ಬ್ರೇಕ್ ಫೇಲ್, ನಿಯಂತ್ರಣ ತಪ್ಪಿದ ಸ್ಕೂಲ್​​ ಬಸ್​​ ಸಿಗ್ನಲ್​ನಲ್ಲಿ 8 ವಾಹನಗಳಿಗೆ ಡಿಕ್ಕಿ; ವೈದ್ಯೆ ಸಾವು, 6 ಮಂದಿ ಗಂಭೀರ | Bhopal

Bhopal
Published on

Bhopal: ನಿಯಂತ್ರಣ ತಪ್ಪಿದ ಶಾಲಾ ಬಸ್ ಸಿಗ್ನಲ್​​ನಲ್ಲಿ ನಿಂತಿದ್ದ 8 ವಾಹನಗಳಿಗೆ ಡಿಕ್ಕಿ ಹೊಡೆದ ಭೀಕರ ಅಪಘಾತ ಭೋಪಾಲ್‌ನ ಬಂಗಂಗಾ ಚೌಕದಲ್ಲಿ ಸೋಮವಾರ (ಮೇ.12) ನಡೆದಿದೆ.

ಈ ಅಪಘಾತದಲ್ಲಿ ಯುವ ಮಹಿಳಾ ಇಂಟರ್ನ್ ವೈದ್ಯೆಯೊಬ್ಬರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಟಿಟಿ ನಗರ ಪೊಲೀಸರು ತಿಳಿಸಿದ್ದಾರೆ.

ರೋಶನ್‌ಪುರ ಚೌಕದಿಂದ ಬಂಗಂಗಾ ಚೌಕದ ಕಡೆಗೆ ಬರುತ್ತಿದ್ದ ಬಸ್ ಬ್ರೇಕ್​​ ಫೇಲ್​​ನಿಂದ ನಿಯಂತ್ರಣ ಕಳೆದುಕೊಂಡು ಸಿಗ್ನಲ್‌ನಲ್ಲಿ ನಿಂತಿದ್ದ ಎಂಟು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್​​ ಅಧಿಕಾರಿ ಹೇಳಿದ್ದಾರೆ. ಬಸ್ ಹಿಂದಿನಿಂದ ಬಂದಾಗ ಸಿಗ್ನಲ್‌ನಲ್ಲಿ ಸುಮಾರು 10-12 ವಾಹನಗಳು ಕಾಯುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಡಿಕ್ಕಿ ಹೊಡೆಯುವ ಕೆಲವೇ ಕ್ಷಣಗಳ ಮೊದಲು ಚಾಲಕ "ಬೇರೆಡೆಗೆ ಸರಿಯಿರಿ, ಬೇರೆಡೆಗೆ ಸರಿಯಿರಿ" ಎಂದು ಕೂಗುತ್ತಿರುವುದು ಕೇಳಿಸಿತು. ಅವರ ಎಚ್ಚರಿಕೆಯ ಹೊರತಾಗಿಯೂ, ಸಮಯಕ್ಕೆ ಸರಿಯಾಗಿ ವಾಹನವನ್ನು ನಿಲ್ಲಿಸಲು ಅವನಿಗೆ ಸಾಧ್ಯವಾಗಲಿಲ್ಲ.

ಅಪಘಾತದ ನಂತರ, ಬಸ್ ಚಾಲಕ ವಾಹನವನ್ನು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರಾಣ ಕಳೆದುಕೊಂಡ ಮಹಿಳೆಯನ್ನು ಬಿಎಎಂಎಸ್ ವೈದ್ಯೆ ಆಯೇಷಾ ಖಾನ್ ಎಂದು ಗುರುತಿಸಲಾಗಿದೆ. ಮುಲ್ಲಾ ಕಾಲೋನಿಯ ನಿವಾಸಿಯಾದ ಆಯೇಷಾ ಜೆಪಿ ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದರು. ಅಲ್ಲಿಂದ ಮನೆಗೆ ಹಿಂದಿರುಗುವಾಗ ಅಪಘಾತಕ್ಕೀಡಾದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಡಿಯೋದಲ್ಲಿ ಭಾನ್ಪುರ್ ಕ್ರಾಸಿಂಗ್‌ನಲ್ಲಿ ವಾಹನಗಳು ಸಿಗ್ನಲ್‌ನಲ್ಲಿ ನಿಂತಿದೆ, ಇದ್ದಕ್ಕಿದ್ದಂತೆ ಹಿಂದಿನಿಂದ ಅತಿ ವೇಗದಲ್ಲಿ ಬಂದ ಶಾಲಾ ಬಸ್ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಸ್ಕೂಟರ್‌ನಲ್ಲಿ ಕುಳಿತಿದ್ದ ಮಹಿಳೆಗೆ ಬಸ್ ನೇರವಾಗಿ ಡಿಕ್ಕಿ ಹೊಡೆದಿದ್ದು, ಬಸ್‌ನ ಮುಂಭಾಗದಲ್ಲಿ ಸಿಲುಕಿಕೊಂಡು ಸುಮಾರು 50 ಅಡಿಗಳಷ್ಟು ಎಳೆಯಲ್ಪಟ್ಟರು.

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಪೊಲೀಸರು ಚಾಲಕನಿಗಾಗಿ ಹುಡುಕಾಟ ಆರಂಭಿಸಿದ್ದು, ವಾಹನದ ಯಾಂತ್ರಿಕ ದೋಷಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net