

ಉತ್ತರಪ್ರದೇಶ: ಕಳೆದ ಒಂದು ತಿಂಗಳ ಹಿಂದೆ ನಾಯಿ ಕಡಿತಕ್ಕೆ ತುತ್ತಾದ 14 ವರ್ಷದ ಬಾಲಕನೊಬ್ಬ ರೇಬೀಸ್ ಕಾಯಿಲೆಯಿಂದ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ವರದಿಯಾಗಿದೆ.
ಮೃತ ಬಾಲಕನನ್ನು ಸಬೇಜ್ ಎಂದು ಗುರುತಿಸಲಾಗಿದೆ. ಸಬೆಜ್ ಮನೆಯ ಸಮೀಪದಲ್ಲೇ ವಾಸವಿದ್ದ ಮಹಿಳೆಯೊಬ್ಬರು ಬೀದಿನಾಯಿಗಳಿಗೆ ದಿನನಿತ್ಯ ಆಹಾರ ನೀಡುತ್ತಿದ್ದರು. ಈ ಕಾರಣದಿಂದ ರಸ್ತೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ 5-6 ನಾಯಿಗಳ ಪೈಕಿ ಒಂದು ಶ್ವಾನ ಬಾಲಕನಿಗೆ ಕಚ್ಚಿದೆ. ಈ ಹಿಂದೆಯೂ ನಾಯಿಗಳು ಹಲವರ ಮೇಲೆ ದಾಳಿ ನಡೆಸಿವೆ ಎನ್ನಲಾಗಿದೆ.
ನಾಯಿ ಕಡಿತಕ್ಕೆ ತುತ್ತಾದ ಸಬೇಜ್, ಈ ವಿಷಯವನ್ನು ತನ್ನ ಪೋಷಕರಿಗೆ ತಿಳಿಸಲಿಲ್ಲ. ಘಟನೆ ನಡೆದು ನಾಲ್ಕು ದಿನಗಳ ನಂತರ ರೇಬೀಸ್ ರೋಗಲಕ್ಷಣಗಳು ಬಾಲಕನಲ್ಲಿ ಕಾಣಿಸಿಕೊಳ್ಳಲು ಪ್ರಾರಂಬಿಸಿತು ಎಂದು ಬಾಲಕನ ಅಜ್ಜ ಮತ್ಲುಬ್ ಅಹ್ಮದ್ ಹೇಳಿದ್ದಾರೆ. ಕುಟುಂಬದವರು ನೀಡಿದ ಮಾಹಿತಿ ಪ್ರಕಾರ, ಸಬೇಜ್ ವಿಪರೀತ ಭಯದಿಂದ ಬದುಕಲು ಮತ್ತು ಕತ್ತಲೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದ. ಹೆದರಿ ಜೋರಾಗಿ ಗಲಾಟೆ ಮಾಡುತ್ತಿದ್ದ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಯುವ ಜನತೆ ಸಹಕಾರದಲ್ಲಿ ಕ್ಷೇತ್ರ ಒಲವು ಬೆಳೆಸಿಕೊಳ್ಳಬೇಕು
ಈ ಬೆಳವಣಿಗೆಯ ಬೆನ್ನಲ್ಲೇ ಕುಟುಂಬಸ್ಥರು ಬಾಲಕನನ್ನು ಗಾಜಿಯಾಬಾದ್, ಮೀರತ್ ಮತ್ತು ದೆಹಲಿಯ ಏಮ್ಸ್ನ ಹಲವಾರು ಆಸ್ಪತ್ರೆಗಳಿಗೆ ಕರೆದೊಯ್ಯ್ದಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಸಬೇಜ್ ಮೃತಪಟ್ಟಿದ್ದಾನೆ. ಬಾಲಕನ ಕುಟುಂಬವು ಘಟನೆಯ ಬಗ್ಗೆ ಕ್ರಮಕ್ಕೆ ಒತ್ತಾಯಿಸಿದ್ದು, ಇಂತಹ ಘಟನೆಗಳು ನಡೆಯದಂತೆ ಆಡಳಿತ ಮತ್ತು ಅಧಿಕಾರಿಗಳು ಖಚಿತಪಡಿಸಿಕೊಳ್ಳುವಂತೆ ಹೇಳಿದ್ದಾರೆ,(ಏಜೆನ್ಸೀಸ್).