ಮರವೂರಿನಲ್ಲಿ ಹೊಸ ಸೇತುವೆ

bridge
Published on

ಭರತ್ ಶೆಟ್ಟಿಗಾರ್ ಮಂಗಳೂರು

ಮಂಗಳೂರಿನಿಂದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮುಖ್ಯ ರಸ್ತೆ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದ್ದು, ಅದರ ಭಾಗವಾಗಿ ಮರವೂರಿನಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ.

ಮರಕಡದಿಂದ ಮುಂದಕ್ಕೆ ಮಹಾನಗರ ಪಾಲಿಕೆ ವ್ಯಾಪ್ತಿ ಅಂತ್ಯದಿಂದ ಮೊದಲ್ಗೊಂಡು ಕೆಂಜಾರು-ಕರಂಬಾರು ಬಳಿಯ ವಿಮಾನ ನಿಲ್ದಾಣ ಪ್ರವೇಶದ್ವಾರದವರೆಗೆ ಚತ್ಪುಪಥ ಕಾಂಕ್ರೀಟ್ ರಸ್ತೆ ನಿರ್ಮಾಣ ಈ ಯೋಜನೆಯಾಗಿದೆ. ಪ್ರಮುಖ ಕಾಮಗಾರಿಯಾಗಿ ಮರವೂರಿನಲ್ಲಿ ಸೇತುವೆ ನಿರ್ಮಾಣವಾಗುತ್ತಿದ್ದು, ಗುರುಪುರ ಸೇತುವೆಯನ್ನು ನಿಗದಿತ ಅವಧಿಯಲ್ಲಿ ಯಶಸ್ವಿಯಾಗಿ ನಿರ್ಮಿಸಿಕೊಟ್ಟಿರುವ ಮುಗ್ರೋಡಿ ಕನ್‌ಸ್ಟ್ರಕ್ಷನ್ ಸಂಸ್ಥೆ ಈ ಕಾಮಗಾರಿ ವಹಿಸಿಕೊಂಡಿದೆ.

198 ಮೀ.ಉದ್ದದ ಬ್ರಿಡ್ಜ್; ಮರವೂರಿನಲ್ಲಿ ಪ್ರಸ್ತುತ ಇರುವ ಸೇತುವೆಗೆ ಸಮಾನಾಂತರವಾಗಿ, ಮಂಗಳೂರಿನಿಂದ ಬಜ್ಪೆ ಕಡೆಗೆ ಹೋಗುವಾಗ ಎಡ ಬದಿಯಲ್ಲಿ ಸೇತುವೆ ನಿರ್ಮಾಣವಾಗಲಿದೆ. 198 ಮೀ. ಉದ್ದ ಮತ್ತು 12 ಮೀ. ಅಗಲವಾಗಿದ್ದು, ಎರಡು ಸೇತುವೆಗಳ ಮಧ್ಯದಲ್ಲಿ 5 ಮೀ. ಅಂತರ ಇರಲಿದೆ. ಹಳೇ ಸೇತುವೆ 8 ಮೀ. ಅಗಲವಿದೆ. ಮುಂದಿನ ದಿನಗಳಲ್ಲಿ ನಗರದಿಂದ ಹೋಗುವವರು ಹೊಸ ಸೇತುವೆ ಮತ್ತು ಬಜ್ಪೆ ಕಡೆಯಿಂದ ಬರುವವರು ಹಳೇ ಸೇತುವೆ ಉಪಯೋಗಿಸಬೇಕಾಗಿದೆ.

