ಅಬಕಾರಿಯಲ್ಲಿ ಲಂಚದ ಕಿಕ್! ರಾಜಾರೋಷವಾಗಿ ವರ್ಷಕ್ಕೆ 500 ಕೋಟಿ ರೂ. ವಸೂಲಿ

ವಿಜಯವಾಣಿ (13)
Published on

ಸಚಿವರ ಬದಲಾಯಿಸಲು ಸರ್ಕಾರಕ್ಕೆ ಮದ್ಯ ಮಾರಾಟಗಾರರ ಪತ್ರ

| ಹರೀಶ್ ಬೇಲೂರು, ಬೆಂಗಳೂರು

ಸರ್ಕಾರದ ಬೊಕ್ಕಸಕ್ಕೆ ಅಧಿಕ ಆದಾಯ ತರುವ ಅಬಕಾರಿ ಇಲಾಖೆಯಲ್ಲಿ ಕಳೆದೊಂದು ವರ್ಷದಿಂದ ಲಂಚಾವತಾರ ಮಿತಿ ಮೀರಿರುವ ಆರೋಪ ಕೇಳಿಬಂದಿದೆ. ಈ ಭ್ರಷ್ಟಾಚಾರ ತಡೆಯಲು ಇಲಾಖೆ ಸಚಿವರನ್ನೇ ಬದಲಾಯಿಸುವಂತೆ ರಾಜ್ಯ ಮದ್ಯ ಮಾರಾಟಗಾರರ ಸಂಘ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದೆ.

‘ಮಂಥ್ಲಿ ಮನಿ’

ಅಬಕಾರಿ ಉಪ ಆಯುಕ್ತರು, ಸೂಪರಿಂಟೆಂಡೆಂಟ್, ಡೆಪ್ಯೂಟಿ ಸೂಪರಿಂಟೆಂಡೆಂಟ್, ಅಬಕಾರಿ ಅಧೀಕ್ಷಕ, ಅಬಕಾರಿ ನಿರೀಕ್ಷಕ ಸೇರಿ ವಿವಿಧ ವೃಂದದ ಅಧಿಕಾರಿಗಳ ವರ್ಗಾವಣೆ ಹೆಸರಿನಲ್ಲಿ ಪ್ರತಿ ವರ್ಷ ಅಂದಾಜು 180ರಿಂದ 200 ಕೋಟಿ ರೂ. ಲಂಚ ಇಲಾಖೆ ಸಚಿವರ ಕೈ ಸೇರುತ್ತಿದೆ. ರಾಜ್ಯಾದ್ಯಂತ ಬಾರ್, ಪಬ್ ಸೇರಿ ಇತರೆ ಬಗೆಯ ಮದ್ಯದಂಗಡಿಗಳಿಂದ ‘ಮಂಥ್ಲಿ ಮನಿ’ ಹೆಸರಿನಲ್ಲಿ ಪ್ರತಿ ತಿಂಗಳು 15 ಕೋಟಿ ರೂ. ನಂತೆ ವರ್ಷಕ್ಕೆ 180 ಕೋಟಿ ರೂ. ಸಂಗ್ರಹವಾಗುತ್ತಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಲಂಚ ವಹಿವಾಟು

