

ನವದೆಹಲಿ: ಲೇಹ್ನಲ್ಲಿ ವಾಸ್ತವ ಗಡಿರೇಖೆಯ (ಎಲ್ಎಸಿ) ಬಳಿಯ ಮುಂಚೂಣಿ ನೆಲೆಗಳಿಗೆ ಅದರಲ್ಲೂ ವಿಶೇಷವಾಗಿ ದೌಲತ್ ಬೇಗ್ ಓಲ್ಡಿಗೆ ಸಂಪರ್ಕ ಒದಗಿಸುವ ಸರ್ವಋತು ರಸ್ತೆ ನಿರ್ಮಾಣಕ್ಕೆ ಭಾರತೀಯ ಸೇನಾಪಡೆಯ ಬಾರ್ಡರ್ ರೋಡ್ ಆರ್ಗನೈಜೇಷನ್ (ಬಿಆರ್ಒ) ಯೋಧರು ಆದ್ಯತೆ ಮೇರೆಗೆ ಶ್ರಮಿಸುತ್ತಿದ್ದಾರೆ. ನೈಸರ್ಗಿಕ ಸವಾಲುಗಳನ್ನು ಮೆಟ್ಟಿನಿಂದು ಬೆಟ್ಟಗುಡ್ಡಗಳ ಮೇಲೆ ಕಪ್ಪುಹಾಸಿನ ರಸ್ತೆ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಲು ಹರಸಾಹಸ ಮಾಡುತ್ತಿದ್ದಾರೆ.
ಕರಕೋರಂ ಬೆಟ್ಟದ ಮೇಲೆ ಅಂದಾಜು 16,696 ಅಡಿ ಎತ್ತರದಲ್ಲಿ ಈ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಹಲವಾರು ಸವಾಲುಗಳನ್ನು ಒಳಗೊಂಡಿರುವ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯಗಳ ಸರಮಾಲೆಯೇ ಸೃಷ್ಟಿಯಾಗುವ ಸಾಧ್ಯತೆ ಇದ್ದರೂ, ಜೀವವನ್ನು ಪಣಕ್ಕೆ ಒಡ್ಡಿ ಕಾಮಗಾರಿ ಮಾಡಲಾಗುತ್ತಿದೆ. ಡುರ್ಬುಕ್ ಮತ್ತು ದೌಲತ್ ಬೇಗ್ ಓಲ್ಡಿ ನಡುವೆ ಭಾರವಾದ ಟ್ರಕ್ಗಳು ಮತ್ತು ಯುದ್ಧೋಪಕರಣಗಳನ್ನು ಸಾಗಿಸಲು ಅನುವಾಗುವಂತೆ ಸೂಕ್ತ ರೀತಿಯ ವಿನ್ಯಾಸದೊಂದಿಗೆ ರಸ್ತೆಯನ್ನು ನಿರ್ಮಿಸಲಾಗುತ್ತಿದೆ ಎಂದು ಕಮಾಂಡಿಂಗ್ ರೋಡ್ ಕನ್ಸ್ಟ್ರಕ್ಷನ್ ಕಂಪನಿಯ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಚೌಹಾಣ್ ಹೇಳಿದ್ದಾರೆ.
ಅಂದಾಜು 255 ಕಿ.ಮೀ. ಉದ್ದದ ದುರ್ಬುಕ್-ಶಿಯಾಕ್-ದೌಲತ್ ಬೇಗ್ ಓಲ್ಡಿ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಲು ಆದ್ಯತೆಯ ಮೇರೆಗೆ ಶ್ರಮಿಸಲಾಗುತ್ತಿದೆ ಎಂದು ಭಾರತೀಯ ಸೇನಾಪಡೆ ಕೂಡ ಪ್ರಕಟಿಸಿದೆ. ಡರ್ಬುಕ್ನಲ್ಲಿ 14 ಸಾವಿರ ಅಡಿ ಎತ್ತರದಲ್ಲಿ ಆರಂಭವಾಗುವ ಈ ರಸ್ತೆ, ಶಿಯಾಕ್ ನದಿಯನ್ನು ಸುತ್ತಿಬಳಸಿ ಡಿಬಿಒ ಬಳಿ 18 ಸಾವಿರ ಅಡಿ ಎತ್ತರಕ್ಕೆ ಸಾಗಲಿದೆ.
