

ಬೆಂಗಳೂರು: ಕರೊನಾ ಕರಿಛಾಯೆ ಮಧ್ಯೆಯೂ 2020ರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಿ, ಸೋಂಕಿತ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶುಕ್ರವಾರ ಫಲಿತಾಂಶ ಬಿಡುಗಡೆ ಮಾಡಿದೆ. ಇಂಜಿನಿಯರಿಂಗ್- 1,53,470, ಕೃಷಿ- 1,27,627, ಪಶುಸಂಗೋಪನೆ- 1,29,666, ಯೋಗ- 1,29,611 ಹಾಗೂ ಬಿ.ಫಾರ್ಮ ಮತ್ತು ಫಾರ್ಮ-ಡಿ ಕೋರ್ಸ್ಗೆ 1,55,552 ಅಭ್ಯರ್ಥಿಗಳು ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.
ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಕೆಇಎ ಕಚೇರಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಿದರು. ಸಿಇಟಿಗೆ ನೋಂದಾಯಿಸಿಕೊಂಡಿದ್ದ 1,94,419 ವಿದ್ಯಾರ್ಥಿಗಳ ಪೈಕಿ 1,75,349 ಮಂದಿ ಹಾಜರಾಗಿದ್ದರು.
ಇಂಜಿನಿಯರಿಂಗ್ನಲ್ಲಿ ಬೆಂಗಳೂರಿನ ಆರ್.ವಿ. ಪಿಯು ಕಾಲೇಜಿನ ವಿದ್ಯಾರ್ಥಿ ಎಂ.ರಕ್ಷಿತ್ ಮೊದಲ ರ್ಯಾಂಕ್ ಗಳಿಸಿದ್ದಾರೆ. ಬೆಂಗಳೂರು ಶ್ರೀ ಚೈತನ್ಯ ಇ-ಟೆಕ್ನೋ ಶಾಲೆ ವಿದ್ಯಾರ್ಥಿ ಆರ್.ಶುಭನ್ ದ್ವಿತೀಯ ಹಾಗೂ ಹುಬ್ಬಳಿಯ ಬೇಸ್ ಪಿಯು ಕಾಲೇಜು ವಿದ್ಯಾರ್ಥಿ ಎಂ.ಶಶಾಂಕ್ ಬಾಲಾಜಿ ತೃತೀಯ ರ್ಯಾಂಕ್ ಗಳಿಸಿದ್ದಾರೆ.
ಬಿ.ಎಸ್ಸಿ ಕೃಷಿಯಲ್ಲಿ ಮಂಗಳೂರು ಎಕ್ಸ್ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಎ.ಬಿ.ವರುಣ್ ಗೌಡ ಮೊದಲ ರ್ಯಾಂಕ್ ಗಳಿಸಿದ್ದು, ಪಶುಸಂಗೋಪನೆಯಲ್ಲಿ 7ನೇ ರ್ಯಾಂಕ್ ಪಡೆದಿದ್ದಾರೆ. ಮೈಸೂರು ಬೇಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಕೆ.ಸಂಜನಾ ದ್ವಿತೀಯ, ಪಶುಸಂಗೋಪನೆಯಲ್ಲಿ 3ನೇ ರ್ಯಾಂಕ್ ಪಡೆದಿದ್ದಾರೆ. ಲೋಕೇಶ್ ಬಿ.ಜೋಗಿ ತೃತೀಯ ರ್ಯಾಂಕ್ಗಳಿಸಿದ್ದಾರೆ.
