ಇ-ಆಸ್ತಿ ನೋಂದಣಿಗೆ ಲಂಚ: ಯುವ ಕಾಂಗ್ರೆಸ್ ಆಕ್ರೋಶ

congress
ಇ-ಆಸ್ತಿ ನೋಂದಣಿಗೆ ಪಾಲಿಕೆಯಲ್ಲಿ ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಎಚ್.ಪಿ.ಗಿರೀಶ್, ಎಂ.ಪ್ರವೀಣ್‌ಕುಮಾರ್, ಕೆ.ರಂಗನಾಥ್, ಎಂ.ರಾಕೇಶ್, ಬಿ.ಲೋಕೇಶ್, ನಾಗೇಶ್, ಗುರುಪ್ರಸಾದ್, ನದೀಮ್ ಮತ್ತಿತರರು ಡಿಸಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.
Published on

ಶಿವಮೊಗ್ಗ: ಇ-ಆಸ್ತಿ ನೋಂದಣಿಗೆ ಸಾರ್ವಜನಿಕರನ್ನು ಅಲೆದಾಡಿಸಿ ಹಣಕ್ಕೆ ಬೇಡಿಕೆ ಇಡುತ್ತಿರುವ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಮುಖರು ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ರಾಜ್ಯದ ಎಲ್ಲ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳಿಗೆ ಇ-ಆಸ್ತಿ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶವನ್ನು ಸಂಯೋಜಿಸಲಾಗಿದೆ. ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಪಾಲಿಕೆ ವ್ಯಾಪ್ತಿಯ ಸ್ಥಿರಾಸ್ತಿ ನೊಂದಣಿಗೆ ಪಾಲಿಕೆಯ ಇ-ಆಸ್ತಿ ಹೊಂದಿರುವುದು ಕಡ್ಡಾಯವಾಗಿದೆ.

ಈಗ ಸ್ಥಿರಾಸ್ತಿಗಳ ಮಾರಾಟ, ಖರೀದಿ , ಬ್ಯಾಂಕ್, ಸೊಸೈಟಿಗಳಲ್ಲಿ ಸಾರ್ವಜನಿಕರು ಆಸ್ತಿ ಮೇಲೆ ಸಾಲ ಪಡೆಯುವುದು ಕಷ್ಟವಾಗುತ್ತಿದೆ. ಪಾಲಿಕೆ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ನಾಗರಿಕರು ನಿತ್ಯ ಅಲೆದಾಡುವಂತಾಗಿದೆ. ಇ-ಆಸ್ತಿ ಮಾಡಿಸಲು ಪಾಲಿಕೆಯ ಕಂದಾಯ ವಿಭಾಗದಲ್ಲಿ ದಿನವಿಡೀ ಜನಸಾಗರವೇ ಕಂಡುಬರುತ್ತಿದೆ. ನೂತನ ವ್ಯವಸ್ಥೆ ಬಗ್ಗೆ ಅಧಿಕಾರಿಗಳು ಸಹ ಸರಿಯಾದ ಮಾಹಿತಿ ನೀಡುತ್ತಿಲ್ಲ. ಎಲ್ಲ ದಾಖಲಾತಿ ಸರಿಯಿದ್ದರೂ ಪರಿಶೀಲಿಸಲಾಗುವುದು ಎಂದು ನೆಪ ಹೇಳುತ್ತಿದ್ದಾರೆ ಎಂದು ದೂರಿದರು.

ಅಧಿಕಾರಿಗಳು ನೇರವಾಗಿ ಸಾರ್ವಜನಿಕರಿಗೆ 10-20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ನಗರ ಪಾಲಿಕೆಗೆ ಭೇಟಿ ನೀಡಿ ಸಂಬಂಧಿಸಿದ ಕಂದಾಯ ವಿಭಾಗದ ಅಧಿಕಾರಿಗಳ ಲಾಗಿನ್‌ಗಳನ್ನು ಪರಿಶೀಲಿಸಿ ತ್ವರಿತಗತಿಯಲ್ಲಿ ಇ-ಆಸ್ತಿ ನೋಂದಣಿಗೆ ಕ್ರಮ ಕೈಗೊಳ್ಳಬೇಕು. ಲಂಚಕ್ಕೆ ಬೇಡಿಕೆ ಇಡುತ್ತಿರುವ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರಮುಖರಾದ ಕೆ.ರಂಗನಾಥ್, ಎಂ.ಪ್ರವೀಣ್‌ಕುಮಾರ್, ಎಚ್.ಪಿ.ಗಿರೀಶ್, ಬಿ.ಲೋಕೇಶ್, ಎಸ್.ಕುಮರೇಶ್, ಎಂ.ರಾಹುಲ್, ಪುಷ್ಪಕ್‌ಕುಮಾರ್, ಮೋಹನ್, ಎಂ.ರಾಕೇಶ್, ಕೆ.ಎಲ್.ಪವನ್, ಗುರುಪ್ರಸಾದ್, ನಾಗೇಶ್, ನದೀಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net