ಆಫೀಸರ್​ ಕೈಯಿಂದ ತಪ್ಪಿಸಿಕೊಳ್ಳಲು ಲಂಚದ ಹಣದೊಂದಿಗೆ ಕೆರೆಗೆ ಹಾರಿದ ಭ್ರಷ್ಟ ಅಧಿಕಾರಿ! ಹಣಕ್ಕಾಗಿ ಶೋಧ | Bribe

ವಿಜಯವಾಣಿ - 2025-03-16T172136.902
Published on

ಕೊಯಮತ್ತೂರು: ಲಂಚ ಪಡೆಯುತ್ತಿದ್ದ (Bribe Officer) ಗ್ರಾಮ ಆಡಳಿತ ಅಧಿಕಾರಿಯನ್ನು ರೆಡ್​ ಹ್ಯಾಂಡ್​ ಆಗಿ ಸೆರೆಹಿಡಿದ ವಿಜಿಲೆನ್ಸ್ ಅಧಿಕಾರಿಯೊಬ್ಬರು, ಆತನನ್ನು ಇನ್ನೇನು ಬಂಧಿಸಬೇಕು ಎನ್ನುವಷ್ಟರಲ್ಲಿ ಅಧಿಕಾರಿಯಿಂದ ತಪ್ಪಿಸಿಕೊಂಡು ಓಡಿದ್ದು, ಸಿಕ್ಕಿಬೀಳ್ತೀನಿ ಎಂಬ ಭಯದಿಂದ ಲಂಚದ ಹಣದೊಂದಿಗೆ ಕರೆಗೆ ಜಿಗಿದಿದ್ದಾನೆ. ತಕ್ಷಣವೇ ಅಧಿಕಾರಿಗಳು ನೀರಿಗೆ ಹಾರಿ, ಆತನನ್ನು ಬಂಧನಕ್ಕೆ ಒಳಪಡಿಸುವಲ್ಲಿ  ಕಡೆಗೂ ಯಶಸ್ವಿಯಾಗಿದರು.

ವಿಎಓ ಆಫೀಸರ್​ ಬೆನ್ನಟ್ಟಿದ ವಿಜಿಲೆನ್ಸ್ ಅಧಿಕಾರಿಗಳು, ಆರೋಪಿ ಲಂಚದ ಹಣದ ಜತೆಗೆ ಕೆರೆಗೆ ಜಿಗಿದಿದ್ದನ್ನು ಕಂಡು, ತಾವು ಕೂಡ ನೀರಿಗೆ ಹಾರಿ ಆತನನ್ನು ಅರೆಸ್ಟ್ ಮಾಡಿದ್ದಾರೆ. ಕೊಯಮತ್ತೂರಿನ ಮಥರಾಯಪುರಂನ ಥೇಣಿ ಮೂಲದ ಎಂ. ವೆಟ್ರಿವೇಲ್ (32) ಎಂಬಾತನನ್ನು ಬಂಧಿಸುವಲ್ಲಿ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ (ಡಿವಿಎಸಿ) ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕ್ಯಾನ್ಸರ್ ರೋಗಿಯಾಗಿದ್ದ ಮಾರತ್ತಲ್, ತನ್ನ ಪತಿ ಸಾವನ್ನಪ್ಪಿದ ನಂತರ ಸ್ವಾಧೀನ ಪ್ರಮಾಣಪತ್ರ ಪಡೆಯಲು ತಿಂಗಳುಗಳಿಂದ ಗ್ರಾಮ ಕಚೇರಿಗೆ ಅಲೆದಾಡುತ್ತಿದ್ದರು. ಈ ಸರ್ಟಿಫಿಕೆಟ್​ ಕೊಡಲು ಭ್ರಷ್ಟ ಅಧಿಕಾರಿ ಲಂಚದ ಬೇಡಿಕೆಯಿಟ್ಟಿದ್ದ ಎಂಬುದು ನೊಂದವರ ಆರೋಪ.

