

ಮುಂಬೈ: ವಾಷಿಂಗ್ ಪೌಡರ್ಗೆ ನೀಡಿರುವ ಜಾಹಿರಾತಿನಲ್ಲಿ ರಾಜನ ಪಾತ್ರ ನಿರ್ವಹಿಸುವ ಮೂಲಕ ಬಾಲಿವುಡ್ ನಟ ಅಕ್ಷಯ್ ಕುಮಾರ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಜಾಹಿರಾತಿನಲ್ಲಿ ಮರಾಠ ಹೋರಾಟಗಾರ ಛತ್ರಪತಿ ಶಿವಾಜಿ ಮಹಾರಾಜ್ ಹೆಸರಿಗೆ ಕಳಂಕ ತರಲಾಗಿದೆ ಎಂದು ಆರೋಪಿಸಿ ಅಕ್ಷಯ್ ಕುಮಾರ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
ನಿರ್ಮಾ ವಾಷಿಂಗ್ ಪೌಡರ್ಗೆ ನೀಡಿದ ಜಾಹಿರಾತಿನಲ್ಲಿ ಅಕ್ಷಯ್, ಮಹಾರಾಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿರುವಂತೆ ರಾಜ ಅಕ್ಷಯ್, ತನ್ನ ಸೇನೆಯೊಂದಿಗೆ ಅರಮನೆ ಪ್ರವೇಶಿಸುತ್ತಾರೆ. ಈ ವೇಳೆ ಅರಮನೆಯಲ್ಲಿನ ಮಹಿಳೆ ರಾಜನಿಗೆ ಆರತಿ ಮಾಡಿ ಸೈನಿಕರು ಬಟ್ಟೆಗಳಲ್ಲಿನ ಕೊಳೆಯ ಬಗ್ಗೆ ಹೇಳುತ್ತಾರೆ. ಅದಕ್ಕೆ ಪ್ರತಿಯಾಗಿ ರಾಜನಿಗೆ ಶತ್ರುಗಳನ್ನು ಹೊಡೆಯಲು ಗೊತ್ತಿರುವ ಹಾಗೆಯೇ ಅವರ ಬಟ್ಟೆಯನ್ನು ತೊಳೆಯಲು ತಿಳಿದಿದೆ ಎಂದು ಹೇಳಿ ಪ್ರಾಡಕ್ಟ್ ಬಳಸಿ ಬಟ್ಟೆಗಳನ್ನು ತೊಳೆಯುತ್ತಾರೆ.
ಯಾವಾಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೇ ತಡ ನೆಟ್ಟಿಗರು, ಅಕ್ಷಯ್ ವಿರುದ್ಧ ಹಾಗೂ ಜಾಹಿರಾತು ವಿರುದ್ಧ ಕಿಡಿಕಾರುತ್ತಿದ್ದಾರೆ. #BoycottNirma ಎಂಬ ಹ್ಯಾಶ್ಟ್ಯಾಗ್ ಅನ್ನು ಟ್ವಿಟರ್ನಲ್ಲಿ ಟ್ರೆಂಡ್ ಮಾಡಲಾಗಿದೆ. ಶಿವಾಜಿ ಮಹಾರಾಜರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)