

ಸ್ತನ ಕ್ಯಾನ್ಸರ್ ರೋಗನಿರ್ಣಯವು ನೋವಿನ ಭಯ, ಸ್ತನವನ್ನು ಕಳೆದುಕೊಳ್ಳುವ ಭಯ ಮತ್ತು ಸಹಜ ಜೀವನವನ್ನು ಕಳೆದುಕೊಳ್ಳುವ ಭಯದ ಅಲೆಯನ್ನು ಸೃಷ್ಟಿಸುವುದು ಸಾಮಾನ್ಯ. ಆದರೆ ಮೈಸೂರು ಮತ್ತು ಇತರ ಪ್ರದೇಶಗಳ ಅನೇಕ ಮಹಿಳೆಯರು ಅರಿಯದೇ ಇರುವ ವಿಷಯವೇನೆಂದರೆ, ಸ್ತನ ಕ್ಯಾನ್ಸರ್ ಚಿಕಿತ್ಸೆಯ ಸ್ವರೂಪವು ಪ್ರಸ್ತುತ ಬಹಳಷ್ಟು ಬದಲಾಗಿದೆ. ಇಂದು ಚಿಕಿತ್ಸೆಯು ಕೇವಲ ರೋಗವನ್ನು ಇಲ್ಲವಾಗಿಸುವುದಕ್ಕಷ್ಟೇ ಸೀಮಿತವಾಗದೇ; ಮಹಿಳೆಯರ ಘನತೆ, ದೇಹದ ರೂಪ ಮತ್ತು ಆತ್ಮವಿಶ್ವಾಸವನ್ನು ಮರುಸ್ಥಾಪಿಸುವುದನ್ನೂ ಒಳಗೊಂಡಿದೆ.
ಸ್ತನ ಕ್ಯಾನ್ಸರ್ ಆರೈಕೆಯ ಹೊಸ ಆಯಾಮ
ಮ್ಯಾಸ್ಟೆಕ್ಟಮಿಯೊಂದೇ (ಸಂಪೂರ್ಣ ಸ್ತನ ತೆಗೆದುಹಾಕುವಿಕೆ) ಆಯ್ಕೆಯಾಗಿದ್ದ ದಿನಗಳು ಈಗ ದೂರವಾಗಿವೆ. ಆರಂಭಿಕ ರೋಗನಿರ್ಣಯ ಮತ್ತು ನಿಖರವಾದ ಇಮೇಜಿಂಗ್‌ನಿಂದಾಗಿ, ಸ್ತನ ಸಂರಕ್ಷಣಾ ಶಸ್ತ್ರಚಿಕಿತ್ಸೆ (Breast-conserving surgery) ಪ್ರಸ್ತುತ ಸಾಮಾನ್ಯವಾಗಿದೆ. ಅನೇಕ ಮಹಿಳೆಯರಲ್ಲಿ ಗಡ್ಡೆಯನ್ನು (tumour) ಮಾತ್ರ ಜಾಗರೂಕತೆಯಿಂದ ತೆಗೆದುಹಾಕಿ ಸ್ತನದ ಹೆಚ್ಚಿನ ಭಾಗವನ್ನು ಸಂರಕ್ಷಿಸಬಹುದು. ಇದರಿಂದ ಸೌಂದರ್ಯವು ಕುಂದುವುದಿಲ್ಲ. ಜೊತೆಗೆ, ಬದುಕುಳಿಯುವಿಕೆಯ ಪ್ರಮಾಣವು ಸಾಂಪ್ರದಾಯಿಕ ಮ್ಯಾಸ್ಟೆಕ್ಟಮಿಯಷ್ಟೇ ಇರುತ್ತದೆ.
