

ಮಲಪ್ಪುರಂ: ಮದುವೆಗೂ ಮುನ್ನಾ ದಿನ 19 ವರ್ಷದ ಯುವತಿಯೊಬ್ಬಳು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಕೇರಳದ ಮಲಪ್ಪುರಂನ ಪೆರಿಂಥಲಮನ್ನಾದಲ್ಲಿ ನಡೆದಿದೆ.
ಮೃತಳನ್ನು ಫಾತಿಮಾ ಬಥೂರ್ ಎಂದು ಗುರುತಿಸಲಾಗಿದೆ. ಈಕೆ ಪಾತೈಕ್ಕರ ಶಾಲೆಪಾಡಿ ಕಿಜಕ್ಕೆತ್ತಿಲ್ ಮೂಲದ ಮುಸ್ತಫಾ ಮತ್ತು ಜೀನತ್ ದಂಪತಿಯ ಪುತ್ರಿ. ಫಾತಿಮಾಳ ಮದುವೆ ಇಂದು ಮೂರ್ಕ್ಕನಾಡು ಮೂಲದ ಯುವಕನೊಂದಿಗೆ ನಡೆಯಬೇಕಿತ್ತು. ಆದರೆ, ವಿಧಿ ಲಿಖಿತ ಬೇರೆ ಇತ್ತು ಅನಿಸುತ್ತದೆ. ನಿನ್ನೆ (ಜ.13) ರಾತ್ರಿ 7 ಗಂಟೆಗೆ ಕುಸಿದುಬಿದ್ದು ಮೃತಪಟ್ಟಿದ್ದಾಳೆ.
ನಿನ್ನೆ ರಾತ್ರಿ ತನ್ನ ಮನೆಯಲ್ಲಿ ನಡೆದ ಮದುವೆ ಹಿಂದಿನ ದಿನದ ಸಮಾರಂಭದಲ್ಲಿ ಫೋಟೋ ತೆಗೆಯುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಫಾತಿಮಾಳ ಮೃತದೇಹವನ್ನು ಇಎಂಎಸ್ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಮಗಳನ್ನು ಕಳೆದುಕೊಂಡ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. (ಏಜೆನ್ಸೀಸ್)