ನಾನು ರಾಜ್ಯಕ್ಕೆ ಮೊದಲ ರ್ಯಾಂಕ್ ಬರುತ್ತೇನೆಂದು ನಿರೀಕ್ಷೆ ಮಾಡಿರಲಿಲ್ಲ. ನನ್ನ ಅಂದಾಜಿನ ಪ್ರಕಾರ ಟಾಪ್ 50ರ ಬರಬಹುದು ಎಂದುಕೊಂಡಿದ್ದೆ. ಪಿಯುಸಿನಲ್ಲಿ ಶೇ.97 ಅಂಕ ಪಡೆದಿದ್ದೆ. ಕಂಪ್ಯೂಟರ್ ಸೈನ್ಸ್ನಲ್ಲಿ ಇಂಜಿನಿಯರಿಂಗ್ ಮಾಡಬೇಕೆಂಬ ಗುರಿ ಹೊಂದಿದ್ದೇನೆ. |ಎಂ.ರಕ್ಷಿತ್ ಆರ್.ವಿ. ಪಿಯು ಕಾಲೇಜು, ಬೆಂಗಳೂರು
ಬೆಂಗಳೂರು ವಿದ್ಯಾರ್ಥಿಗಳೇ ಮೇಲುಗೈ ಸಿಇಟಿಯಲ್ಲಿ ರಾಜಧಾನಿ ವಿದ್ಯಾರ್ಥಿಗಳೇ ಎಲ್ಲ ವಿಭಾಗಗಳಲ್ಲೂ ಮೇಲುಗೈ ಸಾಧಿಸಿದ್ದಾರೆ. ಇಂಜಿನಿಯರಿಂಗ್ ಟಾಪ್ ಟೆನ್ನಲ್ಲಿ ಐವರು ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದವರಾಗಿದ್ದಾರೆ. ಬಿ.ಎಸ್ಸಿ ಕೃಷಿ, ಪಶು ಸಂಗೋಪನೆ, ಯೋಗ ನ್ಯಾಚುರೋಪಥಿಯಲ್ಲಿ ತಲಾ 3 ವಿದ್ಯಾರ್ಥಿಗಳು ಮತ್ತು ಬಿ.ಫಾರ್ಮ ಮತ್ತು ಫಾರ್ಮ-ಡಿನಲ್ಲಿ ಇಬ್ಬರು ಬೆಂಗಳೂರಿನಲ್ಲಿ ಓದಿದವರಾಗಿದ್ದಾರೆ.
ವೈದ್ಯಕೀಯ ಕೋರ್ಸ್ ಓದುವ ಇಚ್ಛೆ ಇದೆ. ಅಭ್ಯಾಸ ನಡೆಸಿದ ಮಂಗಳೂರು ಎಕ್ಸ್ಪರ್ಟ್ ಪಪೂ ಕಾಲೇಜಿನ ಪರಿಸರ, ಅಧ್ಯಯನಕ್ಕೆ ಪೂರಕವಾಗಿತ್ತು. ಕಾಲೇಜು ಹಾಸ್ಟೆಲ್ ವ್ಯವಸ್ಥೆ ಚೆನ್ನಾಗಿತ್ತು. ವರುಣ್ ಗೌಡ ಎ.ಬಿ., ಎಕ್ಸ್ಪರ್ಟ್ ಪಿಯು ಕಾಲೇಜು, ಮಂಗಳೂರು
ಪಿಯು ಟಾಪರ್, ಸಿಇಟಿಯಲ್ಲಿಲ್ಲ! ಪಿಯು ವಿಜ್ಞಾನ ವಿಷಯದಲ್ಲಿ ಟಾಪ್ ಟೆನ್ ರ್ಯಾಂಕ್ನಲ್ಲಿದ್ದ ವಿದ್ಯಾರ್ಥಿಗಳು ಸಿಇಟಿ ಟಾಪ್ ಟೆನ್ ರ್ಯಾಂಕ್ಗಳಲಿಲ್ಲ್ಲ ದ್ವಿತೀಯ ಪಿಯುನಲ್ಲಿ ಶೇ.50 ಹಾಗೂ ಸಿಇಟಿಯಲ್ಲಿ ಶೇ.50 ಅಂಕ ಸೇರಿಸಿ ರ್ಯಾಂಕ್ ನೀಡುವುದರಿಂದ ಒಂದು ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದು ಮತ್ತೊಂದರಲ್ಲಿ ಚೆನ್ನಾಗಿ ಬರೆದಿಲ್ಲವಾದರೆ ಸಹಜವಾಗಿಯೇ ಫಲಿತಾಂಶ ಕಡಿಮೆಯಾಗಲಿದೆ.
