ಪತಿಯಿಂದ ದೂರವಿದ್ದರೂ ದಾಂಪತ್ಯ ಗಟ್ಟಿಯಾಗಿದೆ; ವಿಚ್ಛೇದನ ವದಂತಿಗೆ ರಮ್ಯಾ ಕೃಷ್ಣನ್ ಖಡಕ್​ ಉತ್ತರ! Ramya Krishnan

ಗಂಡ-ಹೆಂಡತಿ ಎಂದ ಮೇಲೆ ಒಂದೇ ಮನೆಯಲ್ಲಿ ಇರಬೇಕು, ಒಂದೇ ನಗರದಲ್ಲಿ ಬದುಕಬೇಕು ಎಂಬ ನಿಯಮವೇನಿಲ್ಲ ಎಂಬುದನ್ನು ನಟಿ ರಮ್ಯಾ ಕೃಷ್ಣನ್ ತಮ್ಮ ಜೀವನದ ಮೂಲಕವೇ ಹೇಳಿದ್ದಾರೆ. ಪತಿ, ನಿರ್ದೇಶಕ ಕೃಷ್ಣ ವಂಶಿ ಅವರಿಂದ ಬೇರೆ ನಗರದಲ್ಲಿ ವಾಸಿಸುತ್ತಿರುವುದಕ್ಕೆ ವಿಚ್ಛೇದನವೇ ಕಾರಣ ಎಂಬ ವದಂತಿಗಳಿಗೆ ಇದೀಗ ತೆರೆ ಎಳೆದಿದ್ದಾರೆ. Ramya Krishnan
ವಿಚ್ಛೇದನ ವದಂತಿಗೆ ರಮ್ಯಾ ಕೃಷ್ಣನ್ ಖಡಕ್​ ಉತ್ತರ
ವಿಚ್ಛೇದನ ವದಂತಿಗೆ ರಮ್ಯಾ ಕೃಷ್ಣನ್ ಖಡಕ್​ ಉತ್ತರWEB
Published on: 

ಚೆನ್ನೈ: ಗಂಡ-ಹೆಂಡತಿ ಎಂದ ಮೇಲೆ ಒಂದೇ ಮನೆಯಲ್ಲಿ ಇರಬೇಕು, ಒಂದೇ ನಗರದಲ್ಲಿ ಬದುಕಬೇಕು ಎಂಬ ನಿಯಮವೇನಿಲ್ಲ ಎಂಬುದನ್ನು ನಟಿ ರಮ್ಯಾ ಕೃಷ್ಣನ್ ತಮ್ಮ ಜೀವನದ ಮೂಲಕವೇ ಹೇಳಿದ್ದಾರೆ. ಪತಿ, ನಿರ್ದೇಶಕ ಕೃಷ್ಣ ವಂಶಿ ಅವರಿಂದ ಬೇರೆ ನಗರದಲ್ಲಿ ವಾಸಿಸುತ್ತಿರುವುದಕ್ಕೆ ವಿಚ್ಛೇದನವೇ ಕಾರಣ ಎಂಬ ವದಂತಿಗಳಿಗೆ ಇದೀಗ ತೆರೆ ಎಳೆದಿದ್ದಾರೆ. ನಾವಿಬ್ಬರೂ ಇನ್ನೂ ದಂಪತಿಯಾಗಿಯೇ ಇದ್ದೇವೆ. ವೃತ್ತಿಯ ಕಾರಣದಿಂದ ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದೇವೆ ಎಂದು ಹೇಳುವ ಮೂಲಕ ತಮ್ಮ ವೈವಾಹಿಕ ಜೀವನದ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹಲವು ದಶಕಗಳಿಂದ ಗುರುತಿಸಿಕೊಂಡಿರುವ ನಟಿ ರಮ್ಯಾ ಕೃಷ್ಣನ್ ಅವರಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. 1990ರ ದಶಕದಲ್ಲಿ ನಾಯಕಿಯಾಗಿ ಮಿಂಚಿದ್ದ ಅವರು, ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಪಾತ್ರದ ಮೂಲಕ ದೇಶಾದ್ಯಂತ ದೊಡ್ಡ ಜನಪ್ರಿಯತೆ ಗಳಿಸಿದರು. ಆದರೆ ತಮ್ಮ ವೈಯಕ್ತಿಕ ಬದುಕಿನ ವಿಚಾರಗಳನ್ನು ಸಾರ್ವಜನಿಕವಾಗಿ ಹೆಚ್ಚು ಹಂಚಿಕೊಳ್ಳದ ನಟಿ, ಇತ್ತೀಚೆಗೆ ರಾ ಟಾಕ್ಸ್ ವಿತ್ ವಿಕೆ ಸಂದರ್ಶನದಲ್ಲಿ ದಾಂಪತ್ಯ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಬೇರೆ ನಗರಗಳಲ್ಲಿ ವಾಸವಿರುವುದೇಕೆ?

