ತಾಯಿ ಹಾಲು ಮಗುವಿಗೆ ಆರೋಗ್ಯದಾಯಕ

anr (1)
ಆಯನೂರಿನಲ್ಲಿ ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಎಸ್.ಎನ್.ರುದ್ರಾಂಬಿಕಾ, ಶೇರ್ ಅಲಿಖಾನ್, ರತ್ನಮ್ಮ, ನಾಗರತ್ನ, ಜಯಂತಿ ಇತರರಿದ್ದರು.
Published on

ಆಯನೂರು: ತಾಯಿ ತನ್ನ ಶಿಶುವಿಗೆ ಹಾಲುಣಿಸುವುದರಿಂದ ಬ್ಬರಿಗೂ ಪ್ರಯೋಜನಕಾರಿ. ಏಕೆಂದರೆ ತಾಯಿ ಹಾಲು ಸೇವಿಸುವುದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೆ ತಾಯಿಗೂ ಇದು ಆರೋಗ್ಯಕರ ಎಂದು ಎಂದು ಕುಂಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಎಸ್.ಎನ್.ರುದ್ರಾಂಬಿಕಾ ಹೇಳಿದರು.

ಆಯನೂರಿನಲ್ಲಿ ಬುಧವಾರ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಶುವಿಗೆ ಅಗತ್ಯವಿರುವ ಎಲ್ಲ ಪೌಷ್ಟಿಕಾಂಶಗಳು ತಾಯಿ ಹಾಲಿನಲ್ಲಿ ಇರುತ್ತವೆ ಎಂದರು.

ತಾಯಿ ಹಾಲಿನಲ್ಲಿ ಶೇ.87 ನೀರು, ಶೇ.7 ಕಾರ್ಬೋಹೈಡ್ರೇಟ್ಸ್, ಶೇ.4 ಲಿಪಿಡ್, ಶೇ.1ರಷ್ಟು ಪ್ರೋಟೀನ್ ಒಳಗೊಂಡಿರುತ್ತದೆ. ಜೀವಸತ್ವಗಳು ಮತ್ತು ಇತರ ಖನಿಜಾಂಶಗಳಾದ ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಂ, ಪೊಟ್ಯಾಷಿಯಂ, ಸೋಡಿಯಂ ಇರುತ್ತವೆ. ಮಗುವನ್ನು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕಾಯಿಲೆಗಳನ್ನು ತಡೆಗಟ್ಟುತ್ತದೆ ಎಂದು ತಿಳಿಸಿದರು.

ಮಗುವಿಗೆ ತಾಯಿ ಹಾಲುಣಿಸುವುದರಿಂದ ಇಬ್ಬರಿಗೂ ಹಲವು ಪ್ರಯೋಜನಗಳಿವೆ. ಉಸಿರಾಟದ ತೊಂದರೆ, ಬ್ರಾಂಕೋಪಲ್ಮನರಿ ಡಿಸ್ಪ್ಲಾಸಿಯಾ, ಹಠಾತ್ ಶಿಶು ಮರಣ, ಅತಿಸಾರ, ನೆಕ್ರೋಟೈಸಿಂಗ್ ಎಂಟರೊಕೊಲೈಟಿಸ್, ಮಧ್ಯ ಕಿವಿಯ ಸೋಂಕು, ಬೊಜ್ಜು, ಮಧುಮೇಹವನ್ನು ತಡೆಗಟ್ಟುತ್ತದೆ. ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಮಾಹಿತಿ ನೀಡಿದರು.

ಗರ್ಭಿಣಿಯರು, ಮಾತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ತಾಯಿ ಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು. ಆರೋಗ್ಯ ನಿರೀಕ್ಷಣಾಧಿಕಾರಿ ಶೇರ್ ಅಲಿಖಾನ್, ಮಕ್ಕಳ ಸಮಿತಿ ಅಧ್ಯಕ್ಷೆ ರತ್ನಮ್ಮ, ಅಂಗನವಾಡಿ ಮೇಲ್ವಿಚಾರಕಿ ನಾಗರತ್ನ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net