

ಮಹಾರಾಷ್ಟ್ರ: ಎಲ್ಲರೂ ಮದುವೆ ಸಂಭ್ರಮದಲ್ಲಿದ್ದರು. ಇನ್ನೇನು ಮದುವೆ ಗಂಡು ತಾಳಿ ಕಟ್ಟಬೇಕು ಎನ್ನುವಷ್ಟಲ್ಲಿ ಮದುವೆ ಹುಡುಗಿ ಮನೆಯವರು ತೆಗೆದುಕೊಂಡ ನಿರ್ಧಾರವೊಂದು ಗೊಂದಲದ ವಾತಾವರಣಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ ವರನ ಅತ್ಯುತ್ಸಾಹದ ನೃತ್ಯ!
ಮದುವೆ ಕಾರ್ಯಕ್ರಮ ಎಂದ ಮೇಲೆ, ಅಲ್ಲಿ ಹಾಡು ಮತ್ತು ಕುಣಿತ ಇದ್ದೇ ಇರುತ್ತದೆ. ಅದರಂತೆ ತಾಳಿ ಕಟ್ಟುವ ಮುಂಚಿತವಾಗಿ ತನ್ನ ವಿವಾಹ ಎಂಬ ಸಂಭ್ರಮದಲ್ಲಿ ಮದುವೆ ಗಂಡು ಸಂಬಂಧಿಕರ ಜತೆಗೆ ಸೇರಿಕೊಂಡು ನೃತ್ಯದಲ್ಲಿ ತೊಡಗಿಕೊಂಡಿದ್ದ. ಮಂಟಪದಲ್ಲಿ ಮಧು ವರನ ನೃತ್ಯವನ್ನು ಸ್ವಲ್ಪ ಹೊತ್ತು ನೋಡಿ ಖುಷಿಪಟ್ಟಿದ್ದಾಳೆ. ಆದರೆ ವರ ಮಾತ್ರ ಕುಣಿತದಲ್ಲಿ ಸಂಭ್ರಮದಲ್ಲಿ ವಧುವನ್ನು ಮರೆತೇ ಬಿಟ್ಟಿದ್ದಾನೆ. ತನ್ನನ್ನು ವಿವಾಹವಾಗುತ್ತಿರುವ ಹುಡುಗಿಯನ್ನು ಮರೆತು ಕುಣಿತದಲ್ಲೇ ಮಗ್ನನಾಗಿದ್ದ. ಇದರಿಂದ ಸಿಟ್ಟಾದ ಮದುವೆ ಹೆಣ್ಣು ಈತನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾಳೆ. ಈ ಘಟನೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಮಲ್ಕಾಪುರ್ ಗ್ರಾಮದಲ್ಲಿ ನಡೆದಿದೆ.
ಸ್ವಾರಸ್ಯ ಇರುವುದು ಇಲ್ಲೇ... ಮನೆಯವರು ನಿರ್ಧರಿಸಿದ್ದ ಹುಡುಗನನ್ನು ಕೊನೆಯ ಕ್ಷಣದಲ್ಲಿ ನಿರಾಕರಿಸಿದ ಹುಡುಗಿ ಅಂತಿಮವಾಗಿ ಮದುವೆಗೆ ಬಂದಿದ್ದ ತನ್ನ ಸ್ನೇಹಿತನೊಂದಿಗೆ ವಿವಾಹ ಮಾಡಿಕೊಂಡಿದ್ದಾಳೆ.
ವರದಿಯ ಪ್ರಕಾರ, ಮದುವೆ ಸಂಭ್ರಮವೆಂದು ಹುಡುಗ ಮತ್ತು ಆತನ ಸಂಬಂಧಿಕರು ಕುಡಿತದ ಮತ್ತಿನಲ್ಲಿ ಕುಣಿತಕ್ಕೆ ಮುಂದಾಗಿದ್ದಾರೆ. ಹಲವು ಗಂಟೆಗಳಷ್ಟು ಕಾಲ ಕಾದು ವಧುವಿನ ತಂದೆ ವಿನಂತಿಸಿದರೂ ವರ ಮಾತ್ರ ಕಣಿತ ಬಿಟ್ಟು ಬಂದಿಲ್ಲ. ಈ ವೇಳೆ ಆತನ ಸಂಬಂಧಿಕರು ವಧುವಿನ ತಂದೆಯ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಕೊನೆಗೆ ಮಗಳ ಮದುವೆ ಅರ್ಧದಲ್ಲೇ ನಿಂತಿತು ಎಂದು ಸಮಾಜ ಮಾತನಾಡಿಕೊಳ್ಳುವುದು ಬೇಡವೆಂದು ವಧುವಿನ ಕುಟುಂಬವು ಬೇರೆ ಮದುವೆಗೆ ಬಂದಿದ್ದ ಆಕೆಯ ಸ್ನೇಹಿತನೊಂದಿಗೆ ಮಾಡಲು ನಿರ್ಧರಿಸಿದ್ದಾರೆ. (ಏಜೆನ್ಸೀಸ್)