

ಮ್ಯಾಸ್ಟ್ರಿಚ್, ನೆದರ್ಲ್ಯಾಂಡ್ಸ್: ರೈಲು, ಬಸ್ಸಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದನ್ನು ಕೇಳಿದ್ದೀವಿ. ಆದರೆ ಟಿಕೆಟ್ ಇಲ್ಲದೆ ವಿಮಾನ ಪ್ರಯಾಣ ಮಾಡಬಹುದೆ ? ಅಪರೂಪದ ಪ್ರಸಂಗವೊಂದರಲ್ಲಿ ಹದಿಹರೆಯದ ಬಾಲಕನೊಬ್ಬ ಹೀಗೆ ಟಿಕೆಟ್ ಇಲ್ಲದೆ ವಿಮಾನಯಾನ ಮಾಡಿದ್ದಾನೆ! ಸೋಜಿಗದ ವಿಷಯವೆಂದರೆ... ಈ ಪ್ರಯಾಣಿಕನಿಗೆ ಸೀಟಿನ ಅವಶ್ಯಕತೆ ಬಿದ್ದಿಲ್ಲ, ಏಕೆಂದರೆ ಅವನು ವಿಮಾನದ ಹೊರಗಿನ ಲ್ಯಾಂಡಿಂಗ್ ಗೇರ್ ಹಿಡಿದು ಪಯಣಿಸಿದ್ದಾನೆ!
ಹೌದು! ನೆದರ್ಲ್ಯಾಂಡಿನ ಮ್ಯಾಸ್ಟ್ರಿಚ್ ವಿಮಾನ ನಿಲ್ದಾಣದಲ್ಲಿ ಫೆಬ್ರವರಿ 4 ರಂದು ಟರ್ಕಿಶ್ ಏರ್ಲೈನ್ಸ್ ಒಂದರ ಕಾರ್ಗೋ ಪ್ಲೇನು ಬಂದಿಳಿಯಿತು. ಆ ವಿಮಾನದ ಲ್ಯಾಂಡಿಂಗ್ ಗೇರ್ಗೆ 16 ವರ್ಷದ ಬಾಲಕನೊಬ್ಬ ಜೋತುಹಾಕಿಕೊಂಡಿದ್ದನ್ನು ವಿಮಾನಾಧಿಕಾರಿಗಳು ನೋಡಿದರು. ವಿಚಾರಿಸಿದಾಗ ಆತ ಲಂಡನ್ನ ಸ್ಟಾನ್ಸ್ಟೆಡ್ ವಿಮಾನ ನಿಲ್ದಾಣದಿಂದ ಇಲ್ಲಿಗೆ ವಿಮಾನದ ಹೊರಗೆಯೇ ಇದ್ದು ಪ್ರಯಾಣಿಸಿರುವುದು ತಿಳಿದುಬಂತು. ದೇಹದ ತಾಪಮಾನವು ಬಹಳ ಕಡಿಮೆ ಆಗಿದ್ದ (ಹೈಪೋಥರ್ಮಿಯಾ) ಆತನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಆರಂಭಿಸಲಾಯಿತು ಎನ್ನಲಾಗಿದೆ.
ಈ ವಿಮಾನವು 19,000 ಅಡಿಗಳ ಎತ್ತರದಲ್ಲಿ ಅತಿತಣ್ಣನೆಯ ತಾಪಮಾನದಲ್ಲಿ ಒಂದು ಗಂಟೆಯ ಕಾಲ ಹಾರಿ ಬಂದಿದ್ದು, ವಿಮಾನದ ಹೊರಗಡೆ ಇದ್ದೂ ಬದುಕುಳಿದಿರುವುದು ಏರ್ಪೋರ್ಟ್ ಅಧಿಕಾರಿಗಳಿಗೆ ಅಚ್ಚರಿ ಉಂಟುಮಾಡಿದೆ ಎಂದು ಡೈಲಿಮೇಲ್ ವರದಿ ಮಾಡಿದೆ. ಇದು ಹ್ಯೂಮನ್ ಟ್ರಾಫಿಕ್ಕಿಂಗ್ ಪ್ರಕರಣವೇ ಎಂದು ನೆದರ್ಲ್ಯಾಂಡಿನ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)