

ಪಿರಿಯಾಪಟ್ಟಣ : ಪಿರಿಯಾಪಟ್ಟಣ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ.ಆರ್.ಸತೀಶ್ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ರಾಮೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಂತರಿಕ ಒಪ್ಪಂದದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರಿಂದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿ.ಆರ್.ಸತೀಶ್ ಕುಮಾರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರಾಮೇಗೌಡರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಸಿಡಿಒ ಹಿತೇಂದ್ರ ಘೋಷಿಸಿದರು.
ನೂತನ ಅಧ್ಯಕ್ಷ ಬಿ.ಆರ್.ಸತೀಶ್ ಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಎಲ್ಲ ನಿರ್ದೇಶಕರು ಮತ್ತು ಷೇರುದಾರರ ಸಹಕಾರದಿಂದ ಸಂಘವನ್ನು ಮತ್ತಷ್ಟು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲಾಗುವುದು ಎಂದು ಭರವಸೆ ನೀಡಿದರು.
ಸಹಕಾರ ಸಂಘದ ನಿರ್ದೇಶಕರಾದ ಎಚ್.ಬಿ.ಸುರೇಶ್, ಎಚ್.ಬಿ.ರಮೇಶ್, ಸೈಯದ್ ಜಮೀಲ್, ಪಿ.ಕೆ.ಕುಮಾರ್, ವಿ.ಆರ್.ವೆಂಕಟೇಶ್, ಎಸ್.ಜಿ.ನಳಿನಿ, ಗೀತಾ, ಶೋಭಾ, ಕರಿನಾಯಕ, ರಾಮಕೃಷ್ಣ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಮಹಾದೇವಯ್ಯ, ಮುಖಂಡರಾದ ಟಿ.ಚಂದ್ರು, ರವಿ, ನಾಗಣ್ಣ, ಸ್ವಾಮಿ, ಗೋಪಾಲ್, ರಾಮಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.