ಯಶಸ್ಸು ಕಂಡಿರುವ ಕಾರಣ ಇಲ್ಲಿನ ವಾತಾವರಣಕ್ಕೆ ಈ ಬೆಳೆಯನ್ನು ಪರ್ಯಾಯ ಬೆಳೆಯಾಗಿ ಬೆಳೆಯಬಹುದು. ಕೆ.ಗೋಪಾಲರೆಡ್ಡಿ, ವಿಜ್ಞಾನಿ, ಭಾರತೀಯ ಗೋಧಿ ಮತ್ತು ಬಾರ್ಲಿ ಸಂಶೋಧನಾ ಸಂಸ್ಥೆ, ಕರ್ನಾಲ್ ಹರಿಯಾಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net