

ಲಖನೌ: ಇತ್ತೀಚೆಗೆ ಕೇವಲ ಹೆಣ್ಣು ಮಕ್ಕಳು ಮಾತ್ರವಲ್ಲ, ಪುಟ್ಟ ಪುಟ್ಟ ಗಂಡು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯವಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ನೆರೆ ಮನೆಯಲಿದ್ದ ಬಾಲಕನನ್ನು ಪ್ರೀತಿಯಿಂದ ಅಣ್ಣಾ ಎಂದು ಕರೆಯುತ್ತಿದ್ದ 12 ವರ್ಷದ ಬಾಲಕನ ಮೇಲೇ ಲೈಂಗಿಕ ದೌರ್ಜನ್ಯವಾಗಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ಆತ 12 ವರ್ಷದ ಬಾಲಕ. ಉತ್ತರ ಪ್ರದೇಶದ ನೋಯ್ಡಾದಲ್ಲಿ ತಂದೆ ತಾಯಿಯೊಂದಿಗೆ ಬದುಕುತ್ತಿದ್ದ. ಆತನ ಪಕ್ಕದ ಮನೆಯಲ್ಲಿ 16 ವರ್ಷದ ಬಾಲಕನಿದ್ದಾನೆ. ಇಬ್ಬರೂ ಒಂದೇ ಶಾಲೆಗೆ ಹೋಗುತ್ತಾರೆ. ಒಂದೇ ಬಸ್ಸಿನಲ್ಲಿ ಓಡಾಡುವ ಅವರ ಮಧ್ಯೆ ಸ್ನೇಹ ಬೆಳೆದಿದೆ. ಅದೇ ಸ್ನೇಹವನ್ನು ದುರುಪಯೋಗ ಮಾಡಿಕೊಂಡ 16 ವರ್ಷದ ಬಾಲಕ, ನೆರೆ ಮನೆಯ ಹುಡುಗನನ್ನು ಆಗಾಗ ಮನೆಗೆ ಕರೆಸಿಕೊಂದಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆತನ ಬಟ್ಟೆ ಬಿಚ್ಚಿ, ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಈ ರೀತಿಯ ಘಟನೆ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಲೇ ಬಂದಿದೆ. ಇತ್ತೀಚಿಗೆ ತನ್ನ ಮೇಲೆ ದೌರ್ಜನ್ಯವಾಗುತ್ತಿರುವುದಾಗಿ ಬಾಲಕ ಸಹಾಯವಾಣಿಯೊಂದಕ್ಕೆ ಕರೆ ಮಾಡಿ ತಿಳಿಸಿದ್ದು, ಅದರಿಂದ ವಿಚಾರ ಹೊರಬಿದ್ದಿದೆ. ಬಾಲಕನ ಪೋಷಕರು ಪೊಲೀಸರ ಮೊರೆ ಹೋಗಿದ್ದಾರೆ.
ಈ ಹಿಂದೆ 2018ರಲ್ಲಿ ಒಮ್ಮೆ ಬಾಲಕ ತನ್ನ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಪೋಷಕರಿಗೆ ತಿಳಿಸಿದ್ದನಂತೆ. ಏನೋ ಹುಡುಗಾಟ ಎಂದು ಭಾವಿಸಿದ ಅವರು, ಮಕ್ಕಳಿಬ್ಬರಿಗೂ ಬುದ್ಧಿ ಹೇಳಿದ್ದಾರೆ. ಅಕ್ಕ ಪಕ್ಕದಲ್ಲಿದ್ದವರು, ತಮ್ಮ ಮನೆ ಬದಲಿಸಿ, ಬೇರೆಡೆ ಮನೆ ಮಾಡಿದ್ದಾರೆ. ಆದರೂ ಬಾಲಕನ ಮೇಲೆ ನಡೆಯುತ್ತಿದ್ದ ಅನ್ಯಾಯ ಕಡಿಮೆಯಾಗಿಲ್ಲ. ಆ ಕಾರಣ ಪೋಷಕರು ಪೊಲೀಸ್ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)