ಕೆಲ ಅಧಿಕಾರಿಗಳ ಹಿಡಿತದಲ್ಲಿ ಸಿಲುಕಿ ನಲುಗುತ್ತಿರುವ ಇಲಾಖೆಯಲ್ಲಿ ಹೊಸ ಲೈಸೆನ್ಸ್ ಮಂಜೂರಾತಿಗೆ ಲಕ್ಷಾಂತರ ರೂ. ಲಂಚ ನಿಗದಿಪಡಿಸಲಾಗಿದೆ. ಲಂಚ ನೀಡದಿದ್ದರೆ ಇಲಾಖೆಯಲ್ಲಿ ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ. ಹಾಗಾಗಿ, ಸಂಪದ್ಭರಿತ ಅಬಕಾರಿ ಇಲಾಖೆಯಲ್ಲಿ ಪ್ರತಿ ವರ್ಷ ವರ್ಗಾವಣೆ, ಮಂಥ್ಲಿ ಮನಿ, ಲೈಸೆನ್ಸ್ ಮಂಜೂರು ಸೇರಿ ಇತರ ಬಗೆಯ ಕೆಲಸಗಳಿಂದ ಅಂದಾಜು 450-500 ಕೋಟಿ ರೂ. ಲಂಚ ವಹಿವಾಟು ನಡೆಯುತ್ತಿದೆ ಎಂಬ ವಿಚಾರ ಪತ್ರದಲ್ಲಿ ಉಲ್ಲೇಖವಾಗಿದೆ. ರಾಜ್ಯದಲ್ಲಿ 3,988 ವೈನ್​ಶಾಪ್ (ಸಿಎಲ್2), 279 ಕ್ಲಬ್ (ಸಿಎಲ್4), 78 ಸ್ಟಾರ್ ಹೋಟೆಲ್ ( ಸಿಎಲ್6ಎ), 2,382 ಹೋಟೆಲ್ ಮತ್ತು ವಸತಿಗೃಹ (ಸಿಎಲ್-7), 68 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8), 3,634 ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್9), 1,041 ಎಂಎಸ್​ಐಎಲ್ (ಸಿಎಲ್-11ಸಿ) ಮತ್ತು 745 ಆರ್​ವಿಬಿ ಸೇರಿ ಒಟ್ಟು 12,614 ಮದ್ಯದಂಗಡಿಗಳಿವೆ.

ಸಿಎಲ್-7 ಲೈಸೆನ್ಸ್​ಗೆ 1 ಕೋಟಿ ರೂ.: ಹೋಟೆಲ್ ಮತ್ತು ವಸತಿ ಗೃಹ (ಸಿಎಲ್-7) ಹೊರತುಪಡಿಸಿ ಬೇರೆ ಯಾವುದೇ ಮದ್ಯದಂಗಡಿ ತೆರೆಯಲು ಇಲಾಖೆಯಲ್ಲಿ ಲೈಸೆನ್ಸ್ ನೀಡುವುದಿಲ್ಲ. ಹೊಸದಾಗಿ ಸಿಎಲ್7 ಪ್ರಾರಂಭಕ್ಕೆ ಕೆಳಹಂತದ ಅಧಿಕಾರಿಗಳಿಂದ ಹಿಡಿದು ಸಚಿವರವರೆಗೆ -ಠಿ;1 ಕೋಟಿ ಲಂಚ ನೀಡಬೇಕಿದೆ.

ಪತ್ರದ ಸಾರವೇನು?

  • ವರ್ಗಾವಣೆ, ಪದೋನ್ನತಿ ಸಂಬಂಧ ಲಂಚ ಸ್ವೀಕಾರ
  • ಅಧಿಕಾರಿಗಳಿಂದ ಲಂಚ ವಸೂಲಿ ಮಾಡುತ್ತಿರುವ ಸಚಿವರು
  • ಅನಿವಾರ್ಯತೆ ಹಿನ್ನೆಲೆಯಲ್ಲಿ ಮಂಥ್ಲಿ ಮನಿ ಸಂಗ್ರಹ ಫಿಕ್ಸ್
  • ರಾಜ್ಯದ ಸನ್ನದುದಾರರಿಂದ ಪ್ರತಿ ತಿಂಗಳು ಲಂಚ ಸ್ವೀಕಾರ
  • ಟ್ರ್ಯಾಪ್​ಗೊಳಗಾದ ಅಧಿಕಾರಿಗೆ ಲಾಭದಾಯಕ ಹುದ್ದೆ ನಿಷಿದ್ಧ
  • ಇಲಾಖೆಯಲ್ಲಿ ವ್ಯವಸ್ಥೆ ಸರಿಪಡಿಸಲು ಹೊಸ ನೀತಿ ತರಲು ಹಿಂದೇಟು
  • ಆಯಕಟ್ಟಿನ ಜಾಗದಲ್ಲಿ ಕುಳಿತ ಒಂದೇ ಸಮುದಾಯದ ಅಧಿಕಾರಿಗಳು
  • ಕೇಳಿದಷ್ಟು ಹಣ ಕೊಟ್ಟರೆ ಯಾವ ಹುದ್ದೆಗೆ ಬೇಕಾದರೂ ವರ್ಗಾವಣೆ
  • ಬೇಡಿಕೆ ಇರುವ ಸ್ಥಳಗಳ ನಿಯುಕ್ತಿಗಾಗಿ ಇನ್ನಷ್ಟು ಹಣ ಪಡೆದು ವರ್ಗಾ
  • ಹಣ ಕೊಡದಿದ್ದರೆ ಡಿಸ್ಟಿಲರಿ, ಬ್ರಿವರಿ ವೈನರಿ, ಮೈಕ್ರೋ ಬ್ರಿವರಿ ಹುದ್ದೆ

ಎಲ್ಲೆಲ್ಲಿ, ಎಷ್ಟು ವಸೂಲಿ?