ಡಿಎಸ್-ಡಿಬಿಒ ರಸ್ತೆಯು ಎಲ್ಎಸಿಗೆ ಸಮಾನಾಂತರವಾಗಿ ಸಾಗುತ್ತದೆ. ಡರ್ಬುಕ್ನಲ್ಲಿರುವ ಡಿಬಿಒ ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್ಗೆ ಸಂಪರ್ಕ ಒದಗಿಸುತ್ತದೆ. ಈ ರಸ್ತೆಯ ಮೇಲೆ 37 ಸರ್ವಋತು ಸೇತುವೆಗಳನ್ನು ನಿರ್ಮಿಸಲಾಗುತ್ತಿದ್ದು, ಎಲ್ಎಸಿಯ ಉದ್ದಗಲಕ್ಕೂ ತ್ವರಿತವಾಗಿ ಯೋಧರು ಮತ್ತು ಯುದ್ಧೋಪಕರಣನ್ನು ಸಾಗಿಸಲು ಇದರಿಂದ ಅನುಕೂಲವಾಗಲಿದೆ. ಇದಕ್ಕೂ ಮೊದಲು ಲೇಹ್ನಿಂದ ಡಿಬಿಒಗೆ ತಲುಪಲು ಕನಿಷ್ಠ 7 ದಿನಗಳ ಬೇಕಾಗುತ್ತಿದ್ದವು. ಸಮರ್ಪಕವಾದ ರಸ್ತೆಗಳು ಇಲ್ಲದಿದ್ದದ್ದೇ ಇದಕ್ಕೆ ಕಾರಣ. ಈ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ ಕೇವಲ ಒಂದು ದಿನದಲ್ಲಿ ಯೋಧರು ಮತ್ತು ಯುದ್ಧೋಪಕರಣಗಳನ್ನು ಎಲ್ಎಸಿಯ ಮುಂಚೂಣಿ ನೆಲೆಗಳಿಗೆ ಕೊಂಡೊಯ್ಯಲು ಸಾಧ್ಯವಾಗಲಿದೆ ಎಂದು ಬಿಆರ್ಒದ ಮಹಾಪ್ರಧಾನ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಹರ್ಪಲ್ ಸಿಂಗ್ ತಿಳಿಸಿದ್ದಾರೆ.
ಹಿಮಾಲಯ ತಪ್ಪಲಿನ ಅತಿ ಎತ್ತರದ ಪ್ರದೇಶಗಳಲ್ಲಿ ಭಾರಿ ಹಿಮವರ್ಷ ಆಗುವುದರಿಂದ ಹಾಗೂ ಭಾರಿ ಚಳಿ ಇರುವುದರಿಂದ ವರ್ಷದಲ್ಲಿ 5 ತಿಂಗಳು ಮಾತ್ರ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ಪ್ರದೇಶಗಳಲ್ಲಿ ತಾಪಮಾನ ಮೈನಸ್ 50 ಡಿಗ್ರಿ ಸೆಲ್ಷಿಯಸ್ಗಿಂತ ಕಡಿಮೆ ಇರುತ್ತದೆ. ಭಾರಿ ಶೀತಗಾಳಿ ಬೀಸಲು ಆರಂಭವಾದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಭಾರಿ ಹಿಮಪಾತ ಹಾಗುವ ಕಾರಣ ರಸ್ತೆ ನಿರ್ಮಾಣ ಕಾಮಗಾರಿಗೆ ಅಡ್ಡಿಯುಂಟಾಗುತ್ತದೆ. ಆದ್ದರಿಂದ ಈ ಬಾರಿಯ ಚಳಿಗಾಲ ಆರಂಭಕ್ಕೂ ಮುನ್ನವೇ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವ ಗುರಿಯೊಂದಿಗೆ ಕೆಲಸ ಮಾಡಲಾಗುತ್ತಿದೆ. ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನ ಪರಿಸ್ಥಿತಿಯ ಹೊರತಾಗಿಯೂ ಕಾಮಗಾರಿಯನ್ನು ಸ್ಥಗಿತಗೊಳಿಸದೆ ಮುಂದುವರಿಸಲಾಗಿತ್ತು ಎಂದು ಹೇಳಿದ್ದಾರೆ.
ಚೀನಾ ಅಧ್ಯಯನ ಸಮೂಹ 73 ವ್ಯೂಹಾತ್ಮಕ ರಸ್ತೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು ಇವನ್ನು ಭಾರತ-ಚೀನಾ ಗಡಿ ರಸ್ತೆಗಳು ಎಂದು ಗುರುತಿಸಿದೆ. ಈ 73 ರಸ್ತೆಗಳ ಪೈಕಿ ಅಂದಾಜು 3,409 ಕಿ.ಮೀ. ಉದ್ದದ 61 ರಸ್ತೆಗಳ ನಿರ್ಮಾಣ ಜವಾಬ್ದಾರಿ ಬಿಆರ್ಒನದ್ದಾಗಿದೆ. ಇವುಗಳಲ್ಲಿ 255 ಕಿ.ಮೀ. ಉದ್ದದ ಡಿಎಸ್-ಡಿಬಿಒ ರಸ್ತೆ ಅತ್ಯಂತ ಪ್ರಮುಖ ರಸ್ತೆ ಎಂದು ಗುರುತಿಸಲಾಗಿದೆ.
