

ಅಮರಾವತಿ: ಫುಡ್ ಡೆಲಿವರಿ ಬಾಯ್ ಸೋಗಿನಲ್ಲಿ ಯುವಕನೊಬ್ಬ ಗಾಂಜಾ ಹಾಗೂ ಡ್ರಗ್ಸ್ ಮಾರಾಟ ಮಾಡುತ್ತಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಆಂಧ್ರಾದ ರಾಜಮಹೇಂದ್ರವರದ ಶೇಖ್ ಬಿಲಾಲ್ ಐಟಿ ಉದ್ಯೋಗಿಗಳನ್ನು ಟಾರ್ಗೇಟ್ ಮಾಡಿಕೊಂಡು ಮಾದಕ ದ್ರವ್ಯ, ಗಾಂಜಾ ಮಾರಾಟ ಮಾಡುತ್ತಿದ್ದ. ಪೊಲೀಸರು ಇವನ ಚಲನವಲನದ ಮೇಲೆ ನಿಗಾ ಇಟ್ಟು ಬಂಧಿಸಿದ್ದಾರೆ.
ಬಿಲಾಲ್ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಗಾಂಜಾ ಚಟಕ್ಕೆ ಬಿದ್ದಿದ್ದ. ಹೈದರಾಬಾದ್ ನ ಮಾದಾಪುರದ ಇಜ್ಜತ್ ನಗರದ ವಾಸಿಯಾದ ಇವನು ಗಾಂಜಾ ಮಾರಾಟ ಮಾಡುತ್ತಿದ್ದ. ಫುಡ್ ಡೆಲಿವರಿ ಬಾಯ್ ನೆಪದಲ್ಲಿ ಐಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದ.
ಈ ಹಿಂದೆ 2022ರಲ್ಲಿ ಜುಬಿಲಿ ಹಿಲ್ಸ್ ಪೊಲೀಸರು ಬಿಲಾಲ್‌ನನ್ನು ಡ್ರಗ್ಸ್ ಮಾರಾಟದ ಹಿನ್ನೆಲೆಯಲ್ಲಿ ಬಂಧಿಸಿದ್ದರು. ಆದರೆ ಜೈಲಿನಿಂದ ಹೊರಬಂದ ಬಳಿಕ ಮತ್ತೆ ಡ್ರಗ್ಸ್ ಮಾರಾಟ ಆರಂಭಿಸಿದ್ದ. ಈತನ ಚಲನವಲನದ ಮೇಲೆ ತೀವ್ರ ನಿಗಾ ಇಟ್ಟಿದ್ದ ಪೊಲೀಸರು ದಾಳಿ ನಡೆಸಿ ಕೋಣೆಯಲ್ಲಿ ಬಚ್ಚಿಟ್ಟಿದ್ದ 22.5 ಕೆಜಿ ಗಾಂಜಾ, 15 ಗ್ರಾಂ ನಿಷೇಧಿತ ಎಂಡಿಎಂಎ ಡ್ರಗ್ಸ್, 76 ನೈಟ್ರೋಜನ್ ಮಾತ್ರೆಗಳು ಮತ್ತು 491 ಗ್ರಾಂ ಹ್ಯಾಶ್ ಆಯಿಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಸಾಧಿಸುತ್ತಿದ್ದ ಬಿಲಾಲ್ ವಿವಿಧ ಸಂಸ್ಥೆಗಳ 50 ಉದ್ಯೋಗಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ. ಇವನು ಜೈಲಿನಲ್ಲಿದ್ದಾಗಲೂ ತನ್ನ ಹಿಂಬಾಲಕರ ಮೂಲಕ ಐಟಿ ಉದ್ಯೋಗಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.