ಮ್ಯಾಸ್ಟೆಕ್ಟಮಿ ಅಗತ್ಯವಿರುವವರಿಗೆ ರೋಗಿಯ ಸ್ವಂತ ಅಂಗಾಂಶ ಅಥವಾ ಕಸಿಗಳನ್ನು (implants) ಬಳಸಿಕೊಂಡು ಸ್ತನ ಪುನರ್‌ನಿರ್ಮಾಣ ಚಿಕಿತ್ಸೆಯನ್ನು (breast reconstruction) ನಿಯಮಿತವಾಗಿ ನೀಡಲಾಗುತ್ತದೆ. ಪುನರ್‌ನಿರ್ಮಾಣವನ್ನು ತಕ್ಷಣವೇ, ಅಂದರೆ ಅದೇ ಶಸ್ತ್ರಚಿಕಿತ್ಸೆಯಲ್ಲಿ ಮಾಡಬಹುದು. ಇದರಲ್ಲಿ ರೋಗಿಯು ಅತ್ಯಂತ ವೇಗವಾಗಿ ಚೇತರಿಸಿಕೊಳ್ಳುಪ್ರಯತ್ನ
ನುರಿತ ತಂಡದ ಸಹಯೋಗ
ಆಧುನಿಕ ಸ್ತನ ಕ್ಯಾನ್ಸರ್ ಚಿಕಿತ್ಸೆಯು ನುರಿತ ತಂಡದ ಪ್ರಯತ್ನವಾಗಿದೆ. ಶಸ್ತ್ರಚಿಕಿತ್ಸಕರು, ವೈದ್ಯಕೀಯ ಆಂಕೊಲಾಜಿಸ್ಟ್‌ಗಳು, ವಿಕಿರಣ ಆಂಕೊಲಾಜಿಸ್ಟ್‌ಗಳು, ರೋಗಶಾಸ್ತ್ರಜ್ಞರು, ವಿಕಿರಣಶಾಸ್ತ್ರಜ್ಞರು ಮತ್ತು ಸಲಹೆಗಾರರು ಎಲ್ಲರೂ ಒಟ್ಟಾಗಿ ಬಹು-ಶಿಸ್ತಿನ ಗಡ್ಡೆ ಮಂಡಳಿ (multidisciplinary tumour board) ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಸುಧಾರಿತ ಚಿಕಿತ್ಸೆಗಳು ಪ್ರತಿಯೊಂದು ರೋಗಿಯ ಗಡ್ಡೆಯ ಜೈವಿಕ ಸ್ವರೂಪ (tumour biology) ಮತ್ತು ರೋಗಿಯ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚು ವೈಯಕ್ತೀಕರಿಸಿದ ವಿಧಾನಕ್ಕೆ ಅನುಕೂಲ ಮಾಡಿಕೊಡುತ್ತವೆ. ಇಂತಹ ಸಹಯೋಗದ ಚಿಕಿತ್ಸೆಯು ಸ್ತನ ಕ್ಯಾನ್ಸರ್ ಹೊಂದಿರುವ ಪ್ರತಿ ಮಹಿಳೆಯು ಶಸ್ತ್ರಚಿಕಿತ್ಸೆ, ಔಷಧಿ ಮತ್ತು ವಿಕಿರಣದ ಸರಿಯಾದ ಸಂಯೋಜನೆಯೊಂದಿಗೆ ವೈಯಕ್ತಿಕ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.
ಕಿಮೊಥೆರಪಿಯಿಂದಾಚೆ ಇನ್ನೂ ಏನೇನಿದೆ? ವೈಯಕ್ತಿಕಗೊಳಿಸಿದ ಔಷಧ
ಅನೇಕರು ಇನ್ನೂ ಕ್ಯಾನ್ಸರ್ ಚಿಕಿತ್ಸೆಯನ್ನು ಕಿಮೊಥೆರಪಿಯಿಂದ ಉಂಟಾಗುವ ಕೂದಲು ಉದುರುವಿಕೆ ಮತ್ತು ಆಯಾಸದೊಂದಿಗೆ ಥಳುಕು ಹಾಕುತ್ತಾರೆ. ಆದರೆ, ಸತ್ಯವೇನೆಂದರೆ ಕಿಮೊಥೆರಪಿಯು ಈಗ ಹೆಚ್ಚು ಅಭಿವೃದ್ಧಿಗೊಂಡಿದೆ. ಅನೇಕ ಆರಂಭಿಕ ಹಂತದ ಪ್ರಕರಣಗಳಲ್ಲಿ ಕಿಮೊಥೆರಪಿಯ ಅಗತ್ಯವೇ ಇರುವುದಿಲ್ಲ.
ಆಣ್ವಿಕ ಜೀವಶಾಸ್ತ್ರದಲ್ಲಿನ (molecular biology) ಪ್ರಗತಿಗಳು ಹಾರ್ಮೋನ್ ಥೆರಪಿ (hormone therapy), ನಿರ್ದಿಷ್ಟ ಗುರಿಯ ಚಿಕಿತ್ಸೆ (targeted therapy) ಮತ್ತು ಪ್ರತಿರಕ್ಷಣಾ ಚಿಕಿತ್ಸೆಯನ್ನು (immunotherapy) ಪರಿಚಯಿಸಿವೆ.
