ಬ್ರಿಟಷ್ ಬಂಗಲೆ ಸ್ಥಳ ಪ್ರವೇಶಕ್ಕೆ ಶುಲ್ಕ

kgl
ಜೋಗ ಜಲಪಾತ ಸಮೀಪದ ರಾಜಾಟಾಪ್ ನೆತ್ತಿಯ ಮೇಲಿನ ಚಿತ್ರ.
Published on

ಕಾರ್ಗಲ್: ವಿಶ್ವ ವಿಖ್ಯಾತ ಜೋಗ ಜಲಪಾತದ ರಾಜಾಫಾಲ್ಸ್ ನೆತ್ತಿಯ ಮೇಲಿಂದ ಜಲಪಾತವನ್ನು ವೀಕ್ಷಿಸಲು ಬ್ರಿಟಿಷ್ ಬಂಗಲೆ (ಬಾಂಬೆ ಐಬಿ) ಗೆ ತೆರಳುವ ಪ್ರವಾಸಿ ವಾಹನಗಳಿಗೆ ಹಲಗೇರಿ ಗ್ರಾಪಂನಿಂದ ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತಿದೆ. ಈ ಮೂಲಕ ಒಂದೇ ಜಲಪಾತ ವೀಕ್ಷಣೆಗೆ ಎರಡು ಕಡೆ ಶುಲ್ಕ ಕೊಡಬೇಕೆ ಎಂಬ ಪ್ರಶ್ನೆ ಪ್ರವಾಸಿಗರಿಂದ ಕೇಳಿಬರುತ್ತಿದೆ.

ಜೋಗ ಜಲಪಾತ ಹಾಗೂ ವೀಕ್ಷಣಾ ಸ್ಥಳವು ಪ್ರವಾಸೋದ್ಯಮದ ಜೋಗ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಯಲ್ಲಿದ್ದರೆ, ಜಲಪಾತ ಪ್ರದೇಶವು ಉತ್ತರ ಕನ್ನಡ ಜಿಲ್ಲೆಗೆ ಸೇರಿದೆ. ಈಚೆಗೆ ಸಿದ್ದಾಪುರ ತಾಲೂಕು ಆಡಳಿತದ ನಿರ್ದೇಶನದ ಮೇರೆಗೆ ಕಳೆದ ಒಂದು ವಾರದಿಂದ ಸ್ಥಳೀಯ ಹಲಗೇರಿ ಗ್ರಾಪಂ ಸಿಬ್ಬಂದಿ ಬ್ರಿಟಿಷ್ ಬಂಗಲೆ ಸಮೀಪ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ನಿಗದಿಪಡಿಸಿದೆ. ದ್ವಿಚಕ್ರ ವಾಹನಕ್ಕೆ 20, ಕಾರುಗಳಿಗೆ 50, ಮಿನಿ ಬಸ್ 100, ಬಸ್‌ಗಳಿಗೆ 150 ರೂ. ದರ ನಿಗದಿಪಡಿಸಲಾಗಿದೆ.

ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜೋಗ ಜಲಪಾತದ ಆವರಣಕ್ಕೆ ವಾಹನಗಳ ಪ್ರವೇಶಕ್ಕೆ ಅವಕಾಶವಿಲ್ಲ. ಹೊರಭಾಗದ ರಸ್ತೆ ಬದಿಗೆ ನಿಲ್ಲಿಸಲಾಗುವ ಕಾರಣದಿಂದ ಅಭಿವೃದ್ಧಿ ಪ್ರಾಧಿಕಾರವು ಪ್ರವಾಸಿಗರಿಗೆ ಪಾರ್ಕಿಂಗ್ ಶುಲ್ಕ ವಿಧಿಸುತ್ತಿಲ್ಲ. ಪ್ರವಾಸಿಗರ ಪ್ರವೇಶಕ್ಕೆ ಮಾತ್ರ ಹಣ ಪಡೆಯಲಾಗುತ್ತಿದೆ. ಬ್ರಿಟಿಷ್ ಬಂಗಲೆ ಸ್ಥಳ ಪ್ರವೇಶಕ್ಕೆ ಪ್ರವಾಸಿಗರನ್ನು ಹೊರತುಪಡಿಸಿ ವಾಹನಗಳಿಗೆ ಮಾತ್ರ ಶುಲ್ಕ ಪಡೆಯಲಾಗುತ್ತಿದೆ.

ಬಾಂಬೆ ಐಬಿ ಪ್ರದೇಶ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಗೆ ಬರುತ್ತದೆ. ಅಲ್ಲಿನ ಸಿಬ್ಬಂದಿಯೇ ಎಲ್ಲವನ್ನೂ ನಿರ್ವಹಿಸುತ್ತಿದ್ದಾರೆ. ಬ್ರಿಟಿಷ್ ಬಂಗಲೆ ಪ್ರದೇಶವನ್ನು ಜೆಎಂಎ ಅಡಿ ಅಭಿವೃದ್ಧಿಪಡಿಸಿ, ನಿರ್ವಹಿಸುವ ನಿಟ್ಟಿನಲ್ಲಿ ಹಸ್ತಾಂತರ ಮಾಡುವಂತೆ ಕೇಳುವ ಪ್ರಸ್ತಾಪ ಜೆಎಂಎ ಮುಂದಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಧರ್ಮಪ್ಪ ತಿಳಿಸಿದರು.

ಶಾಸಕ ಭೀಮಣ್ಣ ನಾಯ್ಕ ಅವರು ಸ್ವಚ್ಛತೆ, ಕುಡಿಯುವ ನೀರು, ಭದ್ರತೆ ಸೇರಿ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪಾರ್ಕಿಂಗ್ ದರ ಪಡೆಯಲು ಪಂಚಾಯಿತಿಗೆ ಸೂಚಿಸಿದ್ದಾರೆ. ಅದರಂತೆ ಸಿಬ್ಬಂದಿ ಟಿಕೆಟ್ ನೀಡಿ ಪಾರ್ಕಿಂಗ್ ಹಣ ಸಂಗ್ರಹ ಮಾಡುತ್ತಿದ್ದಾರೆ ಎಂದು ಹಲಗೇರಿ ಗ್ರಾಮ ಪಂಚಾಯಿತಿ ಸದಸ್ಯ ದಿಲೀಪ್‌ಕುಮಾರ್ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net