ದೊಣ್ಣೆ, ಕತ್ತಿ ಝಳಪಿಸಿದ ಮದುವೆ ಹೆಣ್ಣು! ...ಚಕಿತರಾದ ಬಂಧುಬಳಗ

bride
Published on

ಚೆನ್ನೈ : ಸಾಮಾನ್ಯವಾಗಿ ಪಾರಂಪರಿಕ ಮದುವೆಗಳಲ್ಲಿ ವಧು ನಾಚಿಕೊಂಡು ಅಳುಕುತ್ತಾ ನಗೆ ಸೂಸುವ ದೃಶ್ಯ ನೋಡುತ್ತೇವೆ. ಆದರೆ ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಮದುವೆ ಸಮಾರಂಭವೊಂದರಲ್ಲಿ ವಧುವು, ಕೋಲುಗಳನ್ನು ಹಿಡಿದು ನೆರೆದಿದ್ದ ಜನರಿಗೆ ಸೀಲಂಬಮ್​ ಎಂಬ ಸಾಹಸ ಕಲೆಯ ಪರಿಚಯ ಮಾಡಿಸಿದ್ದಾಳೆ.

ಪೊಲೀಸ್​ ಅಧಿಕಾರಿಯಾಗುವ ಆಸೆಯಿರುವ 22 ವರ್ಷದ ಪಿ.ನಿಶಾ ಈ ವಿಶೇಷ ವಧು. ನಿರಾಯಾಸವಾಗಿ ದೊಣ್ಣೆಗಳನ್ನು ಮತ್ತು ಸುತ್ತುಗತ್ತಿಯನ್ನು ಆಡಿಸುವ ಕಲೆಯನ್ನು ಪ್ರದರ್ಶಿಸಿದ ನಿಶಾಳ ಪ್ರತಿಭೆ ನೋಡಿ ಬಂಧು-ಬಳಗ ಚಕಿತಗೊಂಡಿದೆ. ಅಂದ ಹಾಗೆ ಮದುವೆ ಸಂದರ್ಭದಲ್ಲಿ ಸೀಲಂಬಂನ ಪ್ರದರ್ಶನ ಮಾಡಿಸುವ ಐಡಿಯಾ ವರ ಅರ್ಥಾತ್ ಆಕೆಯ ಗಂಡ ರಾಜ್​ಕುಮಾರ್​ನದೇ ಆಗಿತ್ತು ಎನ್ನಲಾಗಿದೆ.

ನಿಶಾಳ ತಾಯಿ ಮಣಿ ಅವರು, ಹೆಣ್ಣುಮಕ್ಕಳು ಆರೋಗ್ಯವಾಗಿರಲು ಮತ್ತು ಆತ್ಮರಕ್ಷಣೆ ಮಾಡಿಕೊಳ್ಳಲು ಸೀಲಂಬಂ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ಅವಳಿಗೆ ತಮಿಳು ಪ್ರಕಾರದ ಸೀಲಂಬಂ ಕಲೆಯನ್ನು ಕಲಿಸಿದ್ದಾರೆ. ನಿಶಾ ಪೂರ್ಣ ಆಸಕ್ತಿಯಿಂದ ಚಿಕ್ಕವಯಸ್ಸಿನಿಂದ ಈ ಕಲೆಯನ್ನು ಅಭ್ಯಸಿಸುತ್ತಾ ಬಂದಿದ್ದಾಳೆ.

ಮದುವೆ ಏರ್ಪಾಟಾಗಿದ್ದ ತಿರುಕೋಲೂರ್​ ಗ್ರಾಮದಲ್ಲಿ ಹೊರಾಂಗಣದಲ್ಲಿ ಜನರು ಸುತ್ತುವರಿದಿರುವಂತೆ ನಿಶಾ, ರೇಷ್ಮೆ ಸೀರೆ ಮತ್ತು ಒಡವೆಗಳನ್ನು ತೊಟ್ಟು ಸೀಲಂಬಂನ ಚಮತ್ಕಾರಿಕ ಪ್ರದರ್ಶನ ನೀಡಿದ್ದಾಳೆ. ತನ್ನ ನೆಚ್ಚಿನ ಮಾರ್ಷಿಯಲ್​ ಆರ್ಟ್​ನ ಬಗ್ಗೆ ಅರಿವು ಮೂಡಿಸಿದ್ದಾಳೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net