ಬ್ರೇಕಪ್ ಕೋಪಕ್ಕೆ ಮಾಜಿ ಪ್ರೇಯಸಿಯ ಸಾಕು ನಾಯಿಗಳ ಬರ್ಬರ ಹತ್ಯೆ; ವಿಡಿಯೋ ಕಾಲ್ ಮಾಡಿ ಕ್ರೌರ್ಯ ಮೆರೆದ ಪಾಗಲ್! | Kolkata Dog Killing

Kolkata Dog Killing
ಬ್ರೇಕಪ್ ಆದ ಕೋಪಕ್ಕೆ ಮಾಜಿ ಪ್ರೇಯಸಿಯ 2 ಸಾಕು ನಾಯಿಗಳನ್ನು ಕೊಂದ ಪಾಪಿ
Published on: 

Kolkata Dog Killing: ಪ್ರೇಮ ಸಂಬಂಧ ಮುರಿದುಬಿದ್ದಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ತನ್ನ ಮಾಜಿ ಪ್ರೇಯಸಿಯ ಎರಡು ಸಾಕು ನಾಯಿಗಳನ್ನು ಬರ್ಬರವಾಗಿ ಕೊಂದಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ. ಅಷ್ಟೇ ಅಲ್ಲ, ಒಂದು ನಾಯಿಯನ್ನು ನೇಣು ಹಾಕಿರುವುದನ್ನು ವಿಡಿಯೋ ಕಾಲ್ ಮೂಲಕ ಮಾಜಿ ಪ್ರೇಯಸಿಗೆ ತೋರಿಸಿ ವಿಕೃತಿ ಮೆರೆದಿದ್ದಾನೆ.

ಕೋಲ್ಕತ್ತಾದ ಬಿಕ್ರಮ್‌ಗಢ್ ಪ್ರದೇಶದಲ್ಲಿ ಒಂದು ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಡಿಜೆ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ತನ್ನ ಸಂಗಾತಿ ಸಂಜೀವ್ ಭಟ್ಟಾಚಾರ್ಯ ಎಂಬಾತನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಹಿಳೆ ಕೆಲ ದಿನಗಳ ಹಿಂದೆ ಸಂಜೀವ್‌ನಿಂದ ದೂರಾಗಿದ್ದಳು. ಈ ವೇಳೆ ತನ್ನ ಎರಡು ಸಾಕು ನಾಯಿಗಳನ್ನು ಮಾತ್ರ ಸಂಜೀವ್‌ನ ಆರೈಕೆಯಲ್ಲಿ ಬಿಟ್ಟು ಹೋಗಿದ್ದಳು ಎಂದು ನೆರೆಹೊರೆಯವರು ತಿಳಿಸಿದ್ದಾರೆ

ಬ್ರೇಕಪ್ ಸೇಡಿಗೆ ಸಾಕು ನಾಯಿಗಳ ಬಲಿ

ಮಾಜಿ ಪ್ರೇಯಸಿ ದೂರವಾಗಿದ್ದಕ್ಕೆ ಕೋಪಗೊಂಡ ಸಂಜೀವ್, ಆಕೆಯ ಎರಡು ಸಾಕು ನಾಯಿಗಳನ್ನು ಕೊಂದಿದ್ದಾನೆ ಎನ್ನಲಾಗಿದೆ. ಅಲ್ಲದೆ ಅದನ್ನು ವಿಡಿಯೋ ಕಾಲ್ ಮೂಲಕ ಆಕೆಗೆ ತೋರಿಸಿದ್ದಾನೆ ಎಂದು ಸ್ತಳಿಯರು ತಿಳಿಸಿದ್ದಾರೆ. ಗಾಬರಿಗೊಂಡ ಮಹಿಳೆ ಸ್ಥಳೀಯರಿಗೆ ಕರೆ ಮಾಡಿ ಹೋಗಿ ನೋಡುವಂತೆ ಮನವಿ ಮಾಡಿದ್ದಾಳೆ.

ಒಂದು ನಾಯಿಗೆ ನೇಣು ಹಾಕಿದ್ದ ಕ್ರೂರಿ

ಮಹಿಳೆಯ ಮನವಿಯ ಮೇರೆಗೆ ಸ್ಥಳೀಯರು ಮನೆಗೆ ಹೋಗಿ ನೋಡಿದಾಗ ಎರಡೂ ಸಾಕು ನಾಯಿಗಳು ಮೃತಪಟ್ಟಿದ್ದವು. ಆರೋಪಿಯು ಒಂದು ನಾಯಿಯನ್ನು ನೇಣು ಹಾಕಿ ಕೊಂದರೆ, ಮತ್ತೊಂದು ಪುಟ್ಟ ನಾಯಿಯ ತಲೆಯನ್ನು ಇಟ್ಟಿಗೆಯಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಅಮಾನವೀಯ ಕೃತ್ಯದ ಸುದ್ದಿ ತಿಳಿಯುತ್ತಿದ್ದಂತೆ ನಟಿ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ದೆಬಲೀನಾ ದತ್ ಸೇರಿದಂತೆ ವಿವಿಧ ಪ್ರಾಣಿ ಕಲ್ಯಾಣ ಸಂಘಟನೆಗಳ ಸದಸ್ಯರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಇದನ್ನೂ ಓದಿ: ಬಾತ್‌ರೂಮ್‌ಗೆ ನಾಯಿಯನ್ನು ಎಳೆದೊಯ್ದ ಚಿರತೆ; ಬಾಗಿಲು ಹಾಕಿ ಒಳಗೇ ಲಾಕ್ ಮಾಡಿದ ಮನೆಯವರು! | Leopard Attack

ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಪೊಲೀಸರು ಆರೋಪಿ ಸಂಜೀವ್ ಭಟ್ಟಾಚಾರ್ಯನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ ಎನ್ನಲಾಗಿದ್ದು, ಈ ಬಗ್ಗೆ ಇನ್ನೂ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ. ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಬ್ರೇಕಪ್‌ನ ಸಿಟ್ಟಿಗೆ ಎರಡು ಸಾಕು ನಾಯಿಗಳನ್ನು ಬರ್ಬರವಾಗಿ ಕೊಂದಿರುವ ಘಟನೆ ಪ್ರಾಣಿ ಪ್ರಿಯರು ಮತ್ತು ಸ್ಥಳೀಯರಲ್ಲಿ ತೀವ್ರ ಆಕ್ರೋಶ ಹುಟ್ಟುಹಾಕಿದೆ.