

ರಾಜ ಅಥವಾ ರಾಣಿ ಸಂಸತ್ತಿನ ವರ್ಷವನ್ನು ರಾಜ್ಯ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭಿಸುತ್ತಾರೆ, ಈ ಸಮಯದಲ್ಲಿ ಅವರು ಹೌಸ್ ಆಫ್ ಲಾರ್ಡ್ಸ್ನಲ್ಲಿ ಭಾಷಣ ಮಾಡಿ, ಸರ್ಕಾರದ ನೀತಿ ಯೋಜನೆಗಳನ್ನು ಪ್ರಕಟಿಸುತ್ತಾರೆ.ವೃದ್ಧಾಪ್ಯದ ಕಾರಣದಿಂದಾಗಿ ರಾಣಿ ಎಲಿಜಬೆತ್ 2022ರ ಭಾಷಣವನ್ನು ಸ್ವತಃ ಮಾಡಲು ಸಾಧ್ಯವಾಗಲಿಲ್ಲ. ಅವರ ಪರವಾಗಿ ರಾಜಕುಮಾರ ಚಾರ್ಲ್ಸ್ ಭಾಷಣ ಮಾಡಿದ್ದರು.
ನೋಟು, ರಾಷ್ಟ್ರಗೀತೆ ಬದಲು
ರಾಣಿ ಎಲಿಜಬೆತ್ ನಿಧನಾನಂತರ ಹಾಗೂ ದೊರೆ ಚಾರ್ಲ್ಸ್ 3 ಅವರ ಪಟ್ಟಾಧಿಕಾರವಾದ ಮೇಲೆ ಬ್ರಿಟನ್ನಿನ ಅನೇಕ ವಲಯಗಳಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ರಾಷ್ಟ್ರಗೀತೆ, ನೋಟು, ಸ್ಟಾಂಪು, ಪೋಸ್ಟ್ ಬಾಕ್ಸ್, ಪಾಸ್ಪೋರ್ಟ್ಗಳು ಬದಲಾವಣೆ ಕಾಣಲಿವೆ. ಬ್ಯಾಂಕಿನ ನಾಣ್ಯ ಹಾಗೂ ನೋಟುಗಳಲ್ಲಿ ಕ್ರಮೇಣವಾಗಿ ದೊರೆ ಚಾರ್ಲ್ಸ್ 3 ಅವರ ಚಿತ್ರ ಕಾಣಿಸಿಕೊಳ್ಳಲಿದೆ. ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಈಸ್ಟ್ ಕೆರೆಬಿಯನ್ ದೇಶಗಳ ಕರೆನ್ಸಿಗಳಲ್ಲಿ ಕೂಡ ಇಂತಹ ಬದಲಾವಣೆಯಾಗುತ್ತದೆ. ಪ್ರಸ್ತುತವಾಗಿ ರಾಣಿಯ ಚಿತ್ರ ಇರುವ 450 ಕೋಟಿ ನೋಟುಗಳು ಚಲಾವಣೆಯಲ್ಲಿವೆ. ಇದರ ಮೊತ್ತ 8000 ಕೋಟಿ ಪೌಂಡ್ (7,35,760 ಕೋಟಿ ರೂಪಾಯಿ). ನೋಟುಗಳ ಬದಲಾವಣೆಗೆ ಅಂದಾಜು 2 ವರ್ಷ ಸಮಯ ಬೇಕಾಗಬಹುದು. ರಾಷ್ಟ್ರಗೀತೆಯಲ್ಲಿ ‘ಗಾಡ್ ಸೇವ್ ದ ಕ್ವೀನ್’ ಬದಲು ‘ಗಾಡ್ ಸೇವ್ ದ ಕಿಂಗ್’ ಎಂದಾಗಲಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಕೆನಡಾದಲ್ಲಿ ಕೂಡ ಇದೇ ತಿದ್ದುಪಡಿ ಮಾಡಲಾಗುವುದು. ಇದೇ ರೀತಿ ಈ ಎಲ್ಲ ದೇಶಗಳ ಪಾಸ್ಪೋರ್ಟ್ಗಳಲ್ಲಿ ‘ಹರ್ ಮೆಜೆಸ್ಟಿ’ ಬದಲು ‘ಹಿಸ್ ಮೆಜೆಸ್ಟಿ’ ಎಂದು ಬದಲಾವಣೆ ಮಾಡಲಾಗುವುದು.
ಪಟ್ಟಾಧಿಕಾರ ಸಮಾರಂಭ?