ನಿರ್ದೇಶಕ ಕೃಷ್ಣ ವಂಶಿ ಅವರೊಂದಿಗೆ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ ರಮ್ಯಾ, ವೃತ್ತಿಪರ ಜವಾಬ್ದಾರಿಗಳೇ ಪ್ರತ್ಯೇಕವಾಗಿ ವಾಸಿಸಲು ಕಾರಣ ಎಂದು ತಿಳಿಸಿದ್ದಾರೆ. ನಾವು ಇನ್ನೂ ಮದುವೆಯಾಗಿಯೇ ಇದ್ದೇವೆ. ಇಬ್ಬರೂ ಅನುಕೂಲಕರವಾಗಿ ಬೇರೆ ಬೇರೆ ನಗರಗಳಲ್ಲಿ ಸಂತೋಷದಿಂದ ಬದುಕುತ್ತಿದ್ದೇವೆ. ಇದಕ್ಕೆ ಸಂಪೂರ್ಣವಾಗಿ ನಮ್ಮ ವೃತ್ತಿಯೇ ಕಾರಣ ಎಂದು ಹೇಳಿದ್ದಾರೆ.

ಈ ನಿರ್ಧಾರ ಹೇಗೆ ಆರಂಭವಾಯಿತು ಎಂಬುದನ್ನೂ ನಟಿ ವಿವರಿಸಿದ್ದಾರೆ. ಅವರು ಕಿರುತೆರೆ ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಕುಟುಂಬ ಹೈದರಾಬಾದ್‌ನಲ್ಲಿತ್ತು. ಆದರೆ ಕೆಲಸದ ನಿಮಿತ್ತ ಪ್ರತಿ 15 ದಿನಗಳಿಗೊಮ್ಮೆ ಚೆನ್ನೈಗೆ ಪ್ರಯಾಣಿಸಬೇಕಾಗುತ್ತಿತ್ತು. ಈ ಓಡಾಟದಿಂದ ಮಗ ರಿತ್ವಿಕ್ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತು. ತಾವು ನಗರ ಬಿಟ್ಟು ಹೊರಟಾಗಲೆಲ್ಲ ಮಗನಿಗೆ ಅನಾರೋಗ್ಯ ಕಾಣಿಸಿಕೊಳ್ಳುತ್ತಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಈ ಸಮಸ್ಯೆಯನ್ನು ಪತಿ ಕೃಷ್ಣ ವಂಶಿ ಅವರೊಂದಿಗೆ ಚರ್ಚಿಸಿದ ಬಳಿಕ ಮಗನನ್ನು ಚೆನ್ನೈನ ಶಾಲೆಗೆ ಸೇರಿಸುವ ನಿರ್ಧಾರ ಕೈಗೊಂಡರಂತೆ. ಆರಂಭದಲ್ಲಿ ಮಗನ ಅನುಕೂಲಕ್ಕಾಗಿ ತೆಗೆದುಕೊಂಡ ಈ ನಿರ್ಧಾರ ಕ್ರಮೇಣ ಇಬ್ಬರಿಗೂ ಹೊಂದಿಕೊಂಡ ಜೀವನಶೈಲಿಯಾಯಿತು.

