

ಬೆಂಗಳೂರು: ರಸ್ತೆ ಬದಿ ಶೌಚಕ್ಕೆ ಕುಳಿತ್ತಿದ್ದ ಆರು ವರ್ಷದ ಬಾಲಕನ ಮೇಲೆಯೇ ಸರಕು ಸಾಗಣೆ ವಾಹನದ ಚಕ್ರ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ವಿನೋಭಾನಗರದ ಕೆಎಚ್‌ಬಿ ಕಾಲೋನಿಯ ಕೊಳಗೇರಿಯ ಅಶ್ವಂತ್(೬) ಮೃತ ದುರ್ದೈವಿ. ಸಿದ್ದಯ್ಯ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ೧೧.೧೫ರ ಸುಮಾರಿಗೆ ಈ ಘಟನೆ ನಡೆದಿದೆ.
ಶಶಿಕುಮಾರ್ ಎಂಬುವವರ ಪುತ್ರ ಅಶ್ವಂತ್ ಬೆಳಗ್ಗೆ ಸಿದ್ದಯ್ಯ ರಸ್ತೆಯ ಬದಿ ಶೌಚಕ್ಕೆ ಕುಳಿತ್ತಿದ್ದ. ಈತನ ಹಿಂಭಾಗವೇ ಸರಕು ಸಾಗಣೆ ವಾಹನ ನಿಲುಗಡೆ ಮಾಡಲಾಗಿತ್ತು. ಈ ವೇಳೆ ಚಾಲಕ ವಾಹನದ ಹಿಂಭಾಗ ಬಾಲಕ ಶೌಚಕ್ಕೆ ಕುಳಿತಿರುವುದನ್ನು ಗಮನಿಸದೆ ವಾಹನವನ್ನು ಹಿಮ್ಮುಖವಾಗಿ ಚಲಾಯಿಸಿದ್ದಾನೆ. ಈ ವೇಳೆ ಬಾಲಕನ ಮೇಲೆಯೇ ವಾಹನದ ಹಿಂಬದಿ ಚಕ್ರ ಹರಿದ ಪರಿಣಾಮ ಆ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸರಕು ಸಾಗಣೆ ವಾಹನ ಚಾಲಕನ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆ ವಾಹನವನ್ನು ಜಪ್ತಿ ಮಾಡಿದ್ದು, ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.