ಲಿಫ್ಟ್ ಗುಂಡಿಗೆ ಬಿದ್ದು ಬಾಲಕ ಸಾವು

death
Published on

ಬೆಂಗಳೂರು: ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಗುಂಡಿಗೆ ಬಾಲಕ ಬಿದ್ದು ಅಸುನೀಗಿದ್ದಾನೆ.

ಕನ್ನಮಂಗಲದ ನಿವಾಸಿ ಶ್ರೀಕನ್ಯಾ ಪುತ್ರ ಸುಹಾಸ್ (7) ಮೃತ ಬಾಲಕ. ಶಾಲೆಗೆ ರಜೆ ಹಿನ್ನಲೆಯಲ್ಲಿ ಸ್ನೇಹಿತರ ಜತೆ ನಿರ್ಮಾಣ ಹಂತದ ಕಟ್ಟಡದ ಬಳಿ ಆಟವಾಡಲು ಬುಧವಾರ ಬೆಳಗ್ಗೆ ಸುಹಾಸ್ ತೆರಳಿದ್ದಾಗ ಅನಾಹುತ ಸಂಭವಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಮಂಗಲದಲ್ಲಿ ಹಾಲು ಉತ್ಪಾದಕರ ಸಂಘವು 2 ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದು, ಲಿಫ್ಟ್ೃ ಅಳವಡಿಸಲು 5 ಅಡಿ ಅಳದ ಗುಂಡಿ ತೆಗೆಯಲಾಗಿತ್ತು. ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಇಂದಾಗಿ ನೀರು ತುಂಬಿತ್ತು. ಇತ್ತ ಮಳೆ ಕಾರಣಕ್ಕೆ ಶಾಲೆಗಳಿಗೆ ರಜೆ ಹಿನ್ನಲೆಯಲ್ಲಿ ಕಟ್ಟಡದ ಬಳಿ ಗೆಳೆಯರ ಜತೆ ಸುಹಾಸ್ ಆಟವಾಡಲು ತೆರಳಿದ್ದ. ಆಯ ತಪ್ಪಿ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಗುಂಡಿಗೆ ಸುಹಾಸ್ ಬೀಳುತ್ತಿದ್ದಂತೆ ಜತೆಯಲ್ಲಿ ಸ್ನೇಹಿತರು ಜೋರಾಗಿ ಕೂಗಿಕೊಂಡಿದ್ದಾರೆ. ಮಕ್ಕಳ ಕೂಗಾಟಕ್ಕೆ ಸ್ಥಳೀಯರು ಸ್ಪಂದಿಸಿಲ್ಲ. ಕೆಲವರ ಬಳಿ ಹೋಗಿ ಮಕ್ಕಳು ಹೇಳಿದ್ದಾರೆ. ಗುಂಡಿ ಬಳಿಗೆ ಧಾವಿಸಿ ರಕ್ಷಿಸುವ ವೇಳೆಗೆ ಕಾಲ ಮಿಂಚಿ ಹೋಗಿತ್ತು.

ಕೋಲಾರ ಜಿಲ್ಲೆ ಮುಳುಬಾಗಿಲು ತಾಲೂಕಿನ ಶ್ರೀಕನ್ಯಾ, ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಪತಿಯಿಂದ ಪ್ರತ್ಯೇಕಗೊಂಡು ಮಗ ಜತೆ ನೆಲೆಸಿದ್ದರು. ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಬುಧವಾರ ಬೆಳಗ್ಗೆ ಮಗನನ್ನು ಮನೆಯಲ್ಲಿ ಬಿಟ್ಟು ಎಂದಿನಂತೆ ತಾಯಿ ಕೆಲಸಕ್ಕೆ ತೆರಳಿದ್ದಾಗ ಅನಾಹುತ ಸಂಭವಿಸಿದೆ. ಈ ಸಂಬಂಧ ಕನ್ನಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸೊಣ್ಣಪ್ಪ ಹಾಗೂ ನಿರ್ಮಾಣ ಹಂತದ ಕಟ್ಟಡದ ಮೇಲುಸ್ತುವಾರಿ ಅನಿಲ್ ವಿರುದ್ಧ ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net