

ಕರೊನಾ ಸೋಂಕಿನಿಂದ ಚೇತರಿಸಿಕೊಳ್ಳಲು ಅತ್ಯಂತ ಸುದೀರ್ಘ ಸಮಯ ತೆಗೆದುಕೊಂಡ ಮಹಿಳೆಯ ಯಾತನೆಯ ಕತೆ ಇದು..
ಇಡೀ ಬ್ರಿಟನ್ನಲ್ಲಿ ಕರೊನಾದಿಂದ ಗುಣಮುಖರಾಗಲು ಈ ಮಹಿಳೆಯಷ್ಟು ಸುದೀರ್ಘ ಸಮಯ ತೆಗೆದುಕೊಂಡವರು ಯಾರೂ ಇಲ್ಲ. ಈಕೆಯೊಂದು ದಾಖಲೆ ಸೃಷ್ಟಿಸಿದ್ದರೂ ಅದು ನೋವಿನಿಂದ ಕೂಡಿದ ರೆಕಾರ್ಡ್ ಆಗಿದೆ
ಫಾತಿಮಾ ಬ್ರೈಡ್ಲ್ ಎಂಬ 35 ವರ್ಷದ ಮಹಿಳೆ ಬರೋಬ್ಬರಿ 130 ದಿನ( ಸುಮಾರು 4 ತಿಂಗಳು) ಕರೊನಾ ವಿರುದ್ಧ ಸೆಣೆಸಾಡಿದ್ದಾಳೆ. ಅಷ್ಟೂ ದಿನ ಆಸ್ಪತ್ರೆಯಲ್ಲೇ ಇದ್ದ ಇವರು 105ದಿನ ವೆಂಟಿಲೇಟರ್ನಲ್ಲಿ ಇದ್ದರು.
ಮಾರ್ಚ್ 6ರಂದು ಮೊರೆಕ್ಕೊದ ಮೊಹಮ್ಮದೀಯಾದಿಂದ ತಮ್ಮ ದೇಶಕ್ಕೆ ವಾಪಸ್ ಬಂದಿದ್ದರು. ಅದಾದ ಮೂರ್ನಾಲ್ಕು ದಿನದಲ್ಲಿ ಫಾತಿಮಾ ಪತಿ ಟ್ರೇಸಿ (56) ಅವರಲ್ಲಿ ಸೋಂಕಿನ ಲಕ್ಷಣಗಳು ಕಾಣಲು ಪ್ರಾರಂಭಿಸಿದವು. ಫಾತಿಮಾ ತನ್ನ ಪತಿಯನ್ನು ಮಾ.12ರಂದು ಸೌತ್ಆಂಪ್ಟನ್ನಲ್ಲಿರುವ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು. ಅಂದೇ ಫಾತಿಮಾ ಅವರಲ್ಲೂ ಕರೊನಾ ಇರುವುದು ದೃಢಪಟ್ಟಿತ್ತು.
ಮಾರ್ಚ್ 18ರವರೆಗೂ ಇವರಿಗೆ ಆ್ಯಂಟಿಬಯೋಟಿಕ್ ನೀಡಲಾಗುತ್ತಿತ್ತು. ಆದರೆ ಫಾತಿಮಾ ಆರೋಗ್ಯ ಮಾತ್ರ ಹದಗೆಡುತ್ತಲೇ ಹೋಗುತ್ತಿತ್ತು. ನಂತರ ಅವರನ್ನು ಐಸಿಯುಗೆ ಸೇರಿಸಲಾಯಿತು. ಅದಾದ ಬಳಿಕ ಅವಳಿಗೆ ನ್ಯೂಮೊನಿಯಾ ಅಟ್ಯಾಕ್ ಆಗಿ ಕೋಮಾಕ್ಕೆ ಜಾರಿ, 40 ದಿನ ಅದೇ ಸ್ಥಿತಿಯಲ್ಲಿಯೇ ಇದ್ದರು. ಒಂದೆಡೆ ನ್ಯುಮೊನೀಯಾ, ಮತ್ತೊಂದೆಡೆ ಕರೊನಾ ವೈರಸ್..ಈ ಮಧ್ಯೆ ಬೆಡ್ನಲ್ಲಿ ಮಲಗಿ ಉಂಟಾದ ಗಾಯ. ಆಕೆಯ ಪರಿಸ್ಥಿತಿ ತುಂಬ ಗಂಭೀರವಾಗಿತ್ತು. ಇದನ್ನೂ ಓದಿ: ಕನ್ಯತ್ವ ಕಳೆದುಕೊಳ್ಳುವುದು ಯುವತಿಯ ಆಯ್ಕೆಯೇ ಹೊರತು ಒತ್ತಡ ಅಲ್ಲ!; ಊರ್ವಶಿ ರೌಟೇಲಾ