5,000 ರೂ. ಪಾವತಿಸಿದರೆ ಈ ಕೂಡಲೇ ಪ್ರಮಾಣಪತ್ರವನ್ನು ಹಸ್ತಾಂತರಿಸುತ್ತೇನೆ ಎಂದು ವಿಜಿಎಒ ಹೇಳಿದ್ದ. ಫೆಬ್ರವರಿ ಅಂತ್ಯದಲ್ಲಿ 1,000 ರೂ. ಕೊಡಿ, ಇನ್ನು ಉಳಿದ ಮೊತ್ತವನ್ನು ಪ್ರಮಾಣಪತ್ರ ಕೈಗೆ ಕೊಡುವಾಗ ನೀಡಬೇಕು ಎಂದು ತಿಳಿಸಿದ್ದ. ಭ್ರಷ್ಟ ಆಫೀಸರ್​ನ ಲಂಚದ ಬೇಡಿಕೆಯನ್ನು ಮಾರತ್ತಲ್ ಅವರ ಅಳಿಯ ಕೃಷ್ಣಸ್ವಾಮಿ (62) ವಿಜಿಲೆನ್ಸ್‌ಗೆ ದೂರು ನೀಡಿದ್ದರು. ವಿಜಿಲೆನ್ಸ್ ಸೂಚನೆಯಂತೆ ಪೇರೂರ್ ತಾಲ್ಲೂಕು ಕಚೇರಿ ಬಳಿಯ ಬ್ಯಾಂಕ್ ಮುಂದೆ 3,500 ರೂ.ಗಳನ್ನು ವಿಎಓಗೆ ತಲುಪಿಸಬಹುದು ಎಂದು ಕೃಷ್ಣಸ್ವಾಮಿ ವಿಜಿಲೆನ್ಸ್‌ಗೆ ತಿಳಿಸಿದ್ದರು. ಅಂತೆಯೇ ಶುಕ್ರವಾರ (ಮಾ.14) ರಾತ್ರಿ 8 ಗಂಟೆ ಸುಮಾರಿಗೆ ವೆಟ್ರಿವೇಲ್ ತನ್ನ ಬೈಕ್​ನಲ್ಲಿ ಲಂಚಕ್ಕಾಗಿ ಕೃಷ್ಣಸ್ವಾಮಿ ಹೇಳಿದ್ದ ಸ್ಥಳದಲ್ಲಿ ಕಾಯುತ್ತಿದ್ದ.

ವಿಎಓ ಆಫೀಸರ್​ಗೆ ಕೃಷ್ಣಸ್ವಾಮಿ 3,500 ರೂ. ಲಂಚ ಕೊಟ್ಟಿದ್ದೇ ತಡ ವಿಜಿಲೆನ್ಸ್ ಅಧಿಕಾರಿಗಳು ಭ್ರಷ್ಟ ಅಧಿಕಾರಿಯನ್ನು ಸುತ್ತುವರೆದಿದ್ದರು. ತಪಾಸಣೆಯ ಸಮಯದಲ್ಲಿ ವೆಟ್ರಿವೇಲ್ ಅಧಿಕಾರಿಗಳಿಂದ ತಪ್ಪಿಸಿಕೊಂಡು, ಬೈಕ್ ಹತ್ತಲು ಪ್ರಯತ್ನಿಸಿದ್ದ. ಈ ವೇಳೆ ವಿಜಿಲೆನ್ಸ್ ಅಧಿಕಾರಿಗಳು ತಮ್ಮ ಕಾರಿನಲ್ಲಿ ಆತನನ್ನು ಬೆನ್ನಟ್ಟಿದರು. ಬೈಕ್​ ಬಿಟ್ಟು ಓಡಲು ಪ್ರಾರಂಭಿಸಿದ ಆಫೀಸರ್​, ಪೆರೂರ್ ಪೆರಿಯಾಕುಲಂ ಕೆರೆಗೆ ಜಿಗಿದು, ತಪ್ಪಿಸಿಕೊಳ್ಳಲು ಯತ್ನಿಸಿದ. ಆದರೆ, ಅದು ವಿಫಲವಾಯಿತು. ಆತನನ್ನು ಅಧಿಕಾರಿಗಳು ಬಂಧಿಸಿದ್ದೇ ಆದರೂ ಪಡೆದ ಲಂಚವನ್ನು ವಶಪಡಿಸಿಕೊಳ್ಳುವಲ್ಲಿ ವಿಫಲರಾದರು. ಎಷ್ಟೇ ಹುಡುಕಾಡಿದರೂ ನೀರಿನ ಮಣ್ಣಿನಲ್ಲಿ ಯಾವುದೇ ನೋಟುಗಳು ಸಿಕ್ಕಿಲ್ಲ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net