ಕೌಟುಂಬಿಕ ಕಲಹಕ್ಕೆ ಬಾಮೈದನ ಕೊಂದ ಬಾವ

Vector illustration in HD very easy to make edits.
Published on

ಬೆಂಗಳೂರು: ಕೌಟುಂಬಿಕ ಕಲಹದಲ್ಲಿ ಬಾಮೈದನ ಮೇಲೆ ಮಾರಕಾಸದಿಂದ ದಾಳಿ ನಡೆಸಿ ಬಾವನೇ ಕೊಲೆ ಮಾಡಿದ್ದಾನೆ.

ಕಾಡುಗೊಂಡನಹಳ್ಳಿಯ ವೆಂಕಟೇಶ್ವರಪುರ ನಿವಾಸಿ ಕಿರಣ್‌ಕುಮಾರ್ ಮೃತ ಬಾಮೈದ. ಈತನ ಹತ್ಯೆ ಮಾಡಿದ ಲಕ್ಷ್ಮಣ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದ್ಯ ವ್ಯಾಸನಿ ಲಕ್ಷ್ಮಣ್ ಮನೆಯಲ್ಲಿ ಪತ್ನಿಯ ಜತೆಗೆ ಆಗಾಗ ಜಗಳ ಮಾಡುತ್ತಿದ್ದ. 15 ದಿನಗಳ ಹಿಂದೆಯೂ ಕುಡಿದು ಬಂದು ಪತ್ನಿ ಮೇಲೆ ಹಲ್ಲೆ ನಡೆಸಿದ್ದ. ಈ ವಿಷಯ ತಿಳಿದ ಕಿರಣ್‌ಕುಮಾರ್, ಮನೆಗೆ ಹೋಗಿ ಬೈದು ಎಚ್ಚರಿಕೆ ಕೊಟ್ಟು ಬಂದಿದ್ದ. ಇದೇ ವಿಚಾರಕ್ಕೆ ಮಂಗಳವಾರ ಸಹ ಬಾವ ಬಾಮೈದನ ನಡುವೆ ಗಲಾಟೆಯಾಗಿತ್ತು.

ಯುಗಾದಿ ಹಬ್ಬದ ಪ್ರಯುಕ್ತ ವೆಂಕಟೇಶ್ವರಪುರದಲ್ಲಿ ಮನೆ ಸಮೀಪ ಕಿರಣ್ ಕುಮಾರ್ ತನ್ನ ಸ್ನೇಹಿತರ ಜೊತೆಗೆ ಇಸ್ಪೀಟ್ ಆಡುತ್ತಿದ್ದ. ಇದೇ ವೇಳೆ ಲಕ್ಷ್ಮಣ್, ಮಾರಕಾಸದೊಂದಿಗೆ ತೆರಳಿ ಹೊಂಚು ಹಾಕಿ ಇಸ್ಪೀಟ್ ಎಲೆಗಳ ಮೇಲಿದ್ದ ಹಣ ಎತ್ತಲು ಬಗ್ಗಿದಾಗ ಕಿರಣ್ ಕುಮಾರ್ ಬೆನ್ನಿಗೆ ಇರಿದು ಅಲ್ಲಿಂದ ಪರಾರಿಯಾಗಿದ್ದ. ಸ್ಥಳದಲ್ಲಿ ಇದ್ದ ಇತರರು, ಗಾಯಾಳು ಕಿರಣ್ ಕುಮಾರ್‌ನನ್ನ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ.

ಆದರೆ, ಗಂಭೀರವಾಗಿ ಗಾಯಗೊಂಡಿದ್ದ ಕಿರಣ್ ಕುಮಾರ್ ತೀವ್ರ ರಕ್ತ ಸ್ರಾವ ಉಂಟಾಗಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆ.ಜಿ.ಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net