ನನ್ನ ಪಾಲಕರ ಪ್ರೋತ್ಸಾಹ ಮತ್ತು ಉಪನ್ಯಾಸಕರ ಬೋಧನಾ ಕ್ರಮದಿಂದ ನನಗೆ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಯಿತು. ಮುಂದೆ ವೈದ್ಯನಾಗಬೇಕೆಂಬ ಆಸೆ ಇದೆ. |ಪಿ.ಸಾಯಿ ವಿವೇಕ್ ನಾರಾಯಣ ಇ- ಟೆಕ್ನೋ ಸ್ಕೂಲ್ ಬೆಂಗಳೂರು,
ರ್ಯಾಂಕ್ ಗೊಂದಲವಿದ್ದರೆ ಹೀಗೆ ಮಾಡಿ
ಅಭ್ಯರ್ಥಿಗಳು ಫಲಿತಾಂಶವನ್ನು ವೆಬ್ಸೈಟ್ -http://www.cet.kar.nic.in/ ಭೇಟಿ ನೀಡುವ ಮೂಲಕ ಪಡೆದುಕೊಳ್ಳಬಹುದು. ರ್ಯಾಂಕ್ ಪಟ್ಟಿಯಲ್ಲಿ ದೋಷ ಇದ್ದಲ್ಲಿ ಇ-ಮೇಲ್ www.keauthority-ka@nic.in ಮೂಲಕ ಪ್ರಾಧಿಕಾರಕ್ಕೆ ಗಮನಕ್ಕೆ ತರಬಹುದು. ರ್ಯಾಂಕ್ ತಡೆಹಿಡಿಯಲ್ಪಟ್ಟಿರುವ ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಯಥಾ ಪ್ರತಿಯನ್ನು ಕೆಇಎ ಇ- ಮೇಲ್ಗೆ ಕಳುಹಿಸಬಹುದು.
ಉತ್ತಮ ಸಾಧನೆ ತೋರಿದ ಆಳ್ವಾಸ್ ವಿದ್ಯಾರ್ಥಿಗಳು
ಮೂಡುಬಿದಿರೆ: ಸಿಇಟಿಯ ಆರು ವಿಭಾಗಗಳ ಪೈಕಿ ಐದರ ಟಾಪ್ 10ನಲ್ಲಿ ಆಳ್ವಾಸ್ ಪಿಯು ಕಾಲೇಜು ಐದು ರ್ಯಾಂಕ್ ಪಡೆದು ಉತ್ತಮ ಸಾಧನೆ ಮಾಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.
ಕಾಲೇಜಿನ ವಿದ್ಯಾರ್ಥಿ ಅರ್ನವ್ ಅಯ್ಯಪ್ಪ ಮೆಡಿಕಲ್ ವಿಭಾಗದ ಪ್ರಕೃತಿ ಮತ್ತು ಯೋಗ ವಿಜ್ಞಾನ ವಿಭಾಗ (ಬಿಎನ್ವೈಎಸ್)ದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಾಧಕ ಅರ್ನವ್ರನ್ನು ಡಾ.ಆಳ್ವ ಅಭಿನಂದಿಸಿದರು.
ಸಿಇಟಿ ಅಂಕಗಳ ಲೆಕ್ಕಾಚಾರದಲ್ಲಿ 160ರಿಂದ 170ರೊಳಗೆ 6 ಮಂದಿ, 150ರಿಂದ 160ರೊಳಗೆ 14 ಸಹಿತ ಒಟ್ಟು 21 ಮಂದಿ 150ಕ್ಕಿಂತ ಹೆಚ್ಚು ಅಂಕ ಗಳಿಸಿರುವುದು ಅಮೋಘ ಸಾಧನೆ. 654 ವಿದ್ಯಾರ್ಥಿಗಳು 100 ಅಂಕಗಳಿಗೂ ಮೇಲ್ಪಟ್ಟ ಅಂಕ ಪಡೆದಿದ್ದಾರೆ. ಅರ್ನವ್ ಅಯ್ಯಪ್ಪ-174, ವರುಣ್ ತೇಜ್-164, ಪಿ.ಎಸ್. ರವೀಂದ್ರ-164, ಅಭಿಷೇಕ್ ಸಂಗಪ್ಪ -164, ಅನಘಾ ತೆನಗಿ-163 ಉತ್ತಮ ಅಂಕ ಗಳಿಸಿದ್ದಾರೆ.