ರಾಣಿ ಎಲಿಜಬೆತ್ ಐಐ ಅವರು ಸುದೀರ್ಘ ಅವಧಿವರೆಗೆ ರಾಣಿಯಾಗಿ ಜನಪ್ರಿಯತೆ ಗಳಿಸಿದ್ದರು. ಈಗ ಅವರ ಪುತ್ರ ಪ್ರಿನ್ಸ್ ಚಾರ್ಲ್ಸ್ ರಾಜನಾಗುತ್ತಿದ್ದು, ಪಟ್ಟಾಧಿಕಾರ ಸಮಾರಂಭದಲ್ಲಿ ಅವರಿಗೆ ಕಿರೀಟ ಧಾರಣೆ ಮಾಡಲಾಗುತ್ತದೆ. ರಾಣಿ ನಿಧನದ ಶೋಕಾಚರಣೆಯ ಕೆಲ ಸಮಯದ ನಂತರ ಈ ಸಮಾರಂಭ ನಡೆಯಲಿದೆ. ಕ್ಯಾಂಟರ್ಬರಿಯ ಆರ್ಚ್ಬಿಷಪ್ ಪಟ್ಟಾಧಿಕಾರ ಆಚರಣೆಗಳನ್ನು ನಡೆಸಿಕೊಡುತ್ತಾರೆ. ರಾಜನಿಗೆ ಪವಿತ್ರ ತೈಲದಿಂದ ಅಭಿಷೇಕ ಮಾಡಲಾಗುತ್ತದೆ. ರಾಜವಂಶದ ಸಂಕೇತಗಳಾದ ಮಂಡಲ ಮತ್ತು ರಾಜದಂಡವನ್ನು ರಾಜ ಪಡೆಯುತ್ತಾನೆ. ವಜ್ರ-ರತ್ನಗಳಿಂದ ಅಲಂಕೃತವಾದ ಸೇಂಟ್ ಎಡ್ವರ್ಡ್ ಅವರ ಕಿರೀಟವನ್ನು ನೂತನ ರಾಜನಿಗೆ ಧಾರಣೆ ಮಾಡಲಾಗುತ್ತದೆ.
ಉತ್ತರಾಧಿಕಾರಿ ಆಯ್ಕೆ ಹೇಗೆ?
ಇಂಗ್ಲೆಂಡಿನ ರಾಜ ಅಥವಾ ರಾಣಿಯ ಹಿರಿಯ ಪುತ್ರ ಅಥವಾ ಪುತ್ರಿ ಉತ್ತರಾಧಿಕಾರಿಯಾಗಿ ಆಯ್ಕೆಯಾಗುವುದು ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಇದರನುಸಾರವಾಗಿ ರಾಣಿ ಎಲಿಜಬೆತ್ ಅವರ ಹಿರಿಯ ಪುತ್ರ ಪ್ರಿನ್ಸ್ ಚಾರ್ಲ್ಸ್ ಈಗ ನೂತನ ರಾಜ ಆಗಲಿದ್ದಾರೆ. ಅವರ ಹಿರಿಯ ಪುತ್ರ ಪ್ರಿನ್ಸ್ ವಿಲಿಯಮ್್ಸ ಅವರು ನಂತರದ ಉತ್ತರಾಧಿಕಾರಿಯಾಗುತ್ತಾರೆ. ವಿಲಿಯಮ್್ಸ ಅವರ ಹಿರಿಯ ಮಗ ಪ್ರಿನ್ಸ್ ಜಾರ್ಜ್ ಮುಂದಿನ ತಲೆಮಾರಿನ ಉತ್ತರಾಧಿಕಾರಿಯಾಗಲಿದ್ದಾನೆ.
ಕ್ರೀಡಾ ಸ್ಪರ್ಧೆಗಳು ರದ್ದು
ರಾಣಿ ನಿಧನದ ಹಿನ್ನೆಲೆಯಲ್ಲಿ ಬ್ರಿಟನ್ನಲ್ಲಿ ಎಲ್ಲ ಕ್ರೀಡಾ ಸ್ಪರ್ಧೆಗಳನ್ನು ರದ್ದುಗೊಳಿಸಲಾಗಿದೆ. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ಓವಲ್ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 2ನೇ ದಿನದಾಟವನ್ನೂ ರದ್ದುಗೊಳಿಸಲಾಯಿತು. ಗುರುವಾರ-ಶುಕ್ರವಾರದ ಕುದುರೆ ರೇಸ್ಗಳೂ ರದ್ದುಗೊಂಡಿವೆ. ರಗ್ಬಿ, ಫುಟ್ಬಾಲ್, ಟೆನಿಸ್ ಪಂದ್ಯಗಳು, ಸೈಕ್ಲಿಂಗ್ ಸ್ಪರ್ಧೆಗಳನ್ನು ರದ್ದುಗೊಳಿಸಿ, ರಾಣಿಗೆ ಗೌರವ ಸೂಚಿಸಲಾಯಿತು.
ಅರಸೊತ್ತಿಗೆ ಎಷ್ಟು ಜನಪ್ರಿಯ?
