ಬ್ರಿಟನ್ ಈಗ ನನ್ನ ಮನೆ! 16 ವರ್ಷಗಳ ಬಳಿಕ ಬ್ರಿಟಿಷ್ ಪೌರತ್ವ ಪಡೆದ IPL ಸಂಸ್ಥಾಪಕ ಲಲಿತ್ ಮೋದಿ | Lalit Modi

Lalit Modi British Citizenship.
ಬ್ರಿಟಿಷ್ ಪೌರತ್ವ ಪಡೆದಿರುವುದಾಗಿ ಘೋಷಿಸಿದ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ
Published on: 
Summary
  • ಬ್ರಿಟಿಷ್ ಪೌರತ್ವ ಪಡೆದ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ

  • ಸೆಪ್ಟೆಂಬರ್ 15ರಂದು ಬ್ರಿಟಿಷ್ ಪೌರತ್ವ ಸ್ವೀಕರಿಸಿರುವುದಾಗಿ ಘೋಷಣೆ

  • ಆಕ್ಸ್‌ಫರ್ಡ್ ಯೂನಿಯನ್‌ನಲ್ಲಿ ಮಾತನಾಡುವ ವೇಳೆ ಮಾಹಿತಿ ಬಹಿರಂಗ

  • ಬ್ರಿಟನ್ ಈಗ ತಮ್ಮ ಮನೆ ಎಂದು ಹೇಳಿಕೊಂಡ ಐಪಿಎಲ್ ಸಂಸ್ಥಾಪಕ

Lalit Modi British Citizenship: ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಈಗ ಬ್ರಿಟನ್ ಪ್ರಜೆಯಾಗಿದ್ದಾರೆ. ಸೆಪ್ಟೆಂಬರ್ 15ರಂದು ಬ್ರಿಟಿಷ್ ಪೌರತ್ವ ಪಡೆದಿರುವುದಾಗಿ ಅವರು ಘೋಷಿಸಿದ್ದಾರೆ. ಹಲವು ವರ್ಷಗಳಿಂದ ಬ್ರಿಟನ್‌ನಲ್ಲೇ ನೆಲೆಸಿರುವ ಅವರು, ಇನ್ಮುಂದೆ ಇದೇ ತಮ್ಮ ಮನೆ ಎಂದು ಹೇಳಿಕೊಂಡಿದ್ದಾರೆ. ಈ ಬೆಳವಣಿಗೆ ತಮ್ಮ ಪಾಲಿಗೆ ಹೆಮ್ಮೆಯ ಮತ್ತು ಖುಷಿಯ ವಿಚಾರ ಎಂದು ಲಲಿತ್ ಮೋದಿ ತಿಳಿಸಿದ್ದಾರೆ.

ಶನಿವಾರ ಆಕ್ಸ್‌ಫರ್ಡ್ ಯೂನಿಯನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವಾಗ ಲಲಿತ್ ಮೋದಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಬ್ರಿಟನ್ ಜತೆಗಿನ ತಮ್ಮ ಹಲವು ವರ್ಷಗಳ ನಂಟು ಮತ್ತು ಅಲ್ಲಿನ ಪೌರತ್ವ ಪಡೆಯಲು ನಡೆಸಿದ ಪ್ರಯತ್ನಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಲಲಿತ್ ಮೋದಿ, ಸೆಪ್ಟೆಂಬರ್ 15ರಂದು ಕುಟುಂಬದವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಬ್ರಿಟಿಷ್ ಪೌರತ್ವ ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.

‘ಬ್ರಿಟಿಷ್ ಪೌರತ್ವ ಪಡೆಯುವುದು ಒಂದು ಗೌರವ ಮತ್ತು ಜವಾಬ್ದಾರಿ. ಇದನ್ನು ಹೆಮ್ಮೆ, ಕೃತಜ್ಞತೆ ಹಾಗೂ ನಿಜವಾದ ಒಗ್ಗಟ್ಟಿನ ಭಾವನೆಯೊಂದಿಗೆ ಸ್ವೀಕರಿಸುತ್ತೇನೆ’ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಬ್ರಿಟನ್‌ನಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ತಮಗೆ ಅಲ್ಲಿನ ಜನರು, ಸಂಸ್ಥೆಗಳು, ಸಂಪ್ರದಾಯಗಳು ಮತ್ತು ಮೌಲ್ಯಗಳ ಬಗ್ಗೆ ಅಪಾರ ಗೌರವವಿದೆ ಎಂದು ಮೋದಿ ಹೇಳಿದ್ದಾರೆ. ವಿವಿಧ ಸಂಸ್ಕೃತಿ ಮತ್ತು ಅನುಭವಗಳ ಮೂಲಕ ಸಾಗಿರುವ ತಮ್ಮ ಜೀವನದ ಬಗ್ಗೆ ಉಲ್ಲೇಖಿಸಿರುವ ಅವರು, ಇದೀಗ ತಮ್ಮ ಮನೆ ಎಂದು ಹೆಮ್ಮೆಯಿಂದ ಕರೆಯುವ ದೇಶಕ್ಕೆ ಸಕಾರಾತ್ಮಕ ಕೊಡುಗೆ ನೀಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

ಈ ಸಂತಸದ ಸುದ್ದಿಯನ್ನು ಹಂಚಿಕೊಳ್ಳಲು ಅವಕಾಶ ನೀಡಿದ ಕುಟುಂಬದವರು, ಸ್ನೇಹಿತರು ಮತ್ತು ಆಕ್ಸ್‌ಫರ್ಡ್ ಯೂನಿಯನ್‌ಗೆ ಧನ್ಯವಾದವನ್ನೂ ಅರ್ಪಿಸಿದ್ದಾರೆ. ಬ್ರಿಟಿಷ್ ಪೌರತ್ವ ಪಡೆದ ವಿಚಾರವನ್ನು ಹಂಚಿಕೊಂಡ ದಿನ ಕಿಂಗ್ ಚಾರ್ಲ್ಸ್ III ಅವರ ಜನ್ಮದಿನದ ಸಂಭ್ರಮದ ಸಂದರ್ಭಕ್ಕೆ ಹೊಂದಿಕೆಯಾಗಿತ್ತು ಎಂದು ಲಲಿತ್ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಪತಿಯಿಂದ ದೂರವಿದ್ದರೂ ದಾಂಪತ್ಯ ಗಟ್ಟಿಯಾಗಿದೆ; ವಿಚ್ಛೇದನ ವದಂತಿಗೆ ರಮ್ಯಾ ಕೃಷ್ಣನ್ ಖಡಕ್​ ಉತ್ತರ! Ramya Krishnan

ತಮ್ಮ ಎಕ್ಸ್ ಪೋಸ್ಟ್‌ನ ಕೊನೆಯಲ್ಲಿ 'ಗಾಡ್ ಸೇವ್ ದಿ ಕಿಂಗ್!' ಎಂದು ಬರೆದುಕೊಂಡಿದ್ದಾರೆ. ಇನ್ನು, 2010ರಲ್ಲಿ ಐಪಿಎಲ್‌ಗೆ ಸಂಬಂಧಿಸಿದ ಹಣಕಾಸಿನ ಅಕ್ರಮಗಳ ಆರೋಪಗಳ ತನಿಖೆ ಆರಂಭವಾದ ಬೆನ್ನಲ್ಲೇ ಲಲಿತ್ ಮೋದಿ ಭಾರತ ತೊರೆದಿದ್ದರು. ಅಂದಿನಿಂದ ಅವರು ಬ್ರಿಟನ್‌ನಲ್ಲೇ ವಾಸಿಸುತ್ತಿದ್ದಾರೆ.