ಭಾರತಕ್ಕೆ ಆಗಮಿಸಿರುವ 21 ಇಟಲಿ ಪ್ರವಾಸಿಗರಲ್ಲಿ 15 ಮಂದಿಗೆ ಕೊರೊನಾ ವೈರಸ್​ ಪತ್ತೆ: ಏಮ್ಸ್​ನಲ್ಲಿ ಚಿಕಿತ್ಸೆ

Coronavirus
Published on

ನವದೆಹಲಿ: ಭಾರತಕ್ಕೆ ಆಗಮಿಸಿರುವ 15 ಮಂದಿ ಇಟಲಿ ಪ್ರವಾಸಿಗರಲ್ಲಿ ಕೊರೊನಾ ವೈರಸ್​ ಇರುವುದು ವೈದ್ಯಕೀಯ ಪರೀಕ್ಷೆಯಿಂದ ಧೃಡಪಟ್ಟಿರುವುದಾಗಿ ದೆಹಲಿಯ ಏಮ್ಸ್​ ಆಸ್ಪತ್ರೆ ಬುಧವಾರ ಖಚಿತಪಡಿಸಿದೆ.

ಎಲ್ಲ 15 ಇಟಲಿ ಪ್ರವಾಸಿಗರನ್ನು ದೆಹಲಿಯ ಚಾವ್ಲಾ ಏರಿಯದಲ್ಲಿರುವ ಇಂಡೋ-ಟಿಬೆಟನ್​ ಬಾರ್ಡರ್ ಪೊಲೀಸ್​ (ಐಟಿಬಿಪಿ) ಶಿಬಿರದಲ್ಲಿ ಬಂಧಿಸಲಾಗಿದ್ದು, ಏಮ್ಸ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಒಟ್ಟು 21 ಮಂದಿ ಇಟಲಿ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದರು. ಅದರಲ್ಲಿ 15 ಮಂದಿಗೆ ಪಾಸಿಟಿವ್​ ಕೊರೊನಾ ವೈರಸ್​ ಪತ್ತೆಯಾಗಿದೆ. ನಿನ್ನೆ ಮಧ್ಯಾಹ್ನದಿಂದ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ಭಾರತದಲ್ಲಿ ಒಟ್ಟು ಆರು ಮಂದಿಗೆ ಕೊರೊನಾ ವೈರಸ್​ ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆರು ಮಂದಿಯಲ್ಲಿ ರಾಜಸ್ಥಾನದಲ್ಲಿರುವ ಇಟಾಲಿಯನ್​ ದಂಪತಿ, ಬೆಂಗಳೂರಿನ ಟೆಕ್ಕಿ ಹಾಗೂ ಇಟಲಿಯಿಂದ ಭಾರತಕ್ಕೆ ಆಗಮಿಸಿದ ಓರ್ವರು ಸೇರಿದ್ದಾರೆ.

ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ನಿನ್ನೆ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ ಕೊರೊನಾ ವೈರಸ್​ ಕುರಿತು ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ದೇಶದ ಜನತೆಗೆ ಧೈರ್ಯ ತುಂಬಿದ್ದಾರೆ.

ಇಟಲಿಯಿಂದ ಬಂದಿದ್ದ ದೆಹಲಿ ನಿವಾಸಿಯೊಬ್ಬರು ಆಯೋಜಿಸಿದ್ದ ಪಾರ್ಟಿಗೆ ನೋಯ್ಡಾದ ಎರಡು ಶಾಲೆಯ ಕೆಲ ವಿದ್ಯಾರ್ಥಿಗಳು ತೆರಳಿದ್ದರಿಂದ ಕೊರೊನಾ ವೈರಸ್​ ಹರಡಿದೆ ಎಂದು ಹೇಳಲಾಗಿದ್ದು, ಎರಡು ಶಾಲೆಯನ್ನು ಸದ್ಯ ಶುಚಿಗೊಳಿಸಲಾಗಿದೆ.

ಇಟಲಿಯಿಂದ ಬಂದಿದ್ದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ಇಬ್ಬರು ಆಗ್ರಾ ವ್ಯಕ್ತಿಗಳಿಗೂ ಕೊರೊನಾ ವೈರಸ್​ ಲಕ್ಷಣಗಳಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಸದ್ಯ ದೇಶದಲ್ಲೂ ಕೊರೊನಾ ವೈರಸ್​ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಎಲ್ಲೆಡೆ ತೀವ್ರ ನಿಗಾವಹಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net