ಬೆಂಗಳೂರು: ವೈದ್ಯರ ಎಡವಟ್ಟಿನಿಂದಾಗಿ ಹತ್ತು ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಕೋಣನಕುಂಟೆ ಸಮೀಪದ ಜಂಬು ಸವಾರಿ ದಿಣ್ಣೆ ನಿವಾಸಿ ಪ್ರೀತಮ್ ನಾಯ್ಕ (೧೦) ಎಂಬ ಬಾಲಕ ವೈದ್ಯರ ಎಡವಟ್ಟಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಪಾಲಕರು ಆರೋಪಿಸಿದ್ದಾರೆ. ಈ ಘಟನೆ ಸಂಬಂಧ ಅಸಹಜಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕನೆ ತರಗತಿ ಓದುತ್ತಿದ್ದ ಬಾಲಕ ಪ್ರೀತಮ್ಗೆ ಅ.೬ರಂದು ಜ್ವರ ಕಾಣಿಸಿಕೊಂಡಿತ್ತು. ಜ್ವರ ಹೆಚ್ಚಾದ ಹಿನ್ನೆಲೆ ಕುಟುಂಬಸ್ಥರು ತಮ್ಮ ಮನೆ ಹತ್ತಿರದ ರಾಜನಂದಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ಈ ವೇಳೆ ಅಲ್ಲಿನ ವೈದ್ಯರು ಜ್ವರ ಕಡಿಮೆ ಆಗಲೆಂದು ಒಂದು ಇಂಜೆಕ್ಷನ್ ನೀಡಿ ಬಾಲಕನನ್ನು ಮನೆಗೆ ಕಳಿಸಿದ್ದಾರೆ. ವಾಪಸ್ಸು ಮನೆಗೆ ಬಂದ ಬಳಿಕ ಮರುದಿನ ಇಂಜೆಕ್ಷನ್ ನೀಡಿದ್ದ ಜಾಗದಲ್ಲಿ ನೋವು, ಊತ ಕಂಡು ಬಂದಿದೆ. ಆಗ ಗಾಬರಿಗೊಂಡ ಪಾಲಕರು ಮತ್ತೆ ತಕ್ಷಣ ಮಗನನ್ನು ರಾಜನಂದಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ವೈದ್ಯ ಊತ ನೋಡಿ ಕೆಲ ಟಾನಿಕ್ ಮತ್ತು ಮೆಡಿಸಿನ್ ನೀಡಿ ಕಳಿಸಿದ್ದಾರೆ. ನೋವು ಕಡಿಮೆ ಆಗದೆ ಮತ್ತೆ ಕಾಲು ಊತ ಹೆಚ್ಚಾಗಿದೆ. ಆಗ ಇಲ್ಲಿ ಏನು ಮಾಡಲು ಆಗಲ್ಲಾ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ನಂತರ ಅ.೭ ರಂದು ರಾಜಾಜಿನಗರ ಇಎಸ್‌ಐ ಆಸ್ಪತ್ರೆಗೆ ಮಗನನ್ನು ಪಾಲಕರು ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯೂ ಕಾಲಿನ ಊತ ಕಡಿಮೆಯಾಗದ ಕಾರಣ ಅ.೯ ರಂದು ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಬಾಲಕನ ಪಾಲಕರು ದೂರು ನೀಡಿದ್ದು, ರಾಜನಂದಿನಿ ಆಸ್ಪತ್ರೆ ವೈದ್ಯರ ವಿರುದ್ದ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಾಲಕನನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.