

ಮೇರಠ್: ಆಕೆಯಿನ್ನೂ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಆಗಲೇ ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು. ಆದರೆ ಈ ಪ್ರೀತಿಯನ್ನು ಮನೆಯವರೆಲ್ಲ ವಿರೋಧಿಸುತ್ತಿದ್ದರು. ಬಿಟ್ಟು ಬಿಡು ಎಂದು ಹಲವು ಬಾರಿ ಅಪ್ಪ-ಅಮ್ಮ ಬುದ್ಧಿ ಹೇಳಿದ್ದರು.
ಯಾರ ಮಾತನ್ನೂ ಕೇಳದ ಆಕೆಯ ಜೀವನ ದುರಂತ ಅಂತ್ಯ ಕಂಡಿದೆ. ಅದೂ ಅವಳ ಸೋದರನಿಂದ. ಉತ್ತರ ಪ್ರದೇಶದ ಸರ್ಧಾನಾ ಏರಿಯಾದ ನಿವಾಸಿಯಾಗಿದ್ದ ಟಿನಾ ಚೌಧರಿ ಎಂಬಾಕೆ ಮೃತ ಯುವತಿ. ಆಕೆಯ ಸೋದರ ಪ್ರಶಾಂತ್ ಚೌಧರಿಯ ಕೈಯಿಂದಲೇ ಹತ್ಯೆಗೀಡಾಗಿದ್ದಾಳೆ.
ಪ್ರಶಾಂತ್ ಚೌಧರಿ ತನ್ನ ಸ್ನೇಹಿತನ ಬರ್ತ್ ಡೇ ಪಾರ್ಟಿಯಲ್ಲಿ ಮದ್ಯಪಾನ ಮಾಡಿ ಮನೆಗೆ ಬಂದಿದ್ದ. ಆಗ ಕೂಡ ಇದೇ ವಿಚಾರ ಮುನ್ನೆಲೆಗೆ ಬಂತು. ಮದ್ಯದ ಅಮಲಿನಲ್ಲಿದ್ದ ಪ್ರಶಾಂತ್ ಇಡೀ ಕುಟುಂಬದವರ ಎದುರು ಟಿನಾಗೆ ಗುಂಡು ಹಾರಿಸಿದ. ಆಕೆಯ ಒಳ ತೊಡೆಗೆ ಒಂದು, ಗುಪ್ತಾಂಗಕ್ಕೆ ಮತ್ತೊಂದು ಮತ್ತು ಬೆನ್ನಿಗೆ ಒಂದು ಒಟ್ಟು ಮೂರು ಗುಂಡು ಹಾರಿಸಿದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಮನೆಯವರೆಲ್ಲ ಸೇರಿ ಆಸ್ಪತ್ರೆಗೆ ಸೇರಿಸಿದರು. ಚಿಕಿತ್ಸೆ ಫಲಿಸದೆ ಅವಳು ಮೃತಪಟ್ಟಿದ್ದಾಳೆ.
ಆದರೆ ಪ್ರಶಾಂತ್ನೇ ಹತ್ಯೆ ಮಾಡಿದ್ದ ಬಗ್ಗೆ ಪೊಲೀಸರಿಗೆ ತಿಳಿಸಲು ಕುಟುಂಬ ಹಿಂದೇಟು ಹಾಕಿದೆ. ಹತ್ಯೆಯ ಬಗ್ಗೆ ಬೇರೆಯೇ ಕತೆ ಕಟ್ಟಿದ್ದಲ್ಲದೆ, ದರೋಡೆ ಕೋರ ಮಾಡಿದ ಕೆಲಸ ಎಂದೂ ಹೇಳಿದೆ. ಆದರೆ ಮೃತ ಟೀನಾ ದೇಹವನ್ನು ಪೋಸ್ಟ್ ಮಾರ್ಟಮ್ಗೆ ತೆಗೆದುಕೊಂಡು ಹೋಗಲು ಕುಟುಂಬದವರು ತಡೆದಾಗ ಪೊಲೀಸರಿಗೆ ಅನುಮಾನ ಬಂದು ವಿಚಾರಣೆ ಚುರುಕುಗೊಳಿಸಿದರು.
ಏನೇ ಪ್ರಯತ್ನ ಮಾಡಿದರೂ ವಿಫಲರಾಗಿ, ಕೊನೆಗೆ ಸತ್ಯ ಒಪ್ಪಿಕೊಂಡಿದ್ದಾರೆ. ಕುಟುಂಬದವರ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)