ಪ್ರೇಯಸಿಯ ಫೋನ್ ರಿಸೀವ್ ಮಾಡಿದ ಗೆಳೆಯನ ಕೊಲೆ

Oplus_16908288
ಕೊಲೆಯಾದ ಕಿರಣ್
Published on

ನಂಜನಗೂಡು: ಗೆಳತಿಯ ಫೋನ್ ರಿಸೀವ್ ಮಾಡಿದ ಗೆಳೆಯನನ್ನು ಭೀಕರವಾಗಿ ಹತ್ಯೆ ಮಾಡಿರುವುದು ನಂಜನಗೂಡು ತಾಲೂಕಿನ ಕೆಂಪಿಸಿದ್ದನಹುಂಡಿ ಗ್ರಾಮದಲ್ಲಿ ತಡವಾಗಿ ಬದುಕಿಗೆ ಬಂದಿದೆ.

ಗ್ರಾಮದ ಕಿರಣ್ ಕೊಲೆಯಾದವನು. ಗೆಳತಿ ಮಾಡಿದ ಫೋನ್ ಸ್ವೀಕರಿಸಿದ್ದರಿಂದ ಕುಪಿತನಾದ ಆರೋಪಿ ವಸಂತ್‌ಕುಮಾರ್ ಸ್ನೇಹಿತರೊಂದಿಗೆ ಸೇರಿ ಕಿರಣ್ ಬೈಕ್‌ಗೆ ಗುದ್ದಿ ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡು ಗ್ರಾಮಾಂತರ ಪೊಲೀಸರು ವಸಂತ್‌ಕುಮಾರ್ ಮಧುಸೂದನ್, ಚಂದ್ರು, ರವಿಚಂದ್ರ, ಸಿದ್ದರಾಜು ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಜು.15 ರಂದು ಸ್ನೇಹಿತ ರವಿಚಂದ್ರನ್ ಹುಟ್ಟುಹಬ್ಬ ಇತ್ತು. ಕಿರಣ್ ಬರ್ತಡೇ ಪಾರ್ಟಿ ಆಚರಿಸಲು ಐವರು ಮಂದಿ ಸ್ನೇಹಿತರ ಜತೆಗೆ ಹೊರಟಿದ್ದ. ಹೆಜ್ಜಿಗೆ ಸೇತುವೆಯ ತೋಪಿನ ಬಳಿ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದರು. ವಸಂತ್ ಮೂತ್ರ ವಿಸರ್ಜನೆ ಮಾಡಲು ಸ್ವಲ್ಪ ದೂರ ಹೋಗಿದ್ದಾನೆ. ಈ ವೇಳೆ ವಸಂತ್ ಫೋನ್ ರಿಂಗ್ ಆಗಿದ್ದರಿಂದ ಕಿರಣ್ ರಿಸೀವ್ ಮಾಡಿದ್ದಾನೆ. ಫೋನ್ ಯಾಕೆ ರಿಸೀವ್ ಮಾಡಿದ್ದೀಯ ಎಂದು ಪ್ರಶ್ನಿಸಿದ್ದಾನೆ. ಅಷ್ಟಕ್ಕೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ವಸಂತ್ ಜೊತೆ ಸೇರಿದ ನಾಲ್ವರು ಸ್ನೇಹಿತರು ಕಿರಣ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ತಪ್ಪಿಸಿಕೊಂಡು ಹೋಗುತ್ತಿದ್ದ ಕಿರಣ್‌ನನ್ನು ಬೈಕ್‌ನಿಂದ ಗುದ್ದಿ ಕೆಳಗೆ ಬೀಳಿಸಿ ಹಲ್ಲೆ ಮಾಡಿದ್ದಾರೆ. ವಿಷಯ ತಿಳಿದ ಸಹೋದರ ಕಿರಣ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕಿರಣ್ ಮೃತಪಟ್ಟಿದ್ದಾನೆ.

ಯುವತಿಯ ಫೋನ್ ರಿಸೀವ್ ಮಾಡಿದ ಕಾರಣಕ್ಕೆ ಸ್ನೇಹಿತ ಎನ್ನುವುದನ್ನು ಮರೆತು ಬರ್ತಡೇ ಪಾರ್ಟಿ ದಿನವೇ ಗೆಳೆಯನನ್ನ ಕೊಂದಿದ್ದಾರೆ. ಇಬ್ಬರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತರ ತಂದೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net