ಬಾತ್‌ರೂಮ್‌ಗೆ ನಾಯಿಯನ್ನು ಎಳೆದೊಯ್ದ ಚಿರತೆ; ಬಾಗಿಲು ಹಾಕಿ ಒಳಗೇ ಲಾಕ್ ಮಾಡಿದ ಮನೆಯವರು! | Leopard Attack

Leopard Attack
ಬಾತ್‌ರೂಮ್‌ನಲ್ಲಿ ಚಿರತೆ ಕಂಡು ಬೆಚ್ಚಿಬಿದ್ದ ಮನೆಯವರು
Published on: 
Summary
  • ಸಾಕು ನಾಯಿಯನ್ನು ಬಾತ್‌ರೂಮ್‌ಗೆ ಎಳೆದುಕೊಂಡು ಹೋದ ಚಿರತೆ

  • ಬಾತ್‌ರೂಮ್ ಬಾಗಿಲು ಲಾಕ್​ ಮಾಡಿ ಚಿರತೆಯನ್ನು ಕೂಡಿಹಾಕಿದ ಕುಟುಂಬ

  • ಸ್ಥಳಕ್ಕೆ ಧಾವಿಸಿ ಚಿರತೆಯನ್ನು ಸೆರೆಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ

Leopard Attack: ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ಬಂದ ಚಿರತೆಯೊಂದು ಮನೆಯೊಳಗೆ ನುಗ್ಗಿ ಸಾಕು ನಾಯಿಯ ಮೇಲೆ ದಾಳಿ ಮಾಡಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ನಾಯಿಯನ್ನು ಎಳೆದುಕೊಂಡು ಬಾತ್‌ರೂಮ್ ಒಳಗೆ ಹೋದ ಚಿರತೆಯನ್ನು ಮನೆಯವರು ಸಮಯಪ್ರಜ್ಞೆ ಮೆರೆದು ಒಳಗೇ ಕೂಡಿಹಾಕಿದ್ದಾರೆ.

ರುದ್ರಪ್ರಯಾಗ ಜಿಲ್ಲೆಯ ಜಖೋಲಿ ಬ್ಲಾಕ್‌ನ ಸುಮಾಡಿ ಮಾರುಕಟ್ಟೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದಿನೇಶ್ ಥಪ್ಲಿಯಾಲ್ ಎಂಬುವವರ ಮನೆಯಲ್ಲಿ ಚಿರತೆ ದಾಳಿ ಮಾಡಿದೆ. ರಾತ್ರಿ ಅಥವಾ ಮುಂಜಾನೆ ನಡೆದ ಈ ಘಟನೆ ಬೆಳಿಗ್ಗೆ ಮನೆಯವರ ಗಮನಕ್ಕೆ ಬಂದಿದೆ.

ಬಾತ್‌ರೂಮ್‌ನಲ್ಲಿ ಚಿರತೆ ಕಂಡು ಬೆಚ್ಚಿಬಿದ್ದ ಕುಟುಂಬ

ಆಹಾರ ಅರಸುತ್ತಾ ಬಂದ ಚಿರತೆ ಮನೆಯಲ್ಲಿದ್ದ ಸಾಕು ನಾಯಿಯ ಮೇಲೆ ದಾಳಿ ಮಾಡಿದೆ. ಬಳಿಕ ನಾಯಿಯನ್ನು ಎಳೆದುಕೊಂಡು ಮನೆಯ ಬಾತ್‌ರೂಮ್ ಒಳಗೆ ಹೋಗಿದೆ. ಈ ವೇಳೆ ಬಾತ್‌ರೂಮ್‌ನಿಂದ ಶಬ್ದ ಕೇಳಿದ ಮನೆಯವರು ಒಳಗೆ ಹೋಗಿ ನೋಡಿದಾಗ ಚಿರತೆ ಇರುವುದು ಕಂಡು ಬೆಚ್ಚಿಬಿದ್ದಿದ್ದಾರೆ.

ಆದರೆ ಗಾಬರಿಯಾಗದೆ ಸಮಯಪ್ರಜ್ಞೆ ಮೆರೆದ ಮನೆಯವರು ತಕ್ಷಣ ಬಾತ್‌ರೂಮ್ ಬಾಗಿಲನ್ನು ಹೊರಗಿನಿಂದ ಭದ್ರವಾಗಿ ಲಾಕ್ ಮಾಡಿದ್ದಾರೆ. ಇದರಿಂದ ಚಿರತೆ ಮನೆಯೊಳಗೆ ಬೇರೆಡೆಗೆ ಹೋಗದಂತೆ ತಡೆಯಲು ಸಾಧ್ಯವಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿಯಿಂದ ಚಿರತೆ ರಕ್ಷಣೆ

ಘಟನೆ ನಡೆದ ತಕ್ಷಣ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬಾತ್‌ರೂಮ್‌ನಲ್ಲಿ ಸಿಲುಕಿದ್ದ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿದು ರಕ್ಷಿಸಿದ್ದಾರೆ.

ಇದನ್ನೂ ಓದಿ: Gold jewelry: ಒಡವೆ ಹಾಕಿಕೊಂಡ್ರೆ ಚರ್ಮ ಕಪ್ಪಾಗುತ್ತಾ? ನಿಮ್ಮ ದೇಹದ ಈ ಗುಣಗಳೇ ಕಾರಣ ಇರಬಹುದು!

ಆದರೆ ಚಿರತೆಯ ದಾಳಿಗೆ ಸಿಲುಕಿದ್ದ ಸಾಕು ನಾಯಿ ಮೃತಪಟ್ಟಿದೆ. ಚಿರತೆಯನ್ನು ಮನೆಯವರು ಬಾತ್‌ರೂಮ್‌ನಲ್ಲೇ ಕೂಡಿಹಾಕಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಜನವಸತಿ ಪ್ರದೇಶಗಳಲ್ಲಿ ಚಿರತೆಗಳ ಓಡಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.