ಕಾಲೇಜಿನ ಓದಿನ ಜತೆಗೆ ದಿನಕ್ಕೆ 3 ಗಂಟೆ ಹೆಚ್ಚುವರಿಯಾಗಿ ಸಿಇಟಿ ಓದಿಗೆ ಮೀಸಲಿಡುತ್ತಿದ್ದೆ. ಮುಂದೆ ನೀಟ್ನಲ್ಲೂ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದು, ಭವಿಷ್ಯದಲ್ಲಿ ವೈದ್ಯನಾಗಬೇಕೆಂದಿದ್ದೇನೆ. ಅರ್ನವ್ ಅಯ್ಯಪ್ಪ ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ ಟಾಪ್ ಅಂಕಗಳನ್ನು ಪಡೆಯುವುದು ಮಾತ್ರವಲ್ಲ, ನಮ್ಮ ಸಂಸ್ಥೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಪಾಸಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸಿಇಟಿಯಲ್ಲಿ ಆಳ್ವಾಸ್ ಸಾಧಕರ ದೊಡ್ಡ ಬ್ಯಾಚ್ ಕೊಡುಗೆಯನ್ನು ನೀಡುವ ಪರಂಪರೆಯಲ್ಲಿ ಈ ಬಾರಿಯದ್ದು ಅಮೋಘ ಸಾಧನೆ. | ಡಾ.ಎಂ ಮೋಹನ ಆಳ್ವ ಅಧ್ಯಕ್ಷ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರ
ಆನ್ಲೈನ್ನಲ್ಲಿ ದಾಖಲಾತಿ ಪರಿಶೀಲನ
ಹಲವು ವರ್ಷಗಳಿಂದ ಆಫ್ಲೈನ್ನಲ್ಲಿ ನಡೆಸುತ್ತಿದ್ದ ದಾಖಲಾತಿ ಪರಿಶೀಲನೆಯನ್ನು ಈ ವರ್ಷದಿಂದ ಆನ್ಲೈನ್ನಲ್ಲಿ ನಡೆಸಲು ಪ್ರಾಧಿಕಾರ ನಿರ್ಧರಿಸಿದೆ. ಕರೊನಾ ಪರಿಸ್ಥಿತಿಯಲ್ಲಿ ಅಭ್ಯರ್ಥಿಗಳು ಮನೆಯಲ್ಲೇ ಕುಳಿತು ದಾಖಲೆಗಳನ್ನು ಕೆಇಎ ನೀಡಲಿರುವ ಲಿಂಕ್ಗೆ ಅಪ್ಲೋಡ್ ಮಾಡಿದರೆ ಸಾಕು. ಅಭ್ಯರ್ಥಿಯು ಬೇರೆ ಬೇರೆ ಡಿಸಿಪ್ಲಿನ್ಗಳಲ್ಲಿ ಅಂದರೆ ಇಂಜಿನಿಯರಿಂಗ್ ಅಥವಾ ಕೃಷಿ ವಿವಿಯ ಕೋರ್ಸ್ಗಳಲ್ಲಿ ಬೇರೆ ಬೇರೆ ರ್ಯಾಂಕ್ ಪಡೆದಿದ್ದರೆ ಅಂತಹ ಅಭ್ಯರ್ಥಿಯು ಯಾವ ವಿಷಯದಲ್ಲಿ ಅತ್ಯುನ್ನತ ರ್ಯಾಂಕ್ ಗಳಿಸಿರುತ್ತಾರೋ ಅದಕ್ಕನುಸಾರವಾಗಿ ಗೊತ್ತುಪಡಿಸಿರುವ ದಿನಾಂಕದಂದು ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಅಪ್ಲೋಡ್ ಮಾಡಬೇಕಿದೆ.
ಅಕ್ಟೋಬರ್ನಲ್ಲಿ ಕೌನ್ಸೆಲಿಂಗ್: ಜೆಇಇ, ನೀಟ್ ಮೊದಲಾದ ಪರೀಕ್ಷೆಗಳ ವೇಳಾಪಟ್ಟಿ ನೋಡಿ ಸಿಇಟಿ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಲು ಇಲಾಖೆ ನಿರ್ಧರಿಸಿದೆ. ಬಹುತೇಕ ಅಕ್ಟೋಬರ್ನಲ್ಲಿ ಕೌನ್ಸೆಲಿಂಗ್ ನಡೆಸುವುದು ಖಚಿತವಾಗಿದೆ.