ತಾಯಿಯ ದೇಹದ ಜೊತೆ ನನ್ನನ್ನೂ ಸುಟ್ಟುಬಿಡಿ! ಇದು ಅಮ್ಮನ ಮೇಲಿನ ಪ್ರೀತಿ, ಭಾವುಕತೆ ಅಲ್ಲ ಬದಲಿಗೆ... | Dead Mother

ವಿಜಯವಾಣಿ - 2025-05-16T141257.930
Published on

Dead Mother: ತಮಗೆ ಜನ್ಮವಿತ್ತ ಪೋಷಕರ ಅಗಲಿಕೆ ಎಂಥ ಮಕ್ಕಳಿಗಾದರೂ ಅತೀವ ನೋವನ್ನು ತಂದೊಡ್ಡಲಿದೆ. ಅವರ ಇನ್ನಿಲ್ಲ ಎಂಬ ಸುದ್ದಿ ಜೀವನದ ಅವಿಭಾಜ್ಯ ಅಂಗವನ್ನು ಕಳೆದುಕೊಂಡಷ್ಟೇ ದುಃಖ ಕಾಡುತ್ತದೆ ಮತ್ತು ಬದುಕಿನಲ್ಲಿ ಬೆಲೆ ಕಟ್ಟಲಾಗದ ಆಸ್ತಿ ನಮ್ಮಿಂದ ದೂರವಾಯಿತು ಎಂದು ಭಾಸವಾಗುತ್ತದೆ. ಆದ್ರೆ, ಇಲ್ಲೊಬ್ಬ ಪಾಪಿ ಪುತ್ರ ತನ್ನ ಮೃತ ತಾಯಿಯ ಅಂತ್ಯಕ್ರಿಯೆ ಮಾಡಲು ಬಿಡದೆ ಆಕೆಯ ಒಡವೆ ಕೊಡುವಂತೆ ಸಹೋದರನ ಜೊತೆ ತೀವ್ರ ವಾಗ್ವಾದ ನಡೆಸಿದ್ದಾನೆ.

ಮೃತ ತಾಯಿ ತಮ್ಮನ್ನು ಅಗಲಿದ್ದಾರೆ ಎಂಬ ನೋವಿನಲ್ಲಿ ಹಾಗೂ ಜವಾಬ್ದಾರಿಯನ್ನು ಹೊರಬೇಕಿದ್ದ ಮಗನೇ ಅಮ್ಮನ ಬೆಳ್ಳಿ ಬಳೆಗಳಿಗಾಗಿ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ ವಿಚಿತ್ರ ಹಾಗೂ ಕೆರಳಿಸುವ ಘಟನೆ ರಾಜಸ್ಥಾನದ ಜೈಪುರದಲ್ಲಿ ವರದಿಯಾಗಿದೆ. ಸುಮಾರು 2 ಗಂಟೆಗಳ ಕಾಲ ಶವವನ್ನು ಚಿತೆಗೆ ಹಾಕಲು ಬಿಡದ ಮೃತ ಮಹಿಳೆಯ ಕಿರಿಯ ಪುತ್ರ, ತಾಯಿಯ ಮೈಮೇಲಿದ್ದ ಒಡವೆ, ಅಭರಣಗಳನ್ನು ಮೊದಲನೇ ಸಹೋದರನಿಗೆ ಹಸ್ತಾಂತರಿಸಿದ್ದಕ್ಕೆ ಸಿಟ್ಟಾಗಿ, ಚಿತೆಯಲ್ಲಿ ಮಲಗಿ ತಾಯಿಯ ಬೆಳ್ಳಿ ಬಳೆಗಳನ್ನು ಈ ಕೂಡಲೇ ತನಗೆ ಕೊಡಬೇಕು. ಇಲ್ಲವಾದಲ್ಲಿ, ಇಲ್ಲಿಂದ ಎದ್ದೇಳುವುದಿಲ್ಲ. ಅಮ್ಮನ ದೇಹದ ಜೊತೆ ನನ್ನ ದೇಹವನ್ನೂ ಸುಟ್ಟುಬಿಡಿ ಎಂದು ಹಠ ಹಿಡಿದಿದ್ದ.

ಮೃತ ಮಹಿಳೆಯನ್ನು ಭೂರಿ ದೇವಿ ಎಂದು ಹೇಳಲಾಗಿದ್ದು, ಇವರಿಗೆ 7 ಮಕ್ಕಳಿದ್ದಾರೆ. ಇವರಲ್ಲಿ 6 ಗಂಡು ಮಕ್ಕಳು ಒಂದೇ ಊರಿನಲ್ಲಿ ಉಳಿದುಕೊಂಡಿದ್ದಾರೆ. ಕಳೆದ 4 ವರ್ಷಗಳಿಂದ ಆಸ್ತಿ ವಿಚಾರಕ್ಕೆ 6 ಸಹೋದರರ ನಡುವೆ ಜಟಾಪಟಿ ನಡೆಯುತ್ತಲೇ ಇತ್ತು. ಈ ಮಧ್ಯೆ ತಾಯಿ ಮೃತಪಟ್ಟ ಹಿನ್ನೆಲೆ ಅವರನ್ನು ತಮ್ಮ ಹೆಗಲ ಮೇಲೆ ಹೊತ್ತು ಅಂತ್ಯಕ್ರಿಯೆ ಸ್ಥಳದವರೆಗೂ ಮೌನದಿಂದಲೇ ಬಂದ ಪಾಪಿ ಓಮ್​ಪ್ರಕಾಶ್​, ಇನ್ನೇನು ಚಿತೆಗೆ ಹಾಕಬೇಕು ಎನ್ನುವ ವೇಳೆಗೆ ಕಿತಾಪತಿ ತೆಗೆದಿದ್ದ. ಈತನನ್ನು ತಡೆಯಲು ಕೆಲವರು ಮುಂದಾದರೂ ಸಾಧ್ಯವಾಗಿಲ್ಲ. ಕೊನೆಗೆ ಬಳೆ ಹಸ್ತಾಂತರಿಸಿದ ನಂತರವೇ ಅಂತ್ಯಕ್ರಿಯೆಗೆ ಅನುವು ಮಾಡಿಕೊಟ್ಟಿದ್ದಾನೆ. ಈ ಘಟನೆಗೆ ಹಲವರು ಆಕ್ರೋಶ ಹೊರಹಾಕಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net