ರಾಣಿಯ ಪಟ್ಟದ ವಜ್ರ ಮಹೋತ್ಸವವನ್ನು ಈಚೆಗೆ ಆಚರಿಸಿದ ಸಂದರ್ಭದಲ್ಲಿ ‘ಯುವ್ಗವ್’ ಎಂಬ ಸಂಸ್ಥೆ ಜನಮತ ಸಂಗ್ರಹಿಸಿತ್ತು. ಅದರ ಪ್ರಕಾರ ಶೇ. 62ರಷ್ಟು ಜನರು ದೇಶವು ಅರಸೊತ್ತಿಗೆಯನ್ನು ಮುಂದುವರಿಸಬೇಕೆಂದು ಅಭಿಪ್ರಾಯಪಟ್ಟಿದ್ದರು. ಶೇ. 22ರಷ್ಟು ಜನರು ದೇಶದ ಮುಖ್ಯಸ್ಥರನ್ನು ಚುನಾಯಿಸಬೇಕೆಂದು ಹೇಳಿದ್ದರು. 2021ರಲ್ಲಿ ಇಪ್ಸೊಸ್ ಮೋರಿ ಸಂಸ್ಥೆಯ ಜನಮತ ಸಂಗ್ರಹದಲ್ಲಿ ಇದೇ ಪ್ರಮಾಣದ ಫಲಿತಾಂಶ ದೊರೆತಿತ್ತು. ಪ್ರತಿ ಐವರಲ್ಲಿ ಒಬ್ಬರು ಮಾತ್ರ, ಅರಸೊತ್ತಿಗೆಯನ್ನು ಕಿತ್ತುಹಾಕುವುದು ದೇಶಕ್ಕೆ ಒಳಿತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. 2012ರಲ್ಲಿ ಶೇ. 75ರಷ್ಟು ಜನರು ಅರಸೊತ್ತಿಗೆ ಪರವಾಗಿದ್ದರು.
ರಾಣಿ ಎಲಿಜಬೆತ್ ರಾಜ ಫಿಲಿಪ್ ಅವರನ್ನು ಮದುವೆಯಾದರು. ಫಿಲಿಪ್ 2021ರಲ್ಲಿ ನಿಧನರಾದರು. ಇವರಿಬ್ಬರ ವೈವಾಹಿಕ ಜೀವನ 73 ವರ್ಷಗಳ ಸುದೀರ್ಘ ಬಾಂಧವ್ಯ ಒಳಗೊಂಡಿತ್ತು. ಇವರಿಗೆ ನಾಲ್ವರು ಮಕ್ಕಳು, 8 ಮೊಮ್ಮಕ್ಕಳು, 12 ಮರಿಮೊಮ್ಮಕ್ಕಳು ಇದ್ದಾರೆ. ಈ ದಂಪತಿಗೆ ಪ್ರಿನ್ಸ್ ಚಾರ್ಲ್ಸ್ ಹಿರಿಯ ಪುತ್ರ. ನಂತರ ಹುಟ್ಟಿದವರು ಪ್ರಿನ್ಸೆಸ್ ಆನ್, ಪ್ರಿನ್ಸ್ ಆಂಡ್ರೂ, ಪ್ರಿನ್ಸ್ ಎಡ್ವರ್ಡ್.
ಹಿರಿಯ ವಯಸ್ಸಿನ ದೊರೆ
ರಾಜನಾಗಿ ಪಟ್ಟಕ್ಕೇರುತ್ತಿರುವ ಪ್ರಿನ್ಸ್ ಚಾರ್ಲ್ಸ್ ಅವರಿಗೆ ಈಗ 73 ವರ್ಷ ವಯಸ್ಸು. ಇಂಗ್ಲೆಂಡಿನ ಇತಿಹಾಸದಲ್ಲಿ ರಾಜನಾಗಿ ಪದಗ್ರಹಣ ಮಾಡುತ್ತಿರುವ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿ ಇವರಾಗಲಿದ್ದಾರೆ. ಇನ್ನು ಅವರನ್ನು 3ನೇ ಚಾರ್ಲ್ಸ್ ದೊರೆ ಎಂದು ಗುರುತಿಸಲಾಗುತ್ತದೆ. ಯುನೈಟೆಡ್ ಕಿಂಗ್ಡಂಗೆ ಮಾತ್ರವಲ್ಲದೆ, ಕೆಲ ಕಾಮನ್ವೆಲ್ತ್ ರಾಷ್ಟ್ರಗಳಿಗೂ ಇವರು ಅರಸನಾಗುತ್ತಾರೆ. ಇಂಗ್ಲೆಂಡ್ ಚರ್ಚ್ನ ಸವೋಚ್ಚ ಆಡಳಿತಗಾರರೂ ಆಗುತ್ತಾರೆ. ಚಾರ್ಲ್ಸ್ ಅವರನ್ನು ‘ಹಿಸ್ ರಾಯಲ್ ಹೈನೆಸ್’ ಎಂಬುದರ ಬದಲಾಗಿ ‘ಹಿಸ್ ಮೆಜೆಸ್ಟಿ’ ಎಂದು ಹಾಗೂ ಅವರ ಪತ್ನಿ ಕ್ಯಾಮಿಲಾ ಅವರನ್ನು ‘ಹರ್ ಮೆಜೆಸ್ಟಿ’ ಎಂಬ ಗೌರವಸೂಚಕದೊಂದಿಗೆ ಸಂಬೋಧಿಸಲಾಗುತ್ತದೆ.