(ಮಾಸಿಕ ರೂ.ಗಳಲ್ಲಿ)

  • ಬೆಂಗಳೂರು ಮದ್ಯದಂಗಡಿ: 18-20 ಸಾವಿರ
  • ಮೈಸೂರು-ಬೆಳಗಾವಿ ವಿಭಾಗ: 12-14 ಸಾವಿರ
  • ಕಲಬುರಗಿ-ಹೊಸಪೇಟೆ: 10-12 ಸಾವಿರ
  • ಮಂಗಳೂರು -10 ಸಾವಿರ

ಕ್ಲಬ್, ಪಬ್ ರೇಟ್ ಬೇರೆ!

ಕ್ಲಬ್ ಮತ್ತು ಪಬ್ ನಡೆಸುವವರು ಪ್ರತಿ ತಿಂಗಳು ಸರಾಸರಿ 2 ಲಕ್ಷ ರೂ. ಮಂಥ್ಲಿ ಮನಿ ನೀಡಬೇಕು. ಮದ್ಯದಂಗಡಿ ಸಂಬಂಧ ಏನಾದರೂ ವಿವಾದವಿದ್ದರೆ ಇನ್ನಷ್ಟು ಹಣಕ್ಕೆ ಬೇಡಿಕೆ ಇಡಲಾಗುತ್ತದೆ. ಹಣ ನೀಡಲು ನಿರಾಕರಿಸುವ ಮದ್ಯದಂಗಡಿಗಳ ಮಾಲೀಕರಿಗೆ ಅನಗತ್ಯವಾಗಿ ಕಿರುಕುಳ ಕೊಡಲಾಗುತ್ತದೆ ಎಂಬ ಆರೋಪ ಕೇಳಿಬಂದಿದೆ.

ರಾಜ್ಯಪಾಲರಿಗೂ ದೂರು

ವಿಧಾನಸೌಧದಲ್ಲಿರುವ ಅಬಕಾರಿ ಸಚಿವರ ಕಚೇರಿಯಲ್ಲೇ ವರ್ಗಾವಣೆ ದಂಧೆ ನಡೆಯುತ್ತಿದೆ. ಸಚಿವರ ಪುತ್ರ, ಆಪ್ತ ಕಾರ್ಯದರ್ಶಿ ಹಾಗೂ ಆಪ್ತ ಸಹಾಯಕರು ತೆರೆಮರೆ ಯಲ್ಲಿದ್ದುಕೊಂಡು ಅಧಿಕಾರಿಗಳ ವರ್ಗಾವಣೆಗೆ ದಂಧೆಗೆ ಇಳಿದಿದ್ದಾರೆ. ಇದಕ್ಕೆ ಬೆಂಗಳೂರಿನಲ್ಲಿ ಅಬಕಾರಿ ಉಪ ಆಯುಕ್ತರ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಬಸವರಾಜ ಸಂಧಿವಾಡ ಎಂಬಾತ ಸೇರಿಕೊಂಡಿದ್ದಾರೆ ಎಂದು ಈಗಾಗಲೇ ಗವರ್ನರ್​ಗೆ ಕೊಟ್ಟಿರುವ ದೂರಿನಲ್ಲಿ ಅಧಿಕಾರಿಗಳ ಹೆಸರು ಸಮೇತ ನಮೂದಿಸಲಾಗಿತ್ತು. ಇಲಾಖೆಯಲ್ಲಿ ನಡೆಯುತ್ತಿರುವ ನಿಯಮಬಾಹಿರ ವರ್ಗಾವಣೆ ಬಗ್ಗೆಯೂ ಉಲ್ಲೇಖಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net