

ಧಾರವಾಡ: ಕರೊನಾ ಲಾಕ್ಡೌನ್ ಬಳಿಕ ಸಿವಿಲ್ ಗುತ್ತಿಗೆದಾರರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಭ್ರಷ್ಟಾಚಾರ ಪೆಡಂಭೂತದಂತೆ ಕಾಡುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಲಂಚ 3 ಪಟ್ಟು ಹೆಚ್ಚಳವಾಗಿದೆ. ಆದ್ದರಿಂದ ಪರ್ಸೆಂಟೇಜ್ ಮುಕ್ತ ವ್ಯವಸ್ಥೆ ನಿರ್ಮಾಣ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಕೋರಿ ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಅಧ್ಯಕ್ಷ ಸುಭಾಷ ಪಾಟೀಲ, ಒಂದು ತಿಂಗಳೊಳಗೆ ನಮ್ಮ ಬೇಡಿಕೆ ಈಡೇರಿಸದೆ ಇದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಲಂಚದ ಕುರಿತು ಮಾರ್ಚ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದ್ದು, ಹಿಂದಿನ ಸರ್ಕಾರಕ್ಕಿಂತ ಬಿಜೆಪಿ ಸರ್ಕಾರದಲ್ಲಿ 3 ಪಟ್ಟು ಲಂಚ ಹೆಚ್ಚಳವಾಗಿರುವ ಮಾಹಿತಿ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಹ ಪತ್ರ ಬರೆದಿದ್ದೇವೆ. ಭ್ರಷ್ಟ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಿ ನೀಡುತ್ತೇವೆ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಲಾಗಿದೆ. ಒಂದೇ ಇಲಾಖೆಯ ಬೇರೆ ಬೇರೆ ವಿಭಾಗಗಳಲ್ಲಿ ಒಂದೇ ರೀತಿಯ ಷರತ್ತು ವಿಧಿಸದೆ ಅಧಿಕಾರಿಗಳು ತಮಗೆ ಬೇಕಾದವರಿಗೆ ಬೇಕಾದಂತೆ ಷರತ್ತು ಬದಲಾಯಿಸಿ ಟೆಂಡರ್ ಸಮಯ ನಿಗದಿ ಮಾಡುವುದೂ ಇದೆ ಎಂದು ಆರೋಪಿಸಿದರು.
ವಿವಿಧ ಇಲಾಖೆಗಳಿಂದ ಉತ್ತರ ಕರ್ನಾಟಕದ 300ಕ್ಕೂ ಹೆಚ್ಚು ಗುತ್ತಿಗೆದಾರರಿಗೆ ಅಂದಾಜು 8000 ಕೋಟಿ ರೂ. ಪಾವತಿ ಬಾಕಿ ಇದೆ. ಇದನ್ನು ಶೀಘ್ರ ಬಿಡುಗಡೆ ಮಾಡಬೇಕು. ರಾಜಧನದ ದರಗಳು ಹೆಚ್ಚಾದ ತಕ್ಷಣ ಇಲಾಖೆಗಳು ಅದರಂತೆಯೆ ಗುತ್ತಿಗೆದಾರರ ಬಿಲ್ಗಳಲ್ಲಿ ಹಣ ಕಡಿತ ಮಾಡುತ್ತವೆ. ಇದರ ಬದಲು, ಗುತ್ತಿಗೆ ದರ ಪಟ್ಟಿಯಲ್ಲಿ ಹೊಸ ದರ ಸೇರಿದ ಬಳಿಕ ಬಿಲ್ನಲ್ಲಿ ಹಣ ಕಟ್ ಮಾಡಬೇಕು. 2022ರ ಜನವರಿಯಿಂದ ಸರ್ಕಾರಿ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರಿಗೆ ಶೇ.12ರ ಬದಲು ಶೇ.18 ಜಿಎಸ್ಟಿ ವಿಧಿಸಲು ಸರ್ಕಾರದ ಆದೇಶ ಬಂದಿದೆ. ಜನವರಿ ಮೊದಲು ಕಾರ್ಯಾದೇಶ ಪಡೆದ ಕಾಮಗಾರಿಗೆ ಇದನ್ನು ಅನ್ವಯಿಸಬಾರದು. ಇಲ್ಲದಿದ್ದರೆ ಶೇ.6 ವ್ಯತ್ಯಾಸವನ್ನು ಇಲಾಖೆಯಿಂದ ಭರಿಸಬೇಕು ಎಂದು ಆಗ್ರಹಿಸಿದರು. ಸರಿಯಾಗಿ ಹಣ ಪಾವತಿ, ಲಂಚ ಮುಕ್ತ ವ್ಯವಸ್ಥೆ ನಿರ್ಮಾಣ ಸೇರಿ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಕೆಲಸ ಬಂದ್ ಮಾಡಿ ಹೋರಾಟ ನಡೆಸಲು ತೀರ್ವನಿಸಲಾಗಿದೆ. ತಿಂಗಳ ನಂತರ ಎಲ್ಲ ಸದಸ್ಯರು ಮತ್ತೊಂದು ಸಭೆ ಸೇರಿ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಾಗುವುದು ಎಂದರು. ಲಂಚದ ಸ್ವರೂಪ ಬಗ್ಗೆ ಪದೇಪದೆ ಕೇಳಿದರೂ ಉತ್ತರಿಸಲು ಅಧ್ಯಕ್ಷರು ನಿರಾಕರಿಸಿದರು.