

ಹೈದರಾಬಾದ್: ತೆಲಂಗಾಣದಲ್ಲಿ ಭಾರತ್ ರಾಷ್ಟ್ರ ಸಮಿತಿಯು ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಸರಣಿ ಆಘಾತಗಳನ್ನು ಎದುರಿಸುತ್ತಿದೆ. ಈಗಾಗಲೇ ಹಲವು ಶಾಸಕರು ಪಕ್ಷ ತೊರೆದಿದ್ದಾರೆ. ಎಂಎಲ್ಸಿಗಳಾದ ದಂಡೆ ವಿಠ್ಠಲ್, ಎಂಎಸ್ ಪ್ರಭಾಕರ್, ಭಾನು ಪ್ರಸಾದ್, ಬಸವರಾಜು ಸರಯ್ಯ, ಯೊಗ್ಗೆ ಮಲ್ಲೇಶಂ, ಬೊಗ್ಗರಪು ದಯಾನಂದ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ
ಶುಕ್ರವಾರ ಬೆಳಗ್ಗೆ ಅಮಾವಾಸ್ಯೆ ನಿಮಿತ್ತ ಗುರುವಾರ ರಾತ್ರಿ 1 ಗಂಟೆಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಕಾಂಗ್ರೆಸ್ ಪಕ್ಷದ ತೆಲಂಗಾಣ ಉಸ್ತುವಾರಿ ದೀಪದಾಸ್ ಮುನ್ಷಿ ಅವರ ಸಮ್ಮುಖದಲ್ಲಿ ಈ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಗುರುವಾರ ರಾತ್ರಿ ಹೈದರಾಬಾದ್ ದಸಪಲ್ಲ ಹೋಟೆಲ್‌ನಲ್ಲಿ ಸಭೆ ನಡೆಸಿದ ಈ ಎಂಎಲ್‌ಸಿಗಳು, ನಂತರ ರೇವಂತ್ ರೆಡ್ಡಿ ನಿವಾಸಕ್ಕೆ ಆಗಮಿಸಿದರು. ಸಿಎಂ ರೇವಂತ್ ರೆಡ್ಡಿ ದೆಹಲಿ ಭೇಟಿ ಮುಗಿಸಿದ ಬಳಿಕ ಆ ಪಕ್ಷದ ಶಾಸಕರಿಗೆ ಕಾಂಗ್ರೆಸ್ ಪಕ್ಷದ ಸ್ಕಾರ್ಫ್ ಹಾಕಿ ಪಕ್ಷಕ್ಕೆ ಆಹ್ವಾನಿಸಿದರು. ಈ ವೇಳೆ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ, ಮಾಜಿ ಸಚಿವ ಸುದರ್ಶನ ರೆಡ್ಡಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಭಾರತ ರಾಷ್ಟ್ರ ಸಮಿತಿಯ ಹಲವು ಶಾಸಕರು ಈಗಾಗಲೇ ಪಕ್ಷ ಬದಲಿಸಿರುವುದು ಮರೆಯುವ ಮುನ್ನವೇ ಆ ಪಕ್ಷಕ್ಕೆ ಸೇರಿದ ಆರು ಎಂಎಲ್ ಸಿಗಳು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಬಿಆರ್ ಎಸ್ ಪಕ್ಷಕ್ಕೆ ಬಲವಾದ ಪೆಟ್ಟು ನೀಡಿದೆ.
ತೆಲಂಗಾಣ ವಿಧಾನ ಪರಿಷತ್ತು 40 ಸದಸ್ಯರನ್ನು ಹೊಂದಿದೆ. ರಾಜ್ಯಪಾಲರ ಕೋಟಾದಲ್ಲಿ ಎರಡು ಎಂಎಲ್ ಸಿ ಸ್ಥಾನಗಳು ಖಾಲಿ ಇವೆ. ಟಿಆರ್ಎಸ್ನ ಒಟ್ಟು 6 ಎಂಎಲ್ ಸಿಗಳ ಸೇರ್ಪಡೆಯಿಂದ ಕಾಂಗ್ರೆಸ್ ಬಲ 13ಕ್ಕೆ ತಲುಪಿದೆ. ಪ್ರಸ್ತುತ ಪರಿಷತ್ತಿನಲ್ಲಿ ಬಿಆರ್‌ಎಸ್ ಪಕ್ಷ 29 ಸದಸ್ಯರ ಬಲವನ್ನು ಹೊಂದಿದೆ. ಇವರಲ್ಲಿ 6 ಮಂದಿ ಕಾಂಗ್ರೆಸ್ ಪಕ್ಷ ಸೇರಿದ್ದರಿಂದ ಪರಿಷತ್ತಿನಲ್ಲಿ ಪಕ್ಷದ ಬಲ 21ಕ್ಕೆ ಕುಸಿದಿದೆ.