ರಾಖಿ ಕಟ್ಟಿಸಿಕೊಂಡು ಚಿನ್ನಾಭರಣ ಕದ್ದು ಸಹೋದರಿಯ ಕೊಂದ್ರು!

Godl Rakhi new
Published on

ಅಹಮದಾಬಾದ್: ಸಹೋದರನ ವಿಚ್ಛೇದನದ ಹಿಂದೆ ಸಹೋದರಿಯ ಕೈವಾಡವಿದೆ ಎಂದು ಶಂಕಿಸಿ ಇಬ್ಬರು ಸಹೋದರರು ರಾಖಿ ಕಟ್ಟಿಸಿಕೊಳ್ಳುವ ನೆಪದಲ್ಲಿ ಸಹೋದರಿಯ ಮನೆಗೆ ಬಂದು, ಆಭರಣ ಕದ್ದು, ಆಕೆಯನ್ನು ಇರಿದು ಕೊಲೆಗೈದ ಘಟನೆ ನಡೆದಿದೆ.

ಆಗಸ್ಟ್ 4 ರಂದು ಅಹಮದಾಬಾದ್‌ನ ಸರಿತಾ ರೆಸಿಡೆನ್ಸಿಯಲ್ಲಿ ಈ ಘಟನೆ ನಡೆದಿದೆ.

ಇಬ್ಬರು ಆರೋಪಿಗಳನ್ನು ಸಾಜಿಜುಲ್ ಶೇಖ್ ಮತ್ತು ರೋಜೋಲಿ ಶೇಖ್ ಎಂದು ಗುರುತಿಸಲಾಗಿದೆ. ಮೃತ ಮಹಿಳೆಯನ್ನು ಸೌಕಿ ಅಲಿಯಾಸ್ ಮೀರಾ ರಾಮಸ್ವರೂಪ್ ಸಾಧು ಎಂದು ಗುರುತಿಸಲಾಗಿದೆ.

ಆಗಸ್ಟ್ 2 ರಂದು ರೋಜೋಲಿ ಮತ್ತು ಸಾಜಿಜುಲ್ ಪರಸ್ಪರ ಭೇಟಿಯಾಗಿದ್ದರು. ಸಾಜಿಜುಲ್ ವಿಚ್ಛೇದನದ ಹಿಂದಿನ ಕಾರಣ ಸೌಕಿ ಎಂದು ಆರೋಪಿಸಿ ಇಬ್ಬರೂ ಸೌಕಿಯನ್ನು ಕೊಲ್ಲುವ ನಿರ್ಧಾರ ಕೈಗೊಂಡರು. ಮದುವೆಗೆ ಇನ್ನೊಬ್ಬ ಹುಡುಗಿಯನ್ನು ಹುಡುಕಲು ಸಾಧ್ಯವಾಗದ ಕಾರಣ ಸಾಜಿಜುಲ್ ತನ್ನ ಸಹೋದರಿಯ ಮೇಲೆ ಕೋಪಗೊಂಡಿದ್ದ.

ಸಾಜಿಜುಲ್ ಮೊದಲು ಮದುವೆಯಾಗದ ಹೊರತು ರೋಜೋಲಿಯು ಮದುವೆಯಾಗಲು ಸಾಧ್ಯವಿರಲಿಲ್ಲ. ಸೌಕಿ ಎರಡು ಬಾರಿ ಮದುವೆಯಾಗಿದ್ದಳು. ಸೌಕಿಯ ಮೊದಲ ಮದುವೆ ರಾಕೇಶ್ ನೇಪಾಳಿಯೊಂದಿಗೆ ಆಗಿತ್ತು. ರಾಕೇಶ್ ತೀರಿಕೊಂಡಾಗ, ಆಕೆ ರಾಮ್​​ಸ್ವರೂಪ್ ಸಾಧುನನ್ನು ಮದುವೆಯಾದಳು.

ರಾಖಿ ಕಟ್ಟಿಸಿಕೊಳ್ಳುವ ನೆಪದಲ್ಲಿ ಸಾಜಿಜುಲ್ ಮತ್ತು ರೋಜೋಲಿ ತಮ್ಮ ಅಕ್ಕನ ಮನೆಗೆ ಹೋದರು.

ರಕ್ಷಾ ಬಂಧನದ ನಂತರ, ಸೌಕಿ ನೀಡಿದ ಚಹಾ ಕುಡಿದು ಇಬ್ಬರು ಸಹೋದರರು ಆಕೆಯನ್ನು ಇರಿದು ಕೊಲೆ ಮಾಡಿ ಬೀರು ತೆರೆದು 6 ಲಕ್ಷ ರೂ.ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕದ್ದಿದ್ದಾರೆ. ಆರೋಪಿಗಳೆರಡನ್ನೂ ಭಾನುವಾರ ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net