

ಚಿತ್ರದುರ್ಗ: ಇನ್ನೇನು ತಾಳಿ ಕಟ್ಟುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುತ್ತೇನೆ ಎಂದು ಭವ್ಯವಾದ ಕನಸು ಕಾಣುತ್ತಿದ್ದ ವರನಿಗೆ ದೊಡ್ಡ ಅಘಾತವೊಂದು ಎದುರಾಗಿದ್ದು, ತಾಳಿ ಕಟ್ಟಲು ಕೊರಳೊಡ್ಡದೆ ನಿರಾಕರಿಸಿದ ವಧು ಆತನ ಮದುವೆಯ ಆಸೆಯನ್ನು ಭಗ್ನಗೊಳಿಸಿದ ಘಟನೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ವರದಿಯಾಗಿದೆ.
ಗುರು-ಹಿರಿಯರ ನಿಶ್ಚಯದಂತೆ ನಿಗದಿಯಾಗಿದ್ದ ಮದುವೆಗೆ ಕುಟುಂಬಸ್ಥರು, ಬಂಧು-ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ವಿವಾಹಕ್ಕೆ ಬಂದಿದ್ದ ಜನರಿಗೆಂದು ಭರ್ಜರಿಯಾಗಿ ಊಟ ಕೂಡ ತಯಾರು ಮಾಡಲಾಗಿತ್ತು. ಆದ್ರೆ, ಈ ಎಲ್ಲಾ ಸಿದ್ಧತೆಗಳ ಜತೆಗೆ ನಡೆಯಬೇಕಿದ್ದ ಮದುವೆಗೆ ಬ್ರೇಕ್ ಬಿದ್ದಿದ್ದು, ಕೇವಲ ವಧುವಿನ ಆ ಒಂದು ನಿರ್ಣಯ!
ಚಳ್ಳಕೆರೆಯ ಚಿಕ್ಕಬ್ಯಾಲದಕೆರೆಯಲ್ಲಿ ನಿಶ್ಚಯಿಸಲಾಗಿದ್ದ ಮದುವೆಯಲ್ಲಿ, ವರ ತಾಳಿ ಕಟ್ಟಲು ಹೋದಾಗ ಕೈ ಅಡ್ಡ ಹಿಡಿದ ವಧು, ನನಗೆ ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳುವ ಮೂಲಕ ವಿವಾಹವನ್ನು ಮುರಿದಿದ್ದಾಳೆ. ಒಂದು ವರ್ಷದಿಂದ ವಧು ಹಾಗೂ ವರನ ನಡುವೆ ಉತ್ತಮ ಒಡನಾಟವಿತ್ತು ಎಂದು ಹೇಳಲಾಗಿದ್ದು, ಓದುವ ಕಾರಣವೊಡ್ಡಿ ಮದುವೆಯನ್ನು ನಿರಾಕರಿಸಿದ್ದಾಳೆ.
ಗುರುವಾರ ಬೆಳ್ಳಿಗ್ಗೆ 9.30ಕ್ಕೆ ತಾಳಿ ಕಟ್ಟುವ ಸಮಯದಲ್ಲಿ ವಧು ತಾಳಿ ತಳ್ಳಿದ್ದು, ಮದುವೆ ನಿರಾಕರಣೆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಹಿರಿಯರು, ಸಂಬಂಧಿಕರು ಎಷ್ಟೇ ಮನವೊಲಿಸಿದರು ವಧು ಮಾತ್ರ ತಾಳಿ ಕಟ್ಟಿಸಿಕೊಳ್ಳಲು ಒಪ್ಪಿಲ್ಲ. ಪ್ರಕರಣ ಶ್ರೀರಾಂಪುರ ಪೋಲಿಸ್ ಠಾಣೆ ಮೆಟ್ಟಿಲೇರಿದ್ದು, ಮದುವೆ ವೆಚ್ಚವನ್ನು ವಧುವಿನ ಕಡೆಯವರು ಭರಿಸಬೇಕು ಎಂದು ಹೇಳಿದ ಬಳಿಕವೇ ಈ ಪ್ರಕರಣ ಇತ್ಯರ್ಥಗೊಂಡಿದೆ.