ಇಂದು ಮಧ್ಯಾಹ್ನ ಮುಂಬೈ ಕಡಲತೀರಕ್ಕೆ ಅಪ್ಪಳಿಸಲಿದೆ 4.51 ಮೀಟರ್ ಎತ್ತರದ ಅಲೆಗಳು

mumbai-rains
Published on
ಮುಂಬೈ: ಮಹಾನಗರದಲ್ಲಿ ನಿನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇದಲ್ಲದೆ, ಇಂದು ಮಧ್ಯಾಹ್ನ 12.47ರ ಸುಮಾರಿಗೆ ಮುಂಬೈ ಕಡಲ ತೀರಕ್ಕೆ ಮತ್ತು ಕೆಳಮಟ್ಟದಲ್ಲಿರುವ ಪ್ರದೇಶಕ್ಕೆ 4.51 ಮೀಟರ್ ಎತ್ತರದ ಅಲೆಗಳು ಅಪ್ಪಳಿಸಲಿವೆ ಎಂದು ಬೃಹನ್​ಮುಂಬೈ ಮುನ್ಸಿಪಲ್ ಕಾರ್ಪೊರೇಷನ್​ ಎಚ್ಚರಿಸಿದೆ.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚೆ ಪ್ರಕಾರ, ಮುಂಬೈನಲ್ಲಿ ಇಂದೂ ಭಾರಿ ಮಳೆಯಾಗಲಿದ್ದು, ಎಲ್ಲ ಅಂಗಡಿ ಮುಂಗಟ್ಟು ಮತ್ತು ಸರ್ಕಾರಿ ಕಚೇರಿಗಳನ್ನು ಮುಚ್ಚುವಂತೆ ಬಿಎಂಸಿ ಸೂಚಿಸಿದೆ. ಇದಕ್ಕೂ ಮುನ್ನ ಬಿಎಂಸಿ ಟ್ವೀಟ್ ಮಾಡಿ, ಸಿಟಿ ಮತ್ತು ಉಪನಗರಗಳಲ್ಲಿ ಭಾರಿ ಮಳೆಯಾಗಲಿದೆ. ಭಾರಿ ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸಲಿದ್ದು, ಮುಂಬೈವಾಸಿಗಳು ಎಚ್ಚರಿಕೆಯಿಂದ ಇರಿ ಎಂದು ಹೇಳಿತ್ತು. ಅಲ್ಲದೆ, ಅಗತ್ಯ ಇದ್ದರೆ ಮಾತ್ರವೇ ಬೀದಿಗೆ ಇಳಿಯಿರಿ ಎಂದು ಮುನ್ನೆಚ್ಚರಿಕೆಯನ್ನೂ ರವಾನಿಸಿದೆ.
ಹಿಂದ್​ಮಾತಾ, ದಾದರ್ ಟ್ರಾಮ್​ ಟರ್ಮಿನಸ್​, ವಾಡಲಾದ ಸಕ್ಕರ್​ ಪಂಚಾಯ, ಸಿಯೋನ್​ನ ಎಸ್​ಐಇಎಸ್​ ಕಾಲೇಜ್​, ಭೆಂಡಿ ಬಜಾರ್ ಜಂಕ್ಷನ್​, ಜೆಜೆ ಜಂಕ್ಷನ್​, ಠಾಕೂರ್​ದ್ವಾರ ನಾಕಾ, ಷನ್ಮುಖಾನಂದ ಹಅಲ್​, ವಾಡಲಾದ ಶೇಖ್​ ಮಿಸ್ತ್ರಿ ದರ್ಗಾ ರೋಡ್​, ಚೆಂಬೂರ್​ನ ಪೋಸ್ಟಲ್​ ಕಾಲನಿಯಲ್ಲಿ  ಅಲರ್ಟ್​ ಘೋಷಿಸಲಾಗಿದೆ. ಬಿಎಂಸಿ ಡೇಟಾ ಪ್ರಕಾರ ಕಳೆದ 22 ಗಂಟೆಗಳ ಅವಧಿಯಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಮಂಗಳವಾರ ಬೆಳಗ್ಗೆ 6 ಗಂಟೆಯ ನಡುವೆ ದಾಖಲೆಯ 23 ಸೆಂಟಿ ಮೀಟರ್ ಮಳೆಯಾಗಿದೆ. ಪಶ್ಚಿಮ ಮತ್ತು ಪೂರ್ವ ಉಪನಗರಗಳಲ್ಲಿ 16.2 ಸೆಂಟಿ ಮೀಟರ್ ಮಳೆಯಾಗಿದೆ. (ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net