ಮದುವೆ ಮಂಟಪಕ್ಕೆ ಆಗಮಿಸುತ್ತಿದ್ದ ವರನ ಮೇಲೆ ಮಾರ್ಗಮಧ್ಯೆಯೇ ವಧುವಿನ ಸಂಬಂಧಿಕರಿಂದ ಹಲ್ಲೆ

Bride
Published on

ಕೋಯಿಕ್ಕೋಡ್​: ಮದುವೆ ಮಂಟಪಕ್ಕೆ ಆಗಮಿಸುತ್ತಿದ್ದ ವರ ಮತ್ತು ಆತನ ಫ್ರೆಂಡ್ಸ್​ ಮೇಲೆ ವಧುವಿನ ಸಂಬಂಧಿಕರು ದಾಳಿ ಮಾಡಿರುವ ಘಟನೆ ಕೇರಳದ ಕೋಯಿಕ್ಕೋಡ್​ನಲ್ಲಿ ನಡೆದಿದೆ.

ಗುರುವಾರ ಸಂಜೆ ಈ ಘಟನೆ ನಡೆದಿದೆ. ನದೇರಿ ಮಂಜಲಾಡ್ ನಿವಾಸಿ ಕುಂಜಿಮುಹಮ್ಮದ್​ ಪುತ್ರ ಮುಹಮ್ಮದ್​ ಸಲಿಹ್​ (29) ಫ್ರೆಂಡ್ಸ್​ ಜತೆ ಕಾರಿನಲ್ಲಿ ಮದುವೆ ಮಂಟಕ್ಕೆ ಆಗಮಿಸುವಾಗ ಕೀಝರಿಯೂರಿನ ಕನ್ನೂತ್​ನಲ್ಲಿ ವಧುವಿನ ಸಂಬಂಧಿಕರು ದಾಳಿ ನಡೆಸಿದ್ದಾರೆ.

ಘಟನೆಯ ವಿವರಣೆಗೆ ಬರುವುದಾದರೆ, ಮುಹಮ್ಮದ್​ ಸಲಿಹ್ ಕೀಝರಿಯೂರಿನ ನಿವಾಸಿಯಾಗಿರುವ​ ತನ್ನ ಗರ್ಲ್​ಫ್ರೆಂಡ್​ ಜತೆ ಎರಡು ತಿಂಗಳ ಹಿಂದೆಯೇ ರಿಜಿಸ್ಟರ್​ ಮದುವೆಯಾಗಿದ್ದರು. ಬಳಿಕ ವರನ ಕುಟುಂಬ ಸಾಂಪ್ರದಾಯಿಕವಾಗಿ ಮದುವೆ ನಡೆಸಲು ನಿರ್ಧರಿಸಿದ್ದರು. ಅದರಂತೆ ಮದುವೆ ಮಂಟಪಕ್ಕೆ ವರ ಬರುವಾಗ ಮಾರ್ಗಮಧ್ಯೆ ಕಾರನ್ನು ಅಡ್ಡಗಟ್ಟಿದ ವಧುವಿನ ಸಂಬಂಧಿಕರು ದಾಳಿ ಮಾಡಿದ್ದಾರೆ.

ಮಚ್ಚಿನಿಂದ ಕಾರಿನ ಕಿಟಕಿ ಗಾಜುಗಳನ್ನು ನಾಶ ಮಾಡಲಾಗಿದ್ದು, ಸಲಿಹ್​ನನ್ನು ವಶಕ್ಕೆ ಪಡೆಯಲು ಯತ್ನಿಸಿದ್ದಾರೆ. ಆದರೆ, ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದು, ಘಟನೆಯಲ್ಲಿ ಸಲಿಹ್​ ಫ್ರೆಂಡ್ಸ್​ ಮುಹಮ್ಮದ್​ ಶಫಿ ಮತ್ತು ಶಬೀರ್​ಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಕೊಯಿಲ್ಯಾಂಡಿ ತಾಲೂಕು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಪ್ರೇಮ ವಿವಾಹ ಆಗಿರುವುದರಿಂದ ಯುವತಿ ತನ್ನ ಪಾಲಕರನ್ನು ವಿರೋಧಿಸಿ, ಮನೆ ತೊರೆದು ಸಲಿಹ್​ ಮನೆಗೆ ಹೋದಾಗಲೇ ಸಲಿಹ್​ ಮನೆ ಮೇಲೆ ದಾಳಿ ಮಾಡಿ ಯುವತಿಯನ್ನು ಅಪಹರಿಸಲಾಗಿತ್ತು. ಆದರೆ, ಯುವತಿ ತಪ್ಪಿಸಿಕೊಂಡು ಬಂದು ಸಲಿಹ್​ ಜತೆ ವಾಸವಿದ್ದಳು. ಹೀಗಾಗಿ ಸಲಿಹ್​ ಕುಟುಂಬ ಸಾಂಪ್ರದಾಯಿಕವಾಗಿ ನಿಖಾ ನಡೆಸಲು ನಿರ್ಧರಿಸಿದ್ದರು.

ಆದರೆ, ಇದು ಯುವತಿಯ ಅಂಕಲ್​ಗೆ ಇಷ್ಟವಿರಲಿಲ್ಲ. ಹೇಗಾದರೂ ಮಾಡಿ ಮದುವೆ ತಪ್ಪಿಸಬೇಕೆಂದು ಸಲೀಹ್​ ಮನೆ ಮೇಲೆ ದಾಳಿ ಮಾಡಿದ್ದರು. ಈ ಸಂಬಂಧ ಕೊಯಿಲಾಂಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. ಇಬ್ಬರು ಆರೋಪಿಗಳನ್ನು ಗುರುತಿಸಲಾಗಿದ್ದು, ಅವರು ನಾಪತ್ತೆಯಾಗಿದ್ದಾರೆಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net