

ಬೆಂಗಳೂರು: ಉಲ್ಲಾಳ ಬಳಿ ಇರುವ ನಗರ ಸಶಸ್ತ್ರ ಮೀಸಲು ಪಡೆ(ಸಿಎಆರ್) ಪಶ್ಚಿಮ ಘಟಕದ ಆವರಣದಲ್ಲಿರುವ ಶಸ್ತ್ರಗಾರಕ್ಕೆ ನುಗ್ಗಿ, ಕರ್ತವ್ಯ ನಿರತ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.
ಈ ಸಂಬಂಧ ಸಿಎಆರ್‌ನ ಕಾನ್‌ಸ್ಟೆಬಲ್ ರುದ್ರೇಶ್ ನಾಯ್ಕ ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಜ್ಞಾನಭಾರತಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಉಲ್ಲಾಳ ಬಳಿ ನಗರ ಸಶಸ್ತ್ರ ಮೀಸಲು ಪಡೆಯ ಪಶ್ಚಿಮ ಘಟಕದಲ್ಲಿ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರುದ್ರೇಶ್ ನಾಯಕ್, ಫೆ.೮ರಂದು ಬೆಳಗ್ಗೆ ೮ ಗಂಟೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನಿಯಂತ್ರಣ ಕೋಣೆ ಪಕ್ಕದ ಶಸ್ತ್ರಗಾರದ ಭದ್ರತೆಗೆ ಅವರನ್ನು ನಿಯೋಜಿಸಲಾಗಿತ್ತು. ಬಳಿಕ ೧೦ ಗಂಟೆ ಸುಮಾರಿಗೆ ಸುಮಾರು ೧೫-೨೦ ಮಂದಿ ವ್ಯಕ್ತಿಗಳು ಸ್ಥಳಕ್ಕೆ ಬಂದು, ಈ ಶಸ್ತ್ರಗಾರ ಜಾಗ ನಮಗೆ ಸೇರಿದ್ದು, ಈ ಕೂಡಲೇ ನೀವು ಜಾಗ ಖಾಲಿ ಮಾಡಬೇಕು ಎಂದು ಏರುಧ್ವನಿಯಲ್ಲಿ ಕೂಗಾಡಿದ್ದಾರೆ. ಅದನ್ನು ಪ್ರಶ್ನಿಸಿದ ರುದ್ರೇಶ್ ನಾಯ್ಕ, ಈ ವಿಚಾರವನ್ನು ತಮ್ಮ ಬಳಿ ಹೇಳುವುದಕ್ಕಿಂತ, ಹಿರಿಯ ಅಧಿಕಾರಿಗಳ ಜತೆ ಮಾತನಾಡಿ ಎಂದಿದ್ದಾರೆ. ಅದರಿಂದ ಆಕ್ರೋಶಗೊಂಡ ಆರೋಪಿಗಳು, ರುದ್ರೇಶ್ ನಾಯಕ್ ಅವರ ಸಮವಸ್ತ್ರ ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಈ ಸ್ವತ್ತು ಇಂದಿನಿಂದ ನಮಗೆ ಸೇರಿದ್ದು, ಯಾರಾದರೂ ಈ ಸ್ವತ್ತಿನ ವಿಚಾರಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿದ್ದಾರೆ. ಆ ಬಳಿಕ ಶಸ್ತ್ರಗ್ರಾರದಿಂದ ಹೊರಗಡೆ ಬಂದಾಗ ಅಲ್ಲಿಯೂ ೬೦ಕ್ಕೂ ಹೆಚ್ಚು ಮಂದಿ ಗುಂಪು ಸೇರಿದ್ದರು. ಜತೆಗೆ ನಾಲ್ಕು ಜೆಸಿಬಿಗಳು, ಎರಡು ಕ್ಯಾಂಟರ್, ಒಂದು ಲಾರಿ ಮತ್ತು ಒಂದು ನೀರಿನ ಟ್ಯಾಂಕರ್‌ಗಳನ್ನು ಸ್ಥಳಕ್ಕೆ ತರಿಸಿಕೊಂಡಿದ್ದರು. ಹೀಗಾಗಿ ಜಾಗದ ವಿಚಾರವಾಗಿ ತನ್ನ ಮೇಲೆ ಹಲ್ಲೆ ನಡೆಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ರುದ್ರೇಶ್ ನಾಯ್ಕ ದೂರಿನಲ್ಲಿ ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಲ್ಲಾಳ ಉಪನಗರದಲ್ಲಿರುವ ಪಶ್ಚಿಮ ಸಿಎಆರ್ ಆವರಣದಲ್ಲಿರುವ ಶಸ್ತ್ರಗಾರ ಇರುವ ಜಾಗ ವಿವಾದದಲ್ಲಿದೆ. ಈ ಸಂಬಂಧ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇತ್ತೀಚೆಗೆ ಆರೋಪಿಗಳ ಪರವಾಗಿ ಕೋರ್ಟ್ ಆದೇಶ ನೀಡಿತ್ತು ಎಂದು ಹೇಳಲಾಗಿದೆ. ಹೀಗಾಗಿ ಆರೋಪಿಗಳು ಶಸ್ತ್ರಗಾರಕ್ಕೆ ನುಗ್ಗಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.