

ನವದೆಹಲಿ: ಮದುವೆ ಮನೆಯಲ್ಲಿ ಗಲಾಟೆ ನಡೆಯೋದು ಇತ್ತೀಚಿಗೆ ಸರ್ವೆಸಾಮಾನ್ಯವಾಗಿದೆ. ಆದರೆ ಇಲ್ಲೊಂದು ವಿವಾಹದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಲವಂತವಾಗಿ ಸಿಹಿ ತಿನ್ನಿಸಿದ ವರನಿಗೆ ಇಲ್ಲೊಬ್ಬ ವಧು ಮಂಟಪದಲ್ಲೇ ಸರಿಯಾಗಿ ಗೂಸಾ ಕೊಟ್ಟಿದ್ದಾಳೆ.
ವಿಡಿಯೋದಲ್ಲಿ ಏನಿದೆ?: ಮದುವೆ ಮಂಟಪದಲ್ಲಿ ಶಾಸ್ತ್ರಗಳು ನಡೆಯುತ್ತಿರುವಾಗ ವಧು, ವರನಿಗೆ ಸಿಹಿ ತಿನ್ನಿಸುತ್ತಾಳೆ. ನಂತರ ವರ, ವಧುವಿಗೆ ಸಿಹಿ ತಿನ್ನಿಸಲು ಪ್ರಯತ್ನಿಸುತ್ತಾನೆ. ಆದರೆ ವಧು ಮುಖವನ್ನು ಪಕ್ಕಕ್ಕೆ ತಿರುಗಿಸುತ್ತಾಳೆ. ಆಗ ವರ ಆಕೆಗೆ ಬಲವಂತವಾಗಿ ಸಿಹಿ ತಿನ್ನಿಸಿ ಬಾಯಿಗೆ ಮೆತ್ತುತ್ತಾನೆ. ಸಿಟ್ಟಿಗೆದ್ದ ವಧು ತಕ್ಷಣ ಆತನನ್ನು ಮಂಟಪದಿಂದ ಕೆಳಕೆ ತಳ್ಳಿ ಆತನಿಗೆ ಒದ್ದು, ಮುಖಕ್ಕೆ ಉಗುಳುತ್ತಾಳೆ. ಅಲ್ಲಿದ್ದವರು ಆಕೆಯನ್ನು ಸಮಾಧಾನ ಪಡಿಸಲು ನೋಡುತ್ತಾರೆ. ಆದರೆ ಯಾವುದೇ ಪ್ರಯೋಜನವಾಗುವುದಿಲ್ಲ. ನಂತರ ಅಲ್ಲೇ ಇದ್ದ ಕೆಲವು ಹೆಂಗಸರು ಜಗಳ ಮಾಡಿಕೊಂಡು ಕೈ ಮೀಲಾಯಿಸುತ್ತಾರೆ. ಈ ಸಂದರ್ಭದಲ್ಲಿ ಮನೆ ಮಂದಿ ಆಕೆಯ ಸಮಾಧಾನ ಮಾಡಲು ಯತ್ನಿಸುತ್ತಾರೆ.
ಆದರೆ ವಧು ಯಾವುದಕ್ಕೂ ಜಗ್ಗದೆ ಹುಡುಗನನ್ನು ಹಿಗ್ಗಾಮುಗ್ಗಾ ಬೈಯಲು ಶುರು ಮಾಡುತ್ತಾಳೆ. ಅವಾಚ್ಯ ಶಬ್ದಗಳಿಂದ ಬೈಯ್ದು ಕಾಲಿನಿಂದ ಝಾಡಿಸಿ ಒದೆಯುತ್ತಾಳೆ. ಈ ಸಂದರ್ಭದಲ್ಲಿ ಮಹಿಳೆಯೊಬ್ಬಳು ವಧುವನ್ನು ತಡೆಯಲು ಯತ್ನಿಸುತ್ತಾಳೆ. ಆದರೆ ವಧು ಸುಮ್ಮನಾಗುವುದಿಲ್ಲ. ಮಂಟಪ ಸಮೀಪವಿದ್ದ ಹಿರಿಯರಿಗೂ ಹೊಡೆಯುತ್ತಾಳೆ.
ನಂತರ ಮನೆ ಮಂದಿ ವರನನ್ನು ಅಲ್ಲಿಂದ ಕರೆದುಕೊಂಡು ಹೋಗುತ್ತಾರೆ. ಬಳಿಕ ವಧು ಮಂಟಪದಿಂದ ಇಳಿದು ಅಳುತ್ತಾ ಹೋಗುವುದನ್ನು ನೋಡಬಹುದು. ಈ ವಿಡಿಯೋ ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕವಾಗಿ ನವದಂಪತಿಗೆ ತಮಾಷೆ ಮಾಡಿದ್ದಾರೆ.