ಬ್ರಿಟನ್ ಅಣ್ವಸ್ತ್ರ ಸಜ್ಜಿತ ಇಸ್ಲಾಮಿಕ್ ರಾಷ್ಟ್ರ!

turtmn
Published on

ನವದೆಹಲಿ: ಅಣ್ವಸ್ತ್ರಗಳನ್ನು ಹೊಂದುವ ಮೊದಲ ನೈಜ ಇಸ್ಲಾಮಿಕ್ ರಾಷ್ಟ್ರವಾಗಿ ಬ್ರಿಟನ್ ಹೊರಹೊಮ್ಮಲಿದೆ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೊನಾಲ್ಡ್ ಟ್ರಂಪ್ ಅವರಿಂದ ಉಪಾಧ್ಯಕ್ಷ ಅಭ್ಯರ್ಥಿ ಆಗಿ ಆಯ್ಕೆಗೊಂಡಿರುವ ಜೆ.ಡಿ.ವಾನ್ಸ್ ಹೇಳಿದ್ದಾರೆ. ಅವರ ಈ ಹೇಳಿಕೆ ವಿವಾದಾತ್ಮಕವಾಗಿ ಪರಿಣಮಿಸಿದೆ.

ಕಳೆದ ವಾರ ಕಾನ್ಪರೆನ್ಸ್ ಫಾರ್ ಯುಕೆ ಕನ್ಸರ್ವೆಟಿವ್ಸ್​ನಲ್ಲಿ ಭಾಗಿ ಆಗಿದ್ದಾಗ ಅವರು ಈ ವಿಷಯ ಪ್ರಸ್ತಾಪಿಸಿದ್ದರು. ‘ಅಣ್ವಸ್ತ್ರಗಳನ್ನು ಹೊಂದುವ ಮೊದಲ ನಿಜವಾದ ಇಸ್ಲಾಮಿಕ್ ರಾಷ್ಟ್ರ ಯಾವುದಾಗಿರಲಿದೆ ಎಂಬ ಕುರಿತು ಮಿತ್ರನ ಜತೆ ರ್ಚಚಿಸುತ್ತಿದ್ದೆ. ಬಹುಶಃ ಇರಾನ್, ಇಲ್ಲವೇ ಪಾಕಿಸ್ತಾನ ಎಂಬ ಮಾತುಕತೆಯ ಕೊನೆಯಲ್ಲಿ ನಾವು ಅದು ಬ್ರಿಟನ್ ಆಗಿರಲಿದೆ ಎಂಬ ನಿರ್ಣಯಕ್ಕೆ ಬಂದೆವು. ಏಕೆಂದರೆ ಅಲ್ಲಿ ಲೇಬರ್ ಪಾರ್ಟಿ ಅಧಿಕಾರಕ್ಕೆ ಬಂದಿದೆ’ ಎಂದು ವಾನ್ಸ್ ಹೇಳಿದ್ದಾರೆ. ವಾನ್ಸ್ ಅವರ ಈ ಹೇಳಿಕೆಗೆ ಬ್ರಿಟನ್ ಉಪ ಪ್ರಧಾನಿ ಆಂಜೆಲಾ ರೇನರ್ ಆಕ್ಷೇಪ ವ್ಯಕ್ತಪಡಿಸಿದ್ದು, ಅವರು (ವಾನ್ಸ್) ಲಾಭದಾಯಕ ಟೀಕೆ ಮಾಡುವ ಇತಿಹಾಸ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ತೆರಿಗೆ ಕಡಿತಗೊಳಿಸುವ ಭರವಸೆ : ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್, ತಮ್ಮನ್ನು ಗೆಲ್ಲಿಸಿದರೆ ತೆರಿಗೆ ಕಡಿತ ಮಾಡುವ ಭರವಸೆ ನೀಡಿದ್ದಾರೆ. ಈ ಚುನಾವಣೆಯಲ್ಲಿ ಗೆದ್ದರೆ ಕಾರ್ಪೆರೇಟ್ ತೆರಿಗೆ ದರವನ್ನು ಶೇ. 15ಕ್ಕೆ ಇಳಿಸುವುದಾಗಿ ಅವರು ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ತಮ್ಮ ಹಿಂದಿನ ಅಧ್ಯಕ್ಷೀಯ ಅವಧಿಯಲ್ಲಿ ಕಾರ್ಪೆರೇಟ್ ತೆರಿಗೆಯನ್ನು ಶೇ. 28ರಿಂದ ಶೇ. 21ಕ್ಕೆ ಇಳಿಸಿದ್ದರು. ಈ ಸಲ ಅವರು ಅದನ್ನು ಶೇ. 15ಕ್ಕೆ ಇಳಿಸುವ ಮೂಲಕ ಬಹುತೇಕ ಅರ್ಧಕ್ಕೆ ಇಳಿಸುವ ಗುರಿಯನ್ನು ಹೊಂದಿದ್ದಾರೆ. ಆದರೆ ಇದರಿಂದ ಹತ್ತು ವರ್ಷಗಳಲ್ಲಿ ಒಂದು ಟ್ರಿಲಿಯನ್ ಡಾಲರ್ ಹೊರೆ ಆಗಲಿದೆ ಎಂದು ಅಂದಾಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net