ಕಾಮಗಾರಿಗೆ ವೇಗ: ಪ್ರಸ್ತುತ ನದಿಗೆ ಮಣ್ಣು ತುಂಬಿ ಪೈಲ್ ಫೌಂಡೇಶನ್ ಹಾಕುವ ಕೆಲಸ ನಡೆಯುತ್ತಿದೆ. ಒಟ್ಟು 78 ಇಂತಹ ಪೈಲ್ ಫೌಂಡೇಶನ್ ನಿರ್ಮಾಣವಾಗಲಿದ್ದು, ಅದರ ಮೇಲೆ ಕಾಂಕ್ರೀಟ್ ಬೆಡ್ ಹಾಕಿ, ಪಿಲ್ಲರ್ ನಿರ್ಮಾಣವಾಗಲಿದೆ. 9 ಮುಖ್ಯ ಪಿಲ್ಲರ್ ಹಾಗೂ ಎರಡೂ ಬದಿಯಲ್ಲಿ ರಸ್ತೆಯಿಂದ ಸೇತುವೆ ಸಂಪರ್ಕಿಸುವ ಪಿಲ್ಲರ್ ಸೇರಿ 11 ಪಿಲ್ಲರ್‌ಗಳ ನಡುವೆ ಕಾಂಕ್ರೀಟ್ ಗರ್ಡರ್ ಮೂಲಕ ಸೇತುವೆ ನಿರ್ಮಾಣವಾಗಲಿದೆ. ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಮಳೆಗಾಲಕ್ಕೆ ಮುನ್ನ ಕನಿಷ್ಠ 6-7 ಪಿಲ್ಲರ್‌ಗಳನ್ನಾದರೂ ಪೂರ್ಣಗೊಳಿಸಬೇಕು ಎನ್ನುವ ಉದ್ದೇಶದೊಂದಿಗೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಗುತ್ತಿಗೆ ಸಂಸ್ಥೆಯ ಇಂಜಿನಿಯರ್ ಸುಬ್ರಹ್ಮಣ್ಯ ತಿಳಿಸುತ್ತಾರೆ.

ಬಾಕ್ಸ್ ಪುಶ್ಶಿಂಗ್ ಕೆಳ ಸೇತುವೆ: ವಿಮಾನ ನಿಲ್ದಾಣ ರಸ್ತೆಗೆ ಅಡ್ಡಲಾಗಿ ಮರವೂರಿನಲ್ಲಿ ರೈಲ್ವೆ ಸೇತುವೆ ಹಾದು ಹೋಗುತ್ತದೆ. ಇಲ್ಲಿ ಬಾಕ್ಸ್‌ಪುಶ್ಶಿಂಗ್ ಮಾದರಿಯಲ್ಲಿ ರಸ್ತೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು, ಇದಕ್ಕೆ ಲೋಕೋಪಯೋಗಿ ಇಲಾಖೆ ರೈಲ್ವೆ ಇಲಾಖೆಯೊಂದಿಗೆ ಸಂಪರ್ಕದಲ್ಲಿದೆ. ಕಾಮಗಾರಿಗಾಗಿ ನಿಗದಿತ ಮೊತ್ತವನ್ನು ಪಾವತಿಸುವ ಅಗತ್ಯವಿದ್ದು, ಸುಮಾರು 60 ಮೀ.ನಷ್ಟು ಕೆಲಸ ರೈಲ್ವೆ ಇಲಾಖೆ ನಿರ್ವಹಿಸಬೇಕಾಗಿದೆ. ಎರಡು ವರ್ಷದೊಳಗೆ ಇದೂ ಪೂರ್ಣಗೊಳ್ಳಬೇಕಾಗಿದೆ ಎನ್ನುತ್ತಾರೆ ಪಿಬ್ಲುೃಡಿ ಅಧಿಕಾರಿಗಳು.

ಮರವೂರಿಂದ ಏರ್‌ಪೋರ್ಟ್ ವರೆಗಿನ 2 ಕಿ.ಮೀ. ರಸ್ತೆ ಅಭಿವೃದ್ಧಿಯ ಭಾಗವಾಗಿ ಮರವೂರಿನಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಮುಂದಿನ ಎರಡು ವರ್ಷದೊಳಗೆ ಸೇತುವೆ ಸಹಿತ ಎಲ್ಲ ಕೆಲಸ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಒಟ್ಟು 2 ಕಿ.ಮೀ. ಕಾಮಗಾರಿಯಲ್ಲಿ ಒಂದು ಸೇತುವೆ, ಮತ್ತು ರೈಲ್ವೆ ಕೆಳಸೇತುವೆ(ಬಾಕ್ಸ್ ಪುಶ್ಶಿಂಗ್) ನಿರ್ಮಾಣವಾಗಲಿದೆ.

ಯಶವಂತ್, ಪಿಡಬ್ಲುೃಡಿ ಎಕ್ಸಿಕ್ಯೂಟಿವ್ ಇಂಜಿನಿಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net