ಕರಕೋರಂ ಬೆಟ್ಟದ ಸಾಲು ಭಾರತದ ಪಾಲಿಗೆ ಅತ್ಯಂತ ಮಹತ್ವದ ವಲಯವಾಗಿದೆ. ಈ ವಲಯದಲ್ಲಿ ಪಾಕಿಸ್ತಾನ ಮತ್ತು ಚೀನಾದೊಂದಿಗೆ ಗಡಿರೇಖೆಯನ್ನು ಅದು ಹಂಚಿಕೊಂಡಿದೆ. ಇದಕ್ಕೂ ಮುಖ್ಯವಾಗಿ ಈ ಭಾಗದಲ್ಲಿನ ಹವಾಮಾನ ಭಾರತದ ಪಾಲಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.
ನಾವು ಸದ್ಯ 18,250 ಅಡಿ ಎತ್ತರದಲ್ಲಿ ರಸ್ತೆಯನ್ನು ನಿರ್ಮಿಸುತ್ತಿದ್ದೇವೆ. ಡಿಎಸ್-ಡಿಬಿಒ ರಸ್ತೆಯಲ್ಲಿ ಅತಿ ಎತ್ತರದ ಸ್ಥಳ ಇದಾಗಿದೆ. ಈ ಪ್ರದೇಶದಲ್ಲಿ ಗಾಳಿಯಲ್ಲಿ ಆಮ್ಲಜನಕದ ತೀವ್ರ ಕೊರತೆ ಉಂಟಾಗುತ್ತದೆ. ಹಾಗಾಗಿ ಈ ಪ್ರದೇಶದಲ್ಲಿ ಜನರು ಮತ್ತು ಯಂತ್ರೋಪಕರಣಗಳು ತಮ್ಮ ಸಾಮರ್ಥ್ಯಕ್ಕಿಂತ ಶೇ.50 ಕಡಿಮೆ ಕೆಲಸ ಮಾಡುತ್ತವೆ. ಹಾಗಾಗಿ ಅಗಲವಾದ ರಸ್ತೆ ನಿರ್ಮಾಣ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಫೂರ್ಣಗೊಳಿಸಲು ಸಮಯದ ವಿರುದ್ಧ ಹೋರಾಡುವ ಪರಿಸ್ಥಿತಿ ಇದೆ ಎಂದು ಡಿಬಿಒ ಕ್ರೂಸೇಡರ್ಸ್ ರೋಡ್ ಕನ್ಸ್ಟ್ರಕ್ಷನ್ ಕಂಪನಿಯ ಆಫೀಸರ್ ಕಮಾಂಡಿಂಗ್ ಮೇಜರ್ ಆನಂದ್ ತಿಳಿಸಿದ್ದಾರೆ.
ಶಿಯಾಕ್ ನದಿ ಅತ್ಯಂತ ಪುರಾತನವಾದ ವ್ಯಾಪಾರಿ ಮಾರ್ಗವಾಗಿದೆ. ಈ ಮಾರ್ಗದಲ್ಲಿ ಸಂಚರಿಸುವಾಗ ಹಲವಾರು ವರ್ತಕರು ಮತ್ತು ಕಾರಾವಾನ್ಗಳು ನದಿಯ ಪಾಲಾಗಿವೆ. ಹಾಗಾಗಿ ಈ ನದಿಯನ್ನು ಶೋಕದ ನದಿ ಎಂದು ಕರೆಯಲಾಗುತ್ತದೆ. ಈ ನದಿಗೆ ಅಡ್ಡಲಾಗಿ ಬಿಆರ್ಒ 37 ಸೇತುವೆಗಳನ್ನು ನಿರ್ಮಿಸುತ್ತಿದೆ.
ಕೆಲವು ವರ್ಷಗಳ ಹಿಂದೆ ಸೇನಾ ಟ್ರಕ್ಗಳು ಕೂಡ ನದಿಯನ್ನು ದಾಟಿಕೊಂಡು ಹೋಗುವ ಸ್ಥಿತಿ ಇತ್ತು. ಇಲ್ಲವಾದರೆ, ನದಿಯ ದಡದುದ್ದಕ್ಕೂ ಅವು ಸಂಚರಿಸುವುದು ಅನಿವಾರ್ಯವಾಗಿತ್ತು. ಇದೀಗ ಈ ಪ್ರದೇಶದಲ್ಲಿ 70 ಟನ್ ಭಾರವನ್ನು ಸಾಗಿಸಲು ಅನುವಾಗುವ ರೀತಿಯಲ್ಲಿ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಹಾಗಾಗಿ ಅಗತ್ಯ ಸಂದರ್ಭದಲ್ಲಿ ಈ ರಸ್ತೆ ತುಂಬಾ ಉಪಯುಕ್ತವಾಗಿ ಪರಿಣಮಿಸಲಿದೆ ಎಂದು ಪ್ರಾಜೆಕ್ಟ್ ಹಿಮಾಂಕ್ನ ಮುಖ್ಯ ಇಂಜಿನಿಯರ್ ಬ್ರಿಗೇಡಿಯರ್ ಅರವಿಂದರ್ ಸಿಂಗ್ ತಿಳಿಸಿದ್ದಾರೆ.