ಹಾರ್ಮೋನ್ ಥೆರಪಿಯನ್ನು ಹಾರ್ಮೋನ್‌ಗೆ ಪ್ರತಿಕ್ರಿಯಿಸುವ ಕ್ಯಾನ್ಸರ್‌ಗಳಲ್ಲಿ ಬಳಸಲಾಗುತ್ತದೆ. ಇದು ಈಸ್ಟ್ರೊಜೆನ್ ಅಥವಾ ಪ್ರೊಜೆಸ್ಟರಾನ್ ಪರಿಣಾಮಗಳನ್ನು ತಡೆಯುವ ಮೂಲಕ ಕಾರ್ಯನಿರ್ವಹಿಸುತ್ತದೆ.
ನಿರ್ದಿಷ್ಟ ಗುರಿಯ ಚಿಕಿತ್ಸೆಯು ಹೆಸರೇ ಸೂಚಿಸುವಂತೆ, ಸಾಮಾನ್ಯ ಕೋಶಗಳ ಮೇಲೆ ಯಾವುದೇ ಪರಿಣಾಮ ಬೀರದೆ, ಕ್ಯಾನ್ಸರ್ ಕೋಶಗಳೊಳಗಿನ ನಿರ್ದಿಷ್ಟ ಆಣ್ವಿಕ ದೋಷಗಳನ್ನು ಮಾತ್ರ ಗುರಿಯಾಗಿಸುತ್ತದೆ. ಇದರಿಂದ ಅಡ್ಡಪರಿಣಾಮಗಳು ಕಡಿಮೆಯಾಗುತ್ತವೆ.
ಪ್ರತಿರಕ್ಷಣಾ ಚಿಕಿತ್ಸೆಯು ಕ್ಯಾನ್ಸರ್ ವಿರುದ್ಧ ಹೋರಾಡಲು ದೇಹದ ಸ್ವಂತ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಜೊತೆಗೆ, ತರಬೇತಿ ನೀಡುತ್ತದೆ. ಈ ಚಿಕಿತ್ಸೆಗಳು ಚಿಕಿತ್ಸೆಯ ಫಲಿತಾಂಶಗಳನ್ನು ಪರಿವರ್ತಿಸಿ ರೋಗಿಗಳನ್ನು ಹೆಚ್ಚು ಗುಣಮುಖರನ್ನಾಗಿಸುತ್ತದೆ. ಸ್ತನ ಕ್ಯಾನ್ಸರ್ ನಿರ್ವಹಣೆಯನ್ನು ಹೆಚ್ಚು ನಿಖರ, ಕಡಿಮೆ ಆಘಾತಕಾರಿ ಮತ್ತು ಹೆಚ್ಚು ಮಾನವೀಯಗೊಳಿಸಿವೆ.
ವಿಕಿರಣದ ಪಾತ್ರ
ವಿಕಿರಣ ಚಿಕಿತ್ಸೆಯೂ (Radiation therapy) ಸಹ ಪ್ರಸ್ತುತ ವಿಕಸನಗೊಂಡಿದೆ. ಆಧುನಿಕ ಯಂತ್ರಗಳು ವಿಕಿರಣ ಕಿರಣಗಳನ್ನು ಮಿಲಿಮೀಟರ್ ನಿಖರತೆಯೊಂದಿಗೆ ಕೇಂದ್ರೀಕರಿಸುತ್ತವೆ. ಜೊತೆಗೆ, ಹೃದಯ ಮತ್ತು ಶ್ವಾಸಕೋಶಗಳಂತಹ ಆರೋಗ್ಯಕರ ಅಂಗಾಂಶಗಳನ್ನು ರಕ್ಷಿಸುತ್ತವೆ.
ಸ್ತನ ಸಂರಕ್ಷಣಾ ಶಸ್ತ್ರಚಿಕಿತ್ಸೆಯ ಪಾತ್ರ
ಉಳಿದಿರಬಹುದಾದ ಸೂಕ್ಷ್ಮ ಕೋಶಗಳನ್ನು ನಾಶಮಾಡಲು ವಿಕಿರಣವು ಸಹಾಯ ಮಾಡುತ್ತದೆ, ಇದರಿಂದ ಮರುಕಳಿಸುವಿಕೆಯ ಅಪಾಯವನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ.