ವೈದ್ಯರು ನಿರಂತರ ಚಿಕಿತ್ಸೆ ನೀಡುತ್ತಿದ್ದರು. ಕ್ರಮೇಣ ಅವರ ಉಸಿರಾಟದಲ್ಲಿ ಚೇತರಿಕೆ ಕಂಡುಬಂತು. 40 ಪರ್ಸಂಟ್ನಿಂದ ಬೇಗಬೇಗ 70 ಪರ್ಸಂಟ್ನಷ್ಟು ಚೇತರಿಕೆಯಾಯಿತು. ನಂತರ 105ದಿನ ವೆಂಟಿಲೇಟರ್ನಲ್ಲಿ ಇಟ್ಟು ಆಕೆಗೆ ಚಿಕಿತ್ಸೆ ನೀಡಲಾಯಿತು. ಇದೀಗ ಮಾತನಾಡುವಷ್ಟು, ವಾಕರ್ ಮೂಲಕ ನಡೆಯುವಷ್ಟು ಶಕ್ತಿ ಅವರಿಗೆ ಬಂದಿದೆ. ಕರೊನಾ ನೆಗೆಟಿವ್ ಎಂದು ವರದಿ ಬಂದಿದೆ.
ತನಗೆ ಆರೈಕೆ ಮಾಡಿದ ನರ್ಸ್, ಡಾಕ್ಟರ್ಗಳಿಗೆ ಫಾತಿಮಾ ಧನ್ಯವಾದ ಹೇಳಿದ್ದಾರೆ. ನನಗೆ ಹೊಸ ಜೀವನ ಕೊಟ್ಟಿದ್ದೇ ನರ್ಸ್ಗಳು ಮತ್ತು ವೈದ್ಯರು. ಇದು ಕನಸು ಎಂಬಂತೆ ಭಾಸವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: VIDEO ] ಕೋವಿಡ್ ವಿರುದ್ಧ ಜಾಗೃತಿ ಮೂಡಿಸಲು ಈತ ಮಾಡಿದ ಸೃಜನಶೀಲ ತಂತ್ರ ಇದು..
ಫಾತಿಮಾ ಬ್ರೈಡ್ಲ್ ಅವರ ಕರೊನಾ ಹೋರಾಟ ನೋಡಿದ ಅಲ್ಲಿನ ಆರೋಗ್ಯ ಸಚಿವಾಲಯ ಕೂಡ ಆತಂಕ ವ್ಯಕ್ತಪಡಿಸಿತ್ತು. ಇದೀಗ ಆರೋಗ್ಯ ಕಾರ್ಯದರ್ಶಿ ಮಟ್ ಹ್ಯಾನ್ಕಾಕ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಫಾತಿಮಾ ಅವರ ಆರೋಗ್ಯ ಸುಧಾರಿಸಿದ ವಿಷಯ ಕೇಳಿ ಥ್ರಿಲ್ ಆಗುತ್ತಿದೆ ಎಂದಿದ್ದಾರೆ.
ಇನ್ನು ಫಾತಿಮಾರ ಪತಿ, ಮಾಜಿ ಸೈನಿಕ ಟ್ರೇಸಿಯವರಂತೂ ತುಂಬ ಸಂತೋಷ ವ್ಯಕ್ತಪಡಿಸಿದ್ದಾರೆ. ನನಗೆ ಅವಳನ್ನು ಯಾವತ್ತು ನೋಡುತ್ತೇನೆ ಎಂಬ ಕಾತುರ ಶುರುವಾಗಿತ್ತು. ನನ್ನ ಪತ್ನಿ ವೈದ್ಯಕೀಯ ಪವಾಡಕ್ಕೆ ಸಾಕ್ಷಿಯಾದಳು ಎಂದಿದ್ದಾರೆ. (ಏಜೆನ್ಸೀಸ್)