ಇದನ್ನೂ ಓದಿ : ಮದುವೆಯಾಗದ ನಟಿ ಛತ್​ ಪೂಜೆ ಮಾಡಿದ್ದಕ್ಕೆ ಆಕ್ಷೇಪ; ಅಕ್ಷರಾ ಸಿಂಗ್‌ಗೆ ನೆಟ್ಟಿಗರ ಪ್ರಶ್ನೆ| Akshara Singh

ಜಗಳಕ್ಕಿಂತ ಸ್ನೇಹವೇ ಮೇಲು

ಪ್ರತ್ಯೇಕವಾಗಿ ವಾಸಿಸುವುದರಿಂದ ತಮ್ಮ ಸಂಬಂಧದಲ್ಲಿ ಬದಲಾವಣೆಯಾಗಿದೆ ಎಂದೂ ರಮ್ಯಾ ಹೇಳಿದ್ದಾರೆ. ಸದಾ ಒಟ್ಟಿಗೆ ಇದ್ದಾಗ ಉಂಟಾಗುತ್ತಿದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗಿಂತ ಈಗ ಪರಸ್ಪರ ಉತ್ತಮ ಸ್ನೇಹಿತರಾಗಿದ್ದೇವೆ ಎಂಬುದು ಅವರ ಮಾತು. ಒಬ್ಬರಿಗೊಬ್ಬರು ವೈಯಕ್ತಿಕ ಜಾಗ ನೀಡಿರುವುದರಿಂದ ಸಂಬಂಧ ಇನ್ನಷ್ಟು ಸುಲಭವಾಗಿದೆ ಎಂಬ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ.

ಮದುವೆಗೂ ಮುನ್ನವೇ ಇಂತಹ ಸಲಹೆ ನೀಡಿದ್ದರಂತೆ

ಸಂದರ್ಶನದಲ್ಲಿ ಮದುವೆಗೂ ಮುನ್ನ ಕೃಷ್ಣ ವಂಶಿ ನೀಡಿದ್ದ ಸಲಹೆಯೊಂದನ್ನೂ ರಮ್ಯಾ ನೆನಪಿಸಿಕೊಂಡಿದ್ದಾರೆ. ಮದುವೆಯಾಗದೆಯೇ ಇಬ್ಬರೂ ಒಟ್ಟಿಗೆ ಜೀವನ ನಡೆಸಬಹುದು ಎಂಬ ಪ್ರಸ್ತಾಪವನ್ನು ಕೃಷ್ಣ ವಂಶಿ ಮಾಡಿದ್ದರಂತೆ. ಅಂದಿನ ಆ ಮಾತನ್ನು ನೆನಪಿಸಿಕೊಂಡ ನಟಿ, ಆಗಲೇ ಅವರ ಸಲಹೆಗೆ ಒಪ್ಪಿಕೊಳ್ಳಬೇಕಿತ್ತು ಎಂದು ನಗುತ್ತಲೇ ಹೇಳಿದ್ದಾರೆ.

ರಮ್ಯಾ ಕೃಷ್ಣನ್ ಮತ್ತು ಕೃಷ್ಣ ವಂಶಿ 2003ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಕ್ಕೂ ಮುನ್ನ 1998ರಲ್ಲಿ ಬಿಡುಗಡೆಯಾದ ತೆಲುಗು ಸಿನಿಮಾ ಚಂದ್ರಲೇಖಾದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಈ ಚಿತ್ರವನ್ನು ಕೃಷ್ಣ ವಂಶಿ ನಿರ್ದೇಶಿಸಿದ್ದು, ರಮ್ಯಾ ನಾಯಕಿಯಾಗಿ ಅಭಿನಯಿಸಿದ್ದರು. ದಂಪತಿಗೆ ರಿತ್ವಿಕ್ ವಂಶಿ ಎಂಬ ಪುತ್ರನಿದ್ದಾನೆ.