

ಕ್ಯಾಲಿಫೋರ್ನಿಯಾ: ಮದುವೆಯಾಗಿ ಒಂದೂವರೆ ವರ್ಷದಲ್ಲಿ 41 ವರ್ಷದ ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್ ವಿಚ್ಛೇದನ ಪಡೆಯಲಿದ್ದಾರೆ. ಮೂಲಗಳ ಪ್ರಕಾರ, ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಅವರ ಪತಿ, ಮಾಡೆಲ್ ಮತ್ತು ಫಿಟ್‌ನೆಸ್ ತರಬೇತುದಾರ ಸ್ಯಾಮ್ ಅಸ್ಗರಿ (29) ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಬ್ರಿಟ್ನಿ ಸ್ಪಿಯರ್ಸ್ ಮತ್ತು ಸ್ಯಾಮ್ ಅಸ್ಗರಿ ಮೂರು ವಾರಗಳ ಹಿಂದೆ ಬೇರಾದರು. 2016 ರಲ್ಲಿ ಸ್ಪಿಯರ್ಸ್ ಅವರ 'ಸ್ಲಂಬರ್ ಪಾರ್ಟಿ' ಮ್ಯೂಸಿಕ್ ವಿಡಿಯೋದ ಸೆಟ್‌ನಲ್ಲಿ ಇಬ್ಬರೂ ಪರಸ್ಪರ ಭೇಟಿಯಾದರು. ಸ್ವಲ್ಪ ಸಮಯದ ನಂತರ ಡೇಟಿಂಗ್ ಪ್ರಾರಂಭಿಸಿದರು. ಸೆಪ್ಟೆಂಬರ್ 2021 ರಲ್ಲಿ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ ಸ್ಪಿಯರ್ಸ್ ಮತ್ತು ಅಸ್ಗರಿ ಅವರು ಜೂನ್ 9, 2022 ರಂದು ಕ್ಯಾಲಿಫೋರ್ನಿಯಾದ ಥೌಸಂಡ್ ಓಕ್ಸ್‌ನಲ್ಲಿ ವಿವಾಹವಾದರು.
ಬ್ರಿಟ್ನಿ ಮತ್ತು ಸ್ಯಾಮ್ ಸ್ವಲ್ಪ ಸಮಯದವರೆಗೆ ಇಬ್ಬರು ಜೊತೆಯಾಗಿರಲಿಲ್ಲ. ಅಂತಿಮವಾಗಿ ಅದು ವಿಚ್ಛೇದನದಲ್ಲಿ ಕೊನೆಗೊಂಡಿದೆ. ಬ್ರಿಟ್ನಿ ಸ್ಪಿಯರ್ಸ್ ವಿಚ್ಛೇದನದ ಬಗ್ಗೆ ಇನ್ನೂ ಪ್ರತಿಕ್ರಿಯಿಸದಿದ್ದರೂ, ಅಸ್ಗರಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಡಿವೋರ್ಸ್ ಕುರಿತು ದೃಢಪಡಿಸಿದ್ದಾರೆ. “ನನ್ನ ಹೆಂಡತಿ ಮತ್ತು ನಾನು ನಮ್ಮ ಸಂಸಾರದ ಪ್ರಯಾಣವನ್ನು ಒಟ್ಟಿಗೆ ಕೊನೆಗೊಳಿಸಲು ನಿರ್ಧರಿಸಿದ್ದೇವೆ. ಆದರೆ ಒಬ್ಬರಿಗೊಬ್ಬರು ಹೊಂದಿರುವ ಪ್ರೀತಿ ಮತ್ತು ಗೌರವವನ್ನು ಹಾಗೆ ಹಿಡಿದಿಟ್ಟುಕೊಳ್ಳುತ್ತೇವೆ. ಆಕೆಗೆ ನಾನು ಯಾವಾಗಲೂ ಶುಭ ಹಾರೈಸುತ್ತೇನೆ. ಗೌಪ್ಯತೆಯನ್ನು ಕೇಳುವುದು ಹಾಸ್ಯಾಸ್ಪದ. ಆದ್ದರಿಂದ ಮಾಧ್ಯಮ ಸೇರಿದಂತೆ ಎಲ್ಲರೂ ಚಿಂತನಶೀಲರಾಗಿರಲು ನಾನು ಕೇಳುತ್ತೇನೆ'' ಎಂದು ಬರೆದುಕೊಂಡಿದ್ದಾರೆ. ಸ್ಪಿಯರ್ಸ್ ಅವರಿಗೆ ಇದು ಮೂರನೆಯ ಮದುವೆಯಾದರೆ, ಅಸ್ಘರಿಯವರಿಗೆ ಇದು ಮೊದಲ ವಿವಾಹವಾಗಿದೆ.
ಕಳೆದ ತಿಂಗಳು, ಸ್ಪಿಯರ್ಸ್ ತಮ್ಮ ಬಹುನಿರೀಕ್ಷಿತ ಆತ್ಮಚರಿತ್ರೆ 'ದಿ ವುಮನ್ ಇನ್ ಮಿ' ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.