ಗುಣಪಡಿಸುವುದರಿಂದಾಚೆಗೆ ಆರೈಕೆ
ವೈದ್ಯಕೀಯ ವಿಜ್ಞಾನದ ಅತ್ಯುತ್ತಮ ಸೌಲಭ್ಯವು ಆಸ್ಪತ್ರೆಗಳಲ್ಲಿ ಲಭ್ಯವಿದ್ದರೂ, ಕ್ಯಾನ್ಸರ್ ನಿಂದ ಚೇತರಿಕೆಯಲ್ಲಿ ಸಹಾನುಭೂತಿ ಮತ್ತು ಮಾನವೀಯತೆಯ ಪಾತ್ರ ಪ್ರಮುಖವಾಗಿದೆ. ಸಲಹೆ, ಬೆಂಬಲ ಗುಂಪುಗಳು, ಮತ್ತು ಬದುಕುಳಿದವರ ಜೊತೆಗಿನ ಬೆರೆಯುವಿಕೆ ಕಾರ್ಯಕ್ರಮಗಳೊಂದಿಗೆ ಸಹಾನುಭೂತಿಯ ಆರೈಕೆಯು (Compassionate care) ಶಸ್ತ್ರಚಿಕಿತ್ಸೆ ಅಥವಾ ವೈದ್ಯಕೀಯ ಚಿಕಿತ್ಸೆಯಷ್ಟೇ ಮುಖ್ಯವಾಗಿದೆ.
ನಮ್ಮಂತಹ ಅನೇಕ ಆಸ್ಪತ್ರೆಗಳು ಮಹಿಳೆಯರು ಅಡ್ಡಪರಿಣಾಮಗಳನ್ನು ನಿರ್ವಹಿಸಲು, ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಮತ್ತು ಮೊದಲಿನಷ್ಟೇ ಪ್ರಬಲವಾಗಿ ತಮ್ಮ ದೈನಂದಿನ ಜೀವನಕ್ಕೆ ಮರಳಲು ಸಹಾಯ ಮಾಡುವ ಬೆಂಬಲ ವ್ಯವಸ್ಥೆಗಳನ್ನು ಹೊಂದಿವೆ.
ಮೈಸೂರಿನಿಂದ ನೀಡುವ ಸಂದೇಶ
ಪ್ರತಿ ಬಾರಿ ನಾನು ಓರ್ವ ಮಹಿಳೆಗೆ ನೀಡುವ ಅಭಯವು ಅವಳ ಮುಖದಲ್ಲಿ ಭರವಸೆಯಾಗಿ ಪ್ರತಿಧ್ವನಿಸುತ್ತದೆ. ತನ್ನ ಸ್ತನವನ್ನು ಕಳೆದುಕೊಳ್ಳಬೇಕಾಗಿಲ್ಲ ಅಥವಾ ಅವಳ ಕ್ಯಾನ್ಸರ್ ಗುಣಪಡಿಸಬಹುದಾದದ್ದು ಎಂಬುದನ್ನು ಕೇಳಿದಾಗ, ಆಕೆಯ ಭಯವು ದೂರವಾಗಿ, ಭರವಸೆ ಮರಳುವುದು ನನಗೆ ಕಾಣಿಸುತ್ತದೆ. ಆಧುನಿಕ ಸ್ತನ ಕ್ಯಾನ್ಸರ್ ಚಿಕಿತ್ಸೆಯು ಆ ಭರವಸೆಯ ಪ್ರತೀಕವಾಗಿದೆ.
ಆರಂಭದಲ್ಲೇ ಪತ್ತೆಯಾದರೆ ಸ್ತನ ಕ್ಯಾನ್ಸರ್ ಜೀವನದ ಅಂತ್ಯವಲ್ಲ, ಅದು ಒಂದು ಹೊಸ, ಬಲವಾದ ಅಧ್ಯಾಯದ ಆರಂಭವಾಗಬಲ್ಲದು. ಆಧುನಿಕ ಚಿಕಿತ್ಸೆಯು ರೋಗವನ್ನು ತೆಗೆದುಹಾಕುವುದಲ್ಲದೆ, ವ್ಯಕ್ತಿಯ ವ್ಯಕ್ತಿತ್ವದ ಘನತೆಯನ್ನು ಮರುಸ್ಥಾಪಿಸುತ್ತದೆ.
ಮಾಹಿತಿ: ಡಾ. ಜಯಕಾರ್ತಿಕ್ ವೈ., ಶಸ್ತ್ರಚಿಕಿತ್ಸಾ ಆಂಕೊಲಾಜಿಸ್ಟ್, ಮಣಿಪಾಲ್ ಆಸ್ಪತ್ರೆ